ಹಂಸನಗದ್ದೆ ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

| Published : May 15 2025, 01:50 AM IST

ಸಾರಾಂಶ

ಶಿಕ್ಷಣ ಇಲಾಖೆ ಮಾಡಬೇಕಾದ ಕೆಲಸವನ್ನು ವನವಾಸಿ ಕಲ್ಯಾಣ ಸಂಸ್ಥೆ ಮತ್ತು ಜೀವನ ವಿಕಾಸ ಟ್ರಸ್ಟ್ ಸೇರಿ ಇಲಾಖೆಗೆ ಸ್ಫೂರ್ತಿದಾಯಕವಾಗುವಂತೆ ಮಾಡಿದೆ

ಯಲ್ಲಾಪುರ: ಶಿಕ್ಷಣ ಇಲಾಖೆ ಮಾಡಬೇಕಾದ ಕೆಲಸವನ್ನು ವನವಾಸಿ ಕಲ್ಯಾಣ ಸಂಸ್ಥೆ ಮತ್ತು ಜೀವನ ವಿಕಾಸ ಟ್ರಸ್ಟ್ ಸೇರಿ ಇಲಾಖೆಗೆ ಸ್ಫೂರ್ತಿದಾಯಕವಾಗುವಂತೆ ಮಾಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಹೇಳಿದರು.ತಾಲೂಕಿನ ಇಡಗುಂದಿ ಗ್ರಾಪಂನ ಹಂಸನಗದ್ದೆ ಸರ್ಕಾರಿ ಪ್ರೌಢಶಾಲೆಯಲ್ಲಿ ಜೀವನ ವಿಕಾಸ್ ಟ್ರಸ್ಟ್ ಆಯೋಜಿಸಿದ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಹಾಗೂ ಜೀವನ್ ವಿಕಾಸ್ ಟ್ರಸ್ಟ್‌ ಅಧ್ಯಕ್ಷ ಶಾಂತರಾಮ ಸಿದ್ಧಿ ಮಾತನಾಡಿ, ಸಂಸ್ಥೆಯು ಶಾಲಾ ರಜಾ ದಿನಗಳಲ್ಲಿ ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣದ ಕೆಲಸ ಮಾಡುವ ದೃಷ್ಟಿಯಲ್ಲಿ ಇಂತಹ ಅನೇಕ ಶಿಬಿರಗಳನ್ನು ನಡೆಸುತ್ತದೆ. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮೌಲ್ಯಯುತ ಜೀವನದ ಪದ್ಧತಿಗಳನ್ನು ಕಲಿಸಿಕೊಟ್ಟರೆ ಅವರು ಮುಂದೆ ರಾಷ್ಟ್ರಧರ್ಮಗಳ ಕುರಿತು ಗೌರವ ಹೊಂದಿ ಸಮಾಜಮುಖಿ ಕೆಲಸಗಳನ್ನು ಮಾಡುವ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳುತ್ತಾರೆ ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ರಾಯ ಭಟ್ಟ, ಸಾಮಾಜಿಕ ಕಾರ್ಯಕರ್ತ ಎಸ್.ಎನ್ ಭಟ್ಟ ಏಕಾನ, ಶಿಕ್ಷಣ ಸಂಯೋಜಕ ಸಂತೋಷ ಜಗಳೂರು, ಮಂಜುನಾಥ ಸಿದ್ದಿ ಲಿಂಗದಬೈಲ್, ಶಂಕರ್ ಸಿದ್ದಿ ಬಳಗಾರ್ ಉಪಸ್ಥಿತರಿದ್ದರು. ಭಾಸ್ಕರ್ ಸಿದ್ದಿ ಗುಂದ ಸ್ವಾಗತಿಸಿದರು. ಜಾನು ಗಂಗಾರಾಮ್ ಕೊಕ್ರೆ ವಂದಿಸಿದರು. ಮಂಜುಳಾ ಸಿದ್ಧಿ ನಿರ್ವಹಿಸಿದರು. ೩ ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ತಾಲೂಕಿನ ೯ ಶಾಲೆಗಳ ೪೦ ಮಕ್ಕಳು ಭಾಗವಹಿಸಿದ್ದರು. ತರಬೇತುದಾರರಾಗಿ ಲಕ್ಷ್ಮಣ್ ಲಾಂಬೂರೇ, ದೀಪ ಸಿದ್ದಿ, ರೂಪ ಸಿದ್ದಿ, ಸಂಗೀತ ಸಿದ್ದಿ, ಗಂಗಾ ಕೊಳಾಪಟ್ಟೆ ಮುಂತಾದ ಶಿಕ್ಷಕರು ಮಕ್ಕಳಿಗೆ ಬೌದ್ಧಿಕ ಹಾಗೂ ಶಾರೀರಿಕ ಶಿಕ್ಷಣವನ್ನು ನೀಡಿದರು.

ಹಂಸನಗದ್ದೆ ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು.