ಸಾರಾಂಶ
10 ದಿನಗಳ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ರೂಪ ಸುರೇಶ್ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬೇಸಿಗೆ ಶಿಬಿರಗಳು ಮಕ್ಕಳ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಜ್ಞಾನವನ್ನು ಹೆಚ್ಚಿಸಲು ಒಂದು ಉತ್ತಮ ಅವಕಾಶವಾಗಿದ್ದು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಮನೋರಂಜನಾತ್ಮಕವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಹೊಳಲ್ಕೆರೆಯ ಸಮಾಜ ಸೇವಕಿ ರೂಪ ಸುರೇಶ್ ಅಭಿಪ್ರಾಯಪಟ್ಟರು.ನಗರದ ತುರುವನೂರು ರಸ್ತೆಯ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ಅಯೋಜಿಸಿರುವ 10 ದಿನಗಳ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೇಸಿಗೆ ರಜೆಯಲ್ಲಿ ಬೇಸಿಗೆ ಶಿಬಿರದ ಹೆಸರಿನಲ್ಲಿ ಮಕ್ಕಳಿಗಾಗಿ ಮತ್ತೊಂದು ಶಾಲೆ ತೆರೆಯದೆ ಮಕ್ಕಳ ಮನೋವಿಕಾಸ, ಸ್ವದೇಶಿ ಭಾವ ಜಾಗೃತಿ ಮೂಡಿಸಿ ಮಕ್ಕಳನ್ನು ಮುಂದಿನ ಸತ್ಪ್ರಜೆಗಳನ್ನಾಗಿ ರೂಪಿಸುವಂತಾಗಬೇಕು ಎಂದು ಹೇಳಿದರು.ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷೆ ಮಮತ ಬೇದ್ರೆ ಮಾತನಾಡಿ, ಬೇಸಿಗೆ ರಜೆಯಲ್ಲಿ ಪೋಷಕರು ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳಲು ಮಕ್ಕಳನ್ನು ಅಜ್ಜ-ಅಜ್ಜಿಯ ಊರಿಗೆ ಕಳಿಸುವುದು ವಾಡಿಕೆ. ಅಜ್ಜ ಅಜ್ಜಿಯರ ಜೊತೆ ಕಾಲ ಕಳೆಯಲು ಮಕ್ಕಳಿಗೂ ಇಷ್ಟ. ಆದರೆ ಬೇಸಿಗೆ ಶಿಬಿರಗಳಲ್ಲಿ ದೊರಕುವ ಮಕ್ಕಳಲ್ಲಿನ ಆತ್ಮವಿಶ್ವಾಸ, ಮಕ್ಕಳ ಮನೋ ವಿಕಾಸದ ವಾತಾವರಣ ಅಲ್ಲಿ ಸಿಗುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಮಕ್ಕಳ ಕಲಿಕೆಯ ವಯಸ್ಸನ್ನು ಹಾಳುಮಾಡದೆ ಉತ್ತಮ ಶಿಬಿರಕ್ಕೆ ಕಳುಹಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅವಕಾಶ ಮಾಡಿಕೊಡಬೇಕು ಎಂದರು.
ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಮಕ್ಕಳ ಶಿಬಿರ ಪ್ರಾರಂಭಗೊಂಡು ಶಿಬಿರದ ಮುಖ್ಯ ಶಿಕ್ಷಕಿ ನಾಗಲತಾ ಮಾತಾಜೀ ಮಕ್ಕಳಿಗೆ ಶಿಬಿರದ ನಿಯಮಗಳನ್ನು ತಿಳಿಸಿ ಅಭಿನಯ ಗೀತೆ, ಪ್ರಾರ್ಥನೆ, ಶ್ಲೋಕಗಳನ್ನು ಹೇಳಿಕೊಟ್ಟರು.ಈ ವೇಳೆ ಶಿಬಿರದ ಆಯೋಜಕರಾದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅದ್ಯಕ್ಷ ರವಿ ಕೆ.ಅಂಬೇಕರ್, ಗೌರವಾಧ್ಯಕ್ಷ ಸತ್ಯಣ್ಣ ಆರ್, ಹಿರಿಯ ಯೋಗ ಸಾಧಕರಾದ ವನಜಾಕ್ಷಮ್ಮ, ರೇಣುಕಮ್ಮ, ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಚಾರ್, ಬಾಲಗೋಕುಲ ಕಾರ್ಯಕ್ರಮಗಳ ಜಿಲ್ಲಾ ಸಂಯೋಜಕ ದೇವರಾಜ್ ಕೋಟ್ಲ ಹಾಗೂ ಶಿಬಿರದ ಮಕ್ಕಳು ಹಾಜರಿದ್ದರು.