ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಹದಾರಿ

| Published : Apr 04 2025, 12:46 AM IST

ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಹದಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಹದಾರಿಗಳಿದ್ದಂತೆ, ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು. ಮಾನಸಿಕ ಆಟೋಟಗಳು, ಕ್ರಾಫ್ಟ್, ಚಿತ್ರಕಲೆ, ಕಥೆ ಕಟ್ಟುವುದು, ಕವನ ರಚಿಸುವುದು, ಹೊರ ಸಂಚಾರ ಮುಂತಾದ ಮಹತ್ವದ ಅಂಶಗಳನ್ನು ಒಳಗೊಂಡಿರುವ ಈ ಬೇಸಿಗೆ ಶಿಬಿರ ಮಕ್ಕಳಿಗೆ ತುಂಬಾ ಸಹಕಾರಿಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಹದಾರಿಗಳಿದ್ದಂತೆ, ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು.

ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ಹಾಗೂ ಭೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರತ್ನಮ್ಮ ಬುಲ್ ಬುಲ್ಸ್ ಘಟಕದ ವತಿಯಿಂದ ಶಾಲಾವರಣದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸದಾ ಮಕ್ಕಳನ್ನು ಕ್ರಿಯಾಶೀಲರನ್ನಾಗಿಡಲು ಸಾಧ್ಯ. ಮಾನಸಿಕ ಆಟೋಟಗಳು, ಕ್ರಾಫ್ಟ್, ಚಿತ್ರಕಲೆ, ಕಥೆ ಕಟ್ಟುವುದು, ಕವನ ರಚಿಸುವುದು, ಹೊರ ಸಂಚಾರ ಮುಂತಾದ ಮಹತ್ವದ ಅಂಶಗಳನ್ನು ಒಳಗೊಂಡಿರುವ ಈ ಬೇಸಿಗೆ ಶಿಬಿರ ಮಕ್ಕಳಿಗೆ ತುಂಬಾ ಸಹಕಾರಿಯಾಗಿದೆ. ರಜೆಯಲ್ಲಿ ಬೇಸಿಗೆ ಶಿಬಿರ ಹೊರತುಪಡಿಸಿ ಶಿಕ್ಷಕರು ನೀಡಿದ ಮನೆಗೆಲಸವನ್ನು ಅಚ್ಚುಕಟ್ಟಾಗಿ ಮಾಡುವುದರ ಜೊತೆಗೆ ಕೌಟುಂಬಿಕ ಮೌಲ್ಯಗಳನ್ನು ವೃದ್ಧಿಸಿಕೊಳ್ಳಬೇಕಿದೆ. ಹಿರಿಯರಿಗೆ ನಮಸ್ಕರಿಸುವುದು, ಪ್ರತಿನಿತ್ಯ ತಂದೆ, ತಾಯಿಯರಿಗೆ ನಮಸ್ಕರಿಸುವುದನ್ನು ರೂಢಿಸಿಕೊಳ್ಳಬೇಕು. ಹೆತ್ತವರೇ ನಮಗೆಲ್ಲಾ ಪ್ರತ್ಯಕ್ಷ ದೇವರುಗಳು. ನಮ್ಮ ಬೆಳವಣಿಗೆ ಹಾಗೂ ವಿಕಸನಕ್ಕಾಗಿ ಇಡೀ ತಮ್ಮ ಜೀವನವನ್ನೇ ಮುಡಿಪಾಗಿಡುವ ಹೆತ್ತವರನ್ನು ಗೌರವ, ಪ್ರೀತಿಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ಭೈರಾಪುರ ಶಾಲೆ ಇಲ್ಲಿಯ ಶಿಕ್ಷಕರು ಹಾಗೂ ಪೋಷಕರ ಸಹಕಾರದೊಂದಿಗೆ ಸ್ಕೌಟ್ಸ್-ಗೈಡ್ಸ್, ಕ್ರೀಡೆ, ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶೈಕ್ಷಣಿಕ ಚಟವಟಿಕೆಗಳ ಗುಣಾತ್ಮಕ ಪ್ರಗತಿಯ ಫಲವಾಗಿ ತಾಲೂಕು ಮಟ್ಟದಲ್ಲಿ ಅತ್ಯುತ್ತಮ ಶಾಲಾ ಪ್ರಶಸ್ತಿಗೆ ಭಾಜನವಾಗಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. ಮುಖ್ಯ ಶಿಕ್ಷಕಿ ಹಾಗೂ ಫ್ಲಾಕ್ ಲೀಡರ್ ಎಂ. ಎಲ್. ಎಲಿಜಬೆತ್ ಅವರ ಮಾರ್ಗದರ್ಶನದಲ್ಲಿ ರಾಜ್ಯಪುರಸ್ಕಾರ, ರಾಜ್ಯಮಟ್ಟದ ಕಬ್ಸ್-ಬುಲ್ ಬುಲ್ಸ್ ಉತ್ಸವ, ರಾಜ್ಯಮಟ್ಟದ ಗೀತಗಾಯನ ಮುಂತಾದ ಶಿಬಿರಗಳಲ್ಲಿ ಭಾಗವಹಿಸಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬೇಸಿಗೆ ಶಿಬಿರದಿಂದ ಮಕ್ಕಳು ಪಠ್ಯೇತರ ಕಲಿಕೆಯನ್ನು ಸಾಧಿಸುವುದರೊಂದಿಗೆ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಲು ಅನುಕೂಲಕರವಾಗಿದೆ ಎಂದರು.

ಶಾಲಾ ಮುಖ್ಯ ಶಿಕ್ಷಕಿ ಎಂ. ಎಲ್. ಎಲಿಜಬೆತ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯ ಶಿಕ್ಷಕರ ಸಹಕಾರದೊಂದಿಗೆ ನಮ್ಮ ಶಾಲೆಯ ಪ್ರಗತಿಯಾಗಿದೆ. ತಾಲೂಕು ಹಾಗೂ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳ ಉತ್ತೇಜನ ಬಹಳ ಮುಖ್ಯವಾಗಿ ಪರಿಣಮಿಸಿದೆ. ನಮ್ಮ ಮಕ್ಕಳ ನಿರಂತರ ಚಟವಟಿಕೆಯಿಂದ ಶಾಲೆ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರತಿವರ್ಷ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡು ವೈವಿಧ್ಯಮಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದೇವೆ. ಇದರಿಂದ ಮಕ್ಕಳ ನವೀನ ರೀತಿಯ ಕಲಿಕೆಗೆ ಸಹಕಾರಿಯಾಗುತ್ತಿದೆ ಎಂದರು.

ವೇದಿಕೆಯಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ, ಹಿರಿಯ ಗೈಡರ್‌ ಎಚ್.ಜಿ. ಕಾಂಚನಮಾಲ ಮಾತನಾಡಿದರು. ಹಿರಿಯ ಶಿಕ್ಷಕಿ ನಾಗರತ್ನಮ್ಮ ಡಿ.ಕೆ. ಪ್ರಾರ್ಥಿಸಿದರು, ಎಚ್.ಸಿ. ಜ್ಯೋತಿ ಸ್ವಾಗತಿಸಿದರು, ಸಾನಿಯಾ ನಿರೂಪಿಸಿದರು, ಕಾವ್ಯ ವಂದಿಸಿದರು.