ಸಾರಾಂಶ
ಮೈಸೂರು, ಬೆಂಗಳೂರು ಪ್ರವಾಸದ ಬಳಿಕ ೧೪ ಸಿಬ್ಬಂದಿಗೆ ವಿಮಾನ ಯಾನ ಭಾಗ್ಯ!
ದುರ್ಗಾಕುಮಾರ್ ನಾಯರ್ ಕೆರೆಕನ್ನಡಪ್ರಭ ವಾರ್ತೆ ಸುಳ್ಯತನ್ನ ಸಂಸ್ಥೆಯ ೧೪ ಸಿಬ್ಬಂದಿಯನ್ನು ಮೈಸೂರು, ಬೆಂಗಳೂರು ಪ್ರವಾಸಕ್ಕೆ ಕರೆದೊಯ್ದ ಸುಳ್ಯದ ಐಸ್‌ಕ್ರೀಂ ಸಂಸ್ಥೆ, ಆ ಎಲ್ಲ ಸಿಬ್ಬಂದಿಯನ್ನು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದ ಮೂಲಕ ಕರೆ ತಂದು ಗಮನ ಸೆಳೆದಿದೆ.ಸುಳ್ಯದ ಕುರುಂಜಿಭಾಗ್‌ನಲ್ಲಿ ಕಳೆದ ೨೭ ವರ್ಷಗಳಿಂದ ಕಾರ್ಯಾಚರಿಸುತ್ತಿರುವ, ಐಸ್‌ಕ್ರೀಂ ಉದ್ಯಮದಲ್ಲಿ ಪ್ರಸಿದ್ಧವಾಗಿರುವ ಕೆ. ಪ್ರಭಾಕರನ್ ನಾಯರ್ ಮಾಲಕತ್ವದ ಸ್ವಾಗತ್ ಸಂಸ್ಥೆ ತನ್ನ ಸಿಬ್ಬಂದಿಯನ್ನು ವರ್ಷಕ್ಕೊಂದು ಬಾರಿ ಬೇರೆ ಬೇರೆ ಕಡೆ ಪ್ರವಾಸಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಿದೆ. ಆದರೆ ಈ ಬಾರಿ ಅವರಿಗೆ ವಿಮಾನ ಯಾನದ ವಿಶೇಷ ಅವಕಾಶವೂ ದೊರೆಯಿತು.
ಜೂನ್ ೨೦ರಂದು ೨೦ ಜನರಿರುವ ಈ ತಂಡ ಸುಳ್ಯದಿಂದ ಮಿನಿ ಬಸ್‌ನಲ್ಲಿ ಮೈಸೂರಿಗೆ ತೆರಳಿ ಅಲ್ಲಿ ಅರಮನೆ ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಬಳಿಕ ಬೆಂಗಳೂರಿಗೆ ತೆರಳಿದರು. ಬೆಂಗಳೂರಿನಲ್ಲೂ ಹಲವು ಸ್ಥಳಗಳನ್ನು ವೀಕ್ಷಣೆ ನಡೆಸಿದ ಬಳಿಕ ೧೪ ಮಂದಿ ಸಿಬ್ಬಂದಿಯನ್ನು ಬೆಂಗಳೂರು ಏರ್‌ಪೋರ್ಟ್‌ನಿಂದ ಮಂಗಳೂರಿಗೆ ವಿಮಾನದಲ್ಲಿ ಕಳುಹಿಸಿದರು. ಪ್ರಭಾಕರನ್ ನಾಯರ್ ಸೇರಿದಂತೆ ಇತರರು ಅದೇ ಮಿನಿ ಬಸ್‌ನಲ್ಲಿ ಸುಳ್ಯಕ್ಕೆ ಮರಳಿದರು. ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಿಬ್ಬಂದಿಯನ್ನು ಮತ್ತೊಂದು ವಾಹನದ ಮೂಲಕ ಸುಳ್ಯಕ್ಕೆ ಕರೆ ತರಲಾಯಿತು.ಸಂಸ್ಥೆಯ ಮಾಲಕ ಕೆ. ಪ್ರಭಾಕರನ್ ನಾಯರ್, ಅವರ ಪತ್ನಿ ಶಶಿಕಲಾ ಎಂ.ಆರ್., ಪುತ್ರ ಪ್ರಮೋದ್ ಕೆ., ಸೊಸೆ ಅರುಣಾ ಪಿ.ಜಿ., ಮೊಮ್ಮಕ್ಕಳಾದ ಆದಿತ್ಯ, ದೈವಿಕ್ ಈ ಪ್ರವಾಸದಲ್ಲಿ ಜೊತೆಗಿದ್ದರೆ, ಸಿಬ್ಬಂದಿ ಮತ್ತು ವಾಹನ ಚಾಲಕರಾದ ವಿಜಯ, ಚರಣ್ ಬಳ್ಪ, ಚರಣ್ ಎಲಿಮಲೆ, ತೇಜಸ್, ಚೇತನ್, ಪುರುಷೋತ್ತಮ್, ಯೋಗೀಶ್, ವೆಂಕಟ್ರಮಣ, ಪ್ರವೀಣ್, ಅಜಿತ್‌ಕುಮಾರ್, ವಾಮನ, ಭರತ್ ಕುಮಾರ್, ಯಶೋಧಾ, ತಿರುಮಲೇಶ್ವರಿ ಪ್ರವಾಸದ ಜೊತೆಗೆ ವಿಮಾನಯಾನದ ಅವಕಾಶ ಪಡೆದರು..................ನನ್ನ ಸಂಸ್ಥೆಯ ಯಶಸ್ಸಿಗೆ ಸಿಬ್ಬಂದಿಯ ಶ್ರಮವೂ ಕಾರಣ. ಮುಂದೆ ಈ ಸಿಬ್ಬಂದಿಗೆ ವಿಮಾನದಲ್ಲಿ ಹೋಗುವ ಅವಕಾಶ ಸಿಗುತ್ತದೆಯೋ ಗೊತ್ತಿಲ್ಲ. ಆದರೆ ವಿಮಾನದಲ್ಲಿ ಹೋಗಬೇಕೆಂಬ ಕನಸು ಅವರಲ್ಲಿರುತ್ತದೆ. ಅದನ್ನು ನಮ್ಮ ಸಂಸ್ಥೆ ಈಡೇರಿಸಿಕೊಟ್ಟಿದೆ.। ಪ್ರಭಾಕರ ನಾಯರ್, ಸ್ವಾಗತ್ ಸಂಸ್ಥೆಯ ಮಾಲಕರು