ಸಾರಾಂಶ
ವಿದ್ಯುತ್ ದೀಪಗಳ ಅಳವಡಿಕೆ, ಚರಂಡಿ ಹಾಗೂ ಒಳಚರಂಡಿಗಳ ನಿರ್ಮಾಣ ಹಾಗೂ ನಿರ್ವಹಣೆ, ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಮುಂತಾದ ಸಾಮಾಜಿಕ ಕಾರ್ಯಗಳ ಮೂಲಕ ಅರಸೀಕೆರೆ ನಗರದ 31ನೇ ವಾರ್ಡ್ ಸದಸ್ಯೆ ಸುಜಾತ ರಮೇಶ್ ಮನೆ ಮಾತಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ, ನಗರಸಭೆಯಲ್ಲಿ ಹಣವಿಲ್ಲ ಏಕಾದರೂ ನಗರಸಭೆ ಸದಸ್ಯನಾಗಿದ್ದೇನೋ ಎಂದು ಸಬೂಬು ಹೇಳುತ್ತಾ ದಿನ ದೊಡುತ್ತಾ ಬರುತ್ತಿರುವ ನಗರಸಭೆ ಸದಸ್ಯರ ನಡುವೆಯೂ ಕೆಲ ನಗರಸಭೆ ಸದಸ್ಯರು ಅವರದೇ ಆದ ವೈಯಕ್ತಿಕ ವರ್ಚಸ್ಸು ಮತ್ತು ಕಾರ್ಯವೈಖರಿಯಿಂದ ತಮ್ಮ ವಾರ್ಡಿನ ಮತದಾರರ ಮೆಚ್ಚುಗೆಗೆ ಪಾತ್ರರಾಗಿರುವವರನ್ನು ನಾವು ಕಂಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ ನಗರದ 31ನೇ ವಾರ್ಡ್ ಸದಸ್ಯೆ ಸುಜಾತ ರಮೇಶ್ ತಮ್ಮ ಸಾಮಾಜಿಕ ಕಳಕಳಿ ಉಳ್ಳ ಸೇವಾ ಮನೋಭಾವದಿಂದ ತಮ್ಮ ವಾರ್ಡಿನ ಜನತೆಗೆ ಮಾತ್ರವಲ್ಲ ನಗರಸಭೆಯ ಇತರ ಸದಸ್ಯರಿಗೆ ಮಾದರಿಯಾಗಿದ್ದಾರೆ. ವಾರ್ಡಿನ ಜನತೆಗೆ ನೀರಿನ ಸಮಸ್ಯೆ ಕಾಡದ ರೀತಿ ನೋಡಿಕೊಳ್ಳುವುದು ಸೇರಿದಂತೆ ರಸ್ತೆಗಳ ಅಭಿವೃದ್ಧಿ ಚರಂಡಿ ಹಾಗೂ ಒಳಚರಂಡಿಗಳ ನಿರ್ಮಾಣ ಹಾಗೂ ನಿರ್ವಹಣೆ ವಿದ್ಯುತ್ ದೀಪಗಳ ಅಳವಡಿಕೆ ಹೀಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆಯಾ ವಾರ್ಡಿನ ಸದಸ್ಯರ ಜವಾಬ್ದಾರಿ ಮಾತ್ರವಲ್ಲ, ಕರ್ತವ್ಯವೂ ಹೌದು. ಆದರೆ ಈ ಬಗ್ಗೆ ಕನಿಷ್ಠ ಕಾಳಜಿಯನ್ನು ತೊರದ ಕೆಲವು ಸದಸ್ಯರು ತಮಗೆ ಮತ ಹಾಕಿ ನಗರಸಭೆಗೆ ಕಳುಹಿಸಿಕೊಟ್ಟ ಮತದಾರರಿಂದಲೇ ಛೀಮಾರಿ ಹಾಕಿಸಿಕೊಳ್ಳುತ್ತಿರುವುದು ನಗರದ ಕೆಲವು ಬಡಾವಣೆಗಳ ಜನತೆಯನ್ನು ಮಾತನಾಡಿಸಿದರೆ ವಾಸ್ತವದ ಸಂಗತಿ ಬೆಳಕಿಗೆ ಬರುತ್ತದೆ.ಈ ನಡುವೆ ನಗರದ 31ನೇ ವಾರ್ಡನ ಮತದಾರರು ತಾವು ಮತ ನೀಡಿ ನಗರಸಭೆಗೆ ಕಳಿಸಿಕೊಟ್ಟ ಸದಸ್ಯೆ ಸುಜಾತ ರಮೇಶ್ ಬಗ್ಗೆ ಅಕ್ಕರೆ ಮಾತ್ರವಲ್ಲ ಅಭಿಮಾನದ ಮಾತುಗಳನ್ನಾಡುವುದನ್ನ ಕೇಳಬಹುದು. ಇದಕ್ಕೆ ಸುಜಾತ ರಮೇಶ್ ಅರ್ಹರು ಕೂಡ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದ, ಅನಿರೀಕ್ಷಿತವಾಗಿ ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಸುಜಾತ ರಮೇಶ್ ಬಹುಬೇಗನೆ ಅರ್ಥೈಸಿಕೊಂಡ ವಿಷಯವೇನೆಂದರೆ ನಗರಸಭೆಯಿಂದ ದೊರೆಯುವ ಅನುದಾನದಿಂದ ವಾರ್ಡಿನ ಕೆಲಸ ಮಾಡಬಹುದು ಆದರೆ ಇಷ್ಟೇ ಮಾಡಿದರೆ ಅದು ಜನಸೇವೆಯಾಗುವುದಿಲ್ಲ ಎಂದು ತಮ್ಮ ಪತಿ ರಮೇಶ್ ಅವರೊಂದಿಗೆ ಚರ್ಚಿಸಿ ನಗರಸಭೆಯಿಂದ ದೊರೆಯುವ ಅನುದಾನವನ್ನು ಮೀರಿ ವಾರ್ಡಿನ ಜನತೆಯ ಮನೆ ಹಾಗೂ ಮನವನ್ನು ತಲುಪುವ ಕೆಲಸ ಮಾಡಬೇಕು ಎಂದು ಪಣತೊಟ್ಟಿದ್ದು, ಆ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದಾರೆ.