ಚಿತ್ರಕಲೆ, ಕರಕುಶಲ ಕಲೆ,ಯೋಗ ಮತ್ತು ವ್ಯಾಯಾಮ,ನಾಟಕಾಭ್ಯಾಸ, ಕಥೆ ಹೇಳುವಿಕೆ ಮತ್ತು ಪಠಣ, ಸಂಗೀತ, ನೃತ್ಯ ಆಟಗಳು ನಡೆಯುತ್ತವೆ. ಶಿಬಿರದ ಕೊನೆಯಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ನಡೆಸುವುದು ಬಹಳ ಪರಿಣಾಮಕಾರಿ. ಇದರಿಂದ ಮಕ್ಕಳಲ್ಲಿ ಅಭಿನಯ ಕೌಶಲ್ಯ ಬೆಳೆಸುವುದು.
ಕನ್ನಡಪ್ರಭ ವಾರ್ತೆ ಮೈಸೂರು
ಬೇಸಿಗೆ ಶಿಬಿರಗಳು ಮಕ್ಕಳ ಸಮಗ್ರ ಬೆಳವಣಿಗೆಗೆ ಉಪಯುಕ್ತ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಹೇಳಿದರು.ಅದಮ್ಯ ರಂಗಶಾಲೆಯ ವತಿಯಿಂದ ವಿ.ಕೆ.ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಭಾಷಣ ಮಾಡಿದ ಅವರು, ಇಂತಹ ಶಿಬಿರಗಳಲ್ಲಿ ಮಕ್ಕಳ ಆಟ, ಕಲಿಕೆ ಮತ್ತು ಸಂಸ್ಕಾರಗಳನ್ನು ಒಟ್ಟುಗೂಡಿಸುವ ಚಟುವಟಿಕೆಗಳು ನಡೆಯುವುದು ಇದಕ್ಕೆ ಕಾರಣ ಎಂದರು.
ಮಕ್ಕಳಲ್ಲಿ ಆತ್ಮವಿಶ್ವಾಸ,. ತಂಡದಲ್ಲಿ ಕೆಲಸ ಮಾಡುವ ಗುಣ ಬೆಳೆಸುವುದು, ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸುವುದು ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಆಗುತ್ತದೆ ಎಂದು ಅವರು ಹೇಳಿದರು.ಚಿತ್ರಕಲೆ, ಕರಕುಶಲ ಕಲೆ,ಯೋಗ ಮತ್ತು ವ್ಯಾಯಾಮ,ನಾಟಕಾಭ್ಯಾಸ, ಕಥೆ ಹೇಳುವಿಕೆ ಮತ್ತು ಪಠಣ, ಸಂಗೀತ, ನೃತ್ಯ ಆಟಗಳು ನಡೆಯುತ್ತವೆ. ಶಿಬಿರದ ಕೊನೆಯಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ನಡೆಸುವುದು ಬಹಳ ಪರಿಣಾಮಕಾರಿ.
ಇದರಿಂದ ಮಕ್ಕಳಲ್ಲಿ ಅಭಿನಯ ಕೌಶಲ್ಯ ಬೆಳೆಸುವುದು. ಸಭಾಕಂಪನ ನಿವಾರಣೆ, ತಂಡದ ಸಹಕಾರ ಮನೋಭಾವ, ನಾಯಕತ್ವ ಗುಣ, ಸಂವಹನ ಕೌಶಲ್ಯ, ಸೃಜನಶೀಲತೆ ಬೆಳೆಯುತ್ತದೆ. ಶಿಸ್ತು ಮತ್ತು ಸಮಯಪಾಲನೆ ಕಲಿಯುತ್ತಾರೆ ಎಂದು ಅವರು ಹೇಳಿದರು.ವಿಜಯನಗರದ 3ನೇ ಹಂತದ ವಿ.ಕೆ. ಪಬ್ಲಿಕ್ ಶಾಲೆ ಕಾರ್ಯದರ್ಶಿ ರವಿಕುಮಾರ್ ಬೆಕ್ಯಾ ಅಧ್ಯಕ್ಷತೆ ವಹಿಸಿದ್ದರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ ಆಶಯ ಭಾಷಣ ಮಾಡಿದರು.
ಅದಮ್ಯ ರಂಗಶಾಲೆಯ ವತಿಯಿಂದ ನೀಡಲಾಗುವ ‘ಅದಮ್ಯ ಕಾಯಕಯೋಗಿ ಪ್ರಶಸ್ತಿ’ಯನ್ನು ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯ ಭಾರತೀ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎಲ್. ಸುರೇಶ್, ಪತ್ರಕರ್ತ ಗಿರೀಶ್ ಹುಣಸೂರು, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಎಚ್.ಎಲ್. ಯಮುನಾ ಹಾಗೂ ಮೈಸೂರಿನ ತೇಗು ಮೆಸ್ ನ ಮಾಲೀಕ ಟಿ. ಶಾಮ್ ಅವರಿಗೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರದಾನ ಮಾಡಿದರು.ಇದಲ್ಲದೇ ದ್ವಿತೀಯ ಪಿಯುಸಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿರುವ ಬಸವೇಶ್ವರನಗರ ಎಎಂಬಿ ಸಂಯುಕ್ತ ಪಿಯು ಕಾಲೇಜಿನ ಎಂ. ಸಂಗೀತ, ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್ ಸಂಘಟನಾ ಕಾರ್ಯದರ್ಶಿ ಸಿ.ಆರ್. ಮಾನಸ, ಸ್ವಯಂ ಸೇವಕಿ ಬಿ. ನಿತ್ಯಶ್ರೀ ಅವರಿಗೆ ಅದಮ್ಯ ಯುವಚೇತನ ಪ್ರಶಸ್ತಿ ಪ್ರದಾನ ಮಾಡಿದರು.
ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ,ಸ್ವಾಗತಿಸಿದರು. ಪರಮೇಶ್ ಕೆ. ಉತ್ತನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಬಸಪ್ಪ ಸಾಲುಂಡಿ, ಡಾ.ಬಿ. ಬಸವರಾಜು, ನಾಗೇಶ್ ಮೊದಲಾದವರು ಇದ್ದರು.ನಂತರ ಬಾಲಂಗೋಚಿ ಚಿಣ್ಣರ ಬೇಸಿಗೆ ಶಿಬಿರದ ಮಕ್ಕಳು ಮಳೆ ಹುಚ್ಚ, ಗುಬ್ಬಿ ಮತ್ತು ಗೋಪಿ ಎರಡು ಮಕ್ಕಳ ನಾಟಕ ಪ್ರದರ್ಶನ ನಡೆಯಿತು.