ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಮಾ.18ರಿಂದ 26ರವರೆಗೆ ನಡೆಯಲಿದೆ. ಭವ್ಯ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ದೇವಣ್ಣ ಬಂಗೇನ್ನವರ ತಿಳಿಸಿದರು.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರತಿ 5 ವರ್ಷಕ್ಕೊಮ್ಮೆ ಅತ್ಯಂತ ಸಡಗರ ಸಂಭ್ರಮದಿಂದ ಜಾತ್ರಾ ಮಹೋತ್ಸವ ನಡೆಯಲಿದೆ. ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಹಾಗೂ ಪೂಜಾರಿಗಳ ಸಮ್ಮುದಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಕ್ತರ ಅನುಕೂಲಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಭಂಡಾರ ರಹಿತ ಜಾತ್ರೆಯಲ್ಲಿ ಹೊನ್ನಾಟವೇ ವಿಶೇಷ. ಭಂಡಾರ ರಹಿತ ಜಾತ್ರೆ ಇದಾಗಿದ್ದು, ಹೊನ್ನಾಟ ನೋಡುವುದೇ ಸೊಗಸು. ಇಂಥ ಭವ್ಯ ಹೊನ್ನಾಟವನ್ನು ಭಕ್ತರು ಕಣ್ತುಂಬಿಕೊಳ್ಳಬೇಕು. ಭಂಡಾರ ಇಲ್ಲದೇ ನಡೆಯುವ ಏಕೈಕ ಜಾತ್ರೆ ನಮ್ಮದು. ಈ ಮಾದರಿ ಜಾತ್ರೆ ಇದಾಗಿದೆ ಎಂದರು.ಮಾ.18ರಂದು ರಾತ್ರಿ 12 ಗಂಟೆ ಸುಮಾರಿಗೆ ಗ್ರಾಮದ ಲಕ್ಷ್ಮೀ ಗಲ್ಲಿಯಲ್ಲಿರುವ ಬಡಿಗೇರ ಮನೆಯಿಂದ ಶ್ರೀ ಮಹಾಲಕ್ಷ್ಮೀ ದೇವಿಯ ವೈಭವದ ಹೊನ್ನಾಟ ಆರಂಭಗೊಳ್ಳಲಿದೆ. ಸಂಪ್ರದಾಯದಂತೆ ದೇವಿಯ ಉಡಿ ತುಂಬುವ ಕಾರ್ಯಕ್ರಮದೊಂದಿಗೆ ಹೊನ್ನಾಟ ಶುರುವಾಗಲಿದೆ. ಇಡೀ ರಾತ್ರಿ ಭಂಡಾರ ರಹಿತ ಹೊನ್ನಾಟ ನಡೆದು ಮಾ.19ರಂದು ಸಂಜೆ 8 ಗಂಟೆವರೆಗೆ ನಿರಂತರವಾಗಿ ಹೊನ್ನಾಟ ನಡೆಯಲಿದೆ. ನಂತರ 8 ಗಂಟೆ ಸುಮಾರಿಗೆ ಗ್ರಾಮದ ದೇವಸ್ಥಾನದಲ್ಲಿ ದೇವಿಯ ಪ್ರತಿಷ್ಠಾಪನೆ ಆಗುವುದು. ಈ ವರ್ಷ ನಡುಮನೆ ಜಾತ್ರೆ ಇದ್ದು, ಹೀಗಾಗಿ ದೇವಿಯನ್ನು ಮಂದಿರದಲ್ಲಿಯೇ ಪ್ರತಿಷ್ಠಾಪಿಸಲಾಗುತ್ತದೆ. ಮಾ.21ರಂದು ಧಾರ್ಮಿಕ ವಿಧಿ ವಿಧಾನಗಳಿಂದ ಸುಳೇಭಾವಿ ಗ್ರಾಮಸ್ಥರಿಂದ ಉರುಳು ಸೇವೆ ಮತ್ತು ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಮಾ.26ರಂದು ರಾತ್ರಿ 10ಗಂಟೆ ಸುಮಾರಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು.
ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ದೇವಿ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲಲು ಭಕ್ತರ ಅನುಕೂಲಕ್ಕಾಗಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸರದಿ ಸಾಲಿನಲ್ಲಿ ನಿಲ್ಲಲು ಬ್ಯಾರಿಕೇಡ್ ಅಳವಡಿಸಲಾಗಿದೆ. 9. ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಟ್ರಸ್ಟ್ ಸದಸ್ಯ ಬಸನಗೌಡ ಹುಂಕರಿಪಾಟೀಲ ಮಾತನಾಡಿ, 9 ದಿನಗಳ ಕಾಲ ನಡೆಯುವ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆಯಲ್ಲಿ ಎಲ್ಲಿಯೂ ಬ್ಯಾನರ್‌ಗಳನ್ನು ಅಳವಡಿಸಲು ಅವಕಾಶ ಇಲ್ಲ. ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳಿಂದ ಗ್ರಾಮದ ಸೌಂದರ್ಯ ಹಾಳಾಗಬಾರದು, ಯಾರೂ ಪ್ರತಿಷ್ಠೆ ತೋರಿಸಬಾರದು ಎಂಬ ಕಾರಣಕ್ಕೆ ಹಲವಾರು ವರ್ಷಗಳಿಂದ ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಡಿಜೆ-ಡಾಲ್ಬಿಗಳನ್ನು ಹಚ್ಚಲು ಅವಕಾಶ ಇರುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಸದಸ್ಯರಾದ ಶಶಿಕಾಂತ ಸಂಗೊಳ್ಳಿ, ಅಣ್ಣಪ್ಪಪಾಟೀಲ, ದ್ಯಾಮಣ್ಣ ಮುರಾರಿ, ಬಾಳಕೃಷ್ಣ ಬಡಕಿ, ಕಲ್ಲಪ್ಪ ಲೋಲಿ, ಲಗಮಪ್ಪ ಗುಡದಪ್ಪಗೋಳ, ಮಾರುತಿ ರವಳಗೌಡ, ಕಲ್ಲಪ್ಪ ರಾಗಿ, ಭೈರಣ್ಣ ಪರೋಜಿ, ಮುರುಗೇಶ ಹಂಪಿಹೊಳಿ, ಸಂಭಾಜಿ ಯಮೋಜಿ, ವಿಠ್ಠಲ ಚೌಗುಲೆ, ಮಲ್ಲಪ್ಪ ಯರಝರವಿ, ಲಕ್ಷ್ಮಣ ಮಂಡು, ಕೃಷ್ಣಾ ಕಲ್ಲೂರ, ಮಾರುತಿ ರವಳಗೌಡರ, ಅನಂತ ಕವಡಿ, ಪೂಜಾರಿಗಳಾದ ಭೀಮಶಿ ಪೂಜಾರಿ, ರಾಮ ಪೂಜಾರಿ, ಲಕ್ಷ್ಮಣ ಪೂಜೇರಿ, ಯಲ್ಲಪ್ಪ ದ್ಯಾಮರಾಯಿ, ಭೈರೋಬಾ ಕಾಂಬಳೆ ಇದ್ದರು.