ರೈತರು ಕೃಷಿ ಅಧಿಕಾರಿಗಳು, ಮಾದರಿ ರೈತರ ಸಲಹೆ ಪಡೆಯಲಿ:ತಿಮ್ಮೇಗೌಡ

| Published : Nov 29 2024, 01:00 AM IST

ಸಾರಾಂಶ

ಗ್ರಾಮಾಂತರ ಪ್ರದೇಶದ ರೈತ ಭಾಂದವರಿಗೆ ಕೃಷಿ ಚಟುವಟಿಕೆಯ ಬಗ್ಗೆ ಅಪಾರ ಅನುಭವವಿದೆ.

ದೊಡ್ಡಕೊಪ್ಪಲು ಪ್ರಗತಿಪರ ರೈತನ ಜಮೀನಿನಲ್ಲಿ ರಾಸಿತಾರ ಹೈಬ್ರಿಡ್ ಭತ್ತದ ಬೆಳೆಯ ಕ್ಷೇತ್ರೋತ್ಸವ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಮುನ್ನ ಇಲಾಖೆಯ ಅಧಿಕಾರಿಗಳು ಮತ್ತು ಮಾದರಿ ರೈತರ ಸಲಹೆ ಹಾಗೂ ಮಾರ್ಗದರ್ಶನ ಪಡೆಯಬೇಕು ಎಂದು ಮಾಜಿ ಪ್ರಧಾನ ಡಿ.ಎಸ್. ತಿಮ್ಮೇಗೌಡ ಹೇಳಿದರು.ತಾಲೂಕಿನ ದೊಡ್ಡಕೊಪ್ಪಲು ಗ್ರಾಮದ ಪ್ರಗತಿಪರ ರೈತ ಸುಮಂತ್ ಅವರ ಜಮೀನಿನಲ್ಲಿ ರಾಸಿ ಸೀಡ್ಸ್ ಖಾಸಗಿ ಕಂಪನಿಯವರು ಅಭಿವೃದ್ಧಿಪಡಿಸಿರುವ ರಾಸಿತಾರ ಹೈಬ್ರಿಡ್ ಭತ್ತದ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗ್ರಾಮಾಂತರ ಪ್ರದೇಶದ ರೈತ ಭಾಂದವರಿಗೆ ಕೃಷಿ ಚಟುವಟಿಕೆಯ ಬಗ್ಗೆ ಅಪಾರ ಅನುಭವವಿದೆ. ಆದರೆ ಅವರಿಗೆ ತಾಂತ್ರಿಕತೆಯ ಕೊರತೆ ಇರುವುದರಿಂದ ಇದನ್ನು ಸರ್ಕಾರ ಮನಗಂಡು ಅಗತ್ಯ ತರಬೇತಿ ನೀಡಬೇಕು ಎಂದರು.ಪ್ರತಿಯೊಬ್ಬ ರೈತರೂ ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸುವುದರ ಜತೆಗೆ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸುವ ಬದಲು ಸಾವಯವ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ತೆಗೆದು ಉತ್ತಮ ಲಾಭ ಗಳಿಸಬಹುದು ಎಂದು ಸಲಹೆ ನೀಡಿದರು.ಪ್ರಗತಿಪರ ರೈತ ವೇದಾಂತ್ ಮಾತನಾಡಿ, ರೈತರಿಗೆ ಬಿತ್ತನೆ ಭತ್ತ ನೀಡುವ ಖಾಸಗಿ ಕಂಪನಿಗಳು ಬೆಳೆ ಬೆಳೆಯುವ ಬಗೆ ಹಾಗೂ ತಳಿ ಸಂರಕ್ಷಣೆಯ ಮಾಹಿತಿ ನೀಡಿ ಇದರೊಂದಿಗೆ ಅವರು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು ಎಂದು ತಿಳಿಸಿದರು.ನಿವೃತ್ತ ಪ್ರಾಂಶುಪಾಲ ಡಿ.ಕೆ. ಸೋಮಶೇಖರ್, ರಾಸಿ ಸೀಡ್ಸ್ ಕಂಪನಿಯ ಮಾರ್ಗದರ್ಶಕ ಚಿಕ್ಕಣ್ಣ ಮಾತನಾಡಿ, ಆಧುನಿಕ ಕೃಷಿ ಪದ್ಧತಿ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಗ್ರಾಮದ ಯಜಮಾನರಾದ ಬಸವೇಗೌಡ, ಪಾರ್ಥೇಗೌಡ, ಪಿಕಾರ್ಡ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಕೆಂಪೇಗೌಡ, ಮುಖಂಡರಾದ ಸುಮಂತ್, ರೈತ ಮಹಿಳೆ ಪುಷ್ಪ, ರಾಸಿ ಸೀಡ್ಸ್ ಕಂಪನಿಯ ಸಿಬ್ಬಂದಿಗಳಾದ ಶರತ್, ದೊಡ್ಡೇಗೌಡ, ಮನೋಜ್ ಮತ್ತು ರೈತರು ಇದ್ದರು.