ಸಾರಾಂಶ
ಮಕ್ಕಳ ಭೌದ್ಧಿಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿ ಎಂದು ಲಿಖಿತ್ ಹೇಳಿದರು. ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಮಕ್ಕಳ ಭೌದ್ಧಿಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ಸಾಂದೀಪನಿ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಲಿಖಿತ್ ತಿಳಿಸಿದರು.ಸಮೀಪದ ಸಾಂದೀಪನಿ ಶಾಲೆಯಲ್ಲಿ ಯಶೋದೆ ರಂಗಶಿಕ್ಷಣ ಟ್ರಸ್ಟ್ ವತಿಯಿಂದ ಕಳೆದ ಇಪ್ಪತ್ತು ದಿನಗಳಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯು ಅವಶ್ಯಕವೆಂದರು, ಇದರಿಂದಾಗಿ ಮಕ್ಕಳ ಭೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಕಲಿಸುವ ಶಿಬಿರಗಳು ಇತೀಚೆಗೆ ಕಡಿಮೆಯಾಗುತ್ತದೆ. ಅದು ಹೆಚ್ಚಾಗಬೇಕು ಎಂದರು.ವಕೀಲರಾದ ಶ್ರೀನಿಧಿ ಮಾತನಾಡಿ, ವರ್ಷವಿಡೀ ತರಗತಿಯಲ್ಲಿ ಪಾಠಪ್ರವಚನ ಕೇಳಿದ ಮಕ್ಕಳಿಗೆ ಇಂತಹ ಶಿಬಿರಗಳು ಮಕ್ಕಳ ಚಟುವಟಿಕೆಗಳಲ್ಲಿ ಬದಲಾವಣೆ ತರಲಿವೆ. ಸಾಂಸ್ಕೃತಿಕ ಚಟುವಟಿಕೆಗಳೊಡನೆ ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಹಾಗೂ ಕಲಿಸುವ ಕಾರ್ಯವಾಗಬೇಕು ಎಂದರು.
ವೇದಿಕೆಯಲ್ಲಿ ಪತ್ರಕರ್ತರಾದ ಎಸ್.ಮಹೇಶ್, ವೈದ್ಯರಾದ ರಾಕೇಶ್ ಪಟೇಲ್, ಕಾಫಿ ಬೆಳೆಗಾರ ಸಜನ್ ಪೂವಯ್ಯ, ಶಿಕ್ಷಕಿ ವಾಸಂತಿ ಕಾರ್ಯಕ್ರಮದ ಉಪಸ್ಥಿತರಿದ್ದರು.ಶಿಬಿರದಲ್ಲಿ ಯಶೋಧೆ ರಂಗ ಟ್ರಸ್ಟ್ನ ನಿಶಾಂತ್ ಮುತ್ತಣ್ಣ, ಗಣೇಶ್ ಭೀಮನಕೋಣೆ, ಸಿದ್ದಾನ್ ವಿಜಯ್, ಮಾಲಾಶ್ರೀ ಗಾವಂಕರ್, ಕಾಜು ಗುತ್ತಲ್ ಅವರುಗಳು ಕಲಿಸಿ ಕೊಟ್ಟ ಹಾಡು ಮತ್ತು ನಾಟಕಗಳನ್ನು ಪ್ರದರ್ಶಿಸಿ ಗಮನ ಸೆಳೆದರು.