ಸಾರಾಂಶ
ಕೊಡಗು ವಿದ್ಯಾಲಯದಲ್ಲಿ ಸಮಾಗಮ ಹೆಸರಿನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಕ್ಕಳಲ್ಲಿ ಶಿಸ್ತು ಸಜ್ಜನಿಕೆ ಸರಳತೆ ಬೆಳೆಯಲು ಬೇಸಿಗೆ ಶಿಬಿರಗಳು ಸಹಾಯಕಾರಿಯಾಗಿವೆ. ಮಕ್ಕಳ ಮೊದಲ ಗುರುಗಳಾಗಿರುವ ಪೋಷಕರು ಸದಾ ಮಕ್ಕಳಿಗೆ ಸ್ಫೂರ್ತಿಯಾಗಿರಬೇಕು ಎಂದು ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಹೇಳಿದ್ದಾರೆ.ನಗರದ ಕೊಡಗು ವಿದ್ಯಾಲಯದಲ್ಲಿ ಸಮಾಗಮ ಹೆಸರಿನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೋಷಕರಿಂದ ಸ್ಫೂರ್ತಿ ಪಡೆದ ಮಕ್ಕಳು ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ನೀರಿನ ಮಹತ್ವದ ಅರಿವು, ಮೊಬೈಲ್‌ನ ದುಷ್ಪರಿಣಾಮ, ಪ್ಲಾಸ್ಟಿಕ್ ಬಳಕೆಯ ತೊಂದರೆಗಳ ಬಗ್ಗೆ ಪ್ರೇರಣದಾಯಕವಾದ ಮಾತುಗಳನ್ನು ಅವರು ಹೇಳಿದರು.ಗೌರವ ಅತಿಥಿಯಾಗಿ ಆಗಮಿಸಿದ ರಾಷ್ಟ್ರೀಯ ಬಾಸ್ಕೆಟ್ ಬಾಲ್ ತಂಡದ ಮಾಜಿ ನಾಯಕಿ ಡಾ.ಪುಷ್ಪ ಕುಟ್ಟಣ್ಣ ಮಾತನಾಡಿ, ಶಾಲಾ ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಹಪಠ್ಯ ಚಟುವಟಿಕೆಗಳು ಕೂಡ ತುಂಬಾ ಅವಶ್ಯಕ ಕೊಡಗು ವಿದ್ಯಾಲಯ ಸಹ ಇದಕ್ಕೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದು ಶ್ಲಾಘಿಸಿದರು.
ಕಳೆದ 20 ದಿನಗಳಿಂದ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ 250 ಮಕ್ಕಳು ತಾವು ಕಲಿತ ವಿಭಿನ್ನ ಕಲೆಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.ಶಿಬಿರಾರ್ಥಿಗಳು ತಯಾರಿಸಿದ್ದ ವಿವಿಧ ರೀತಿಯ ಕಲಾಕೃತಿಗಳ ಪ್ರದರ್ಶನ ಕೂಡ ಆಯೋಜಿತವಾಗಿತ್ತು.
ಪ್ರಾಂಶುಪಾಲೆ ಸುಮಿತ್ರ ಕೆ.ಎಸ್. ಮಾತನಾಡಿ, ಈ ಬಾರಿಯ ಶಿಬಿರ ಯಶಸ್ವಿಯಾಗಲು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ಕೊಡುಗೆ ಅಪಾರ. 260ಕ್ಕೂ ಹೆಚ್ಚು ಶಿಬಿರಾರ್ಥಿಗಳು ತುಂಬು ಆಸಕ್ತಿ ಹಾಗೂ ಲವಲವಿಕೆಯಿಂದ ಪಾಲ್ಗೊಂಡಿದ್ದಾರೆ. ಇಂತಹ ಹಲವು ಶಿಬಿರಗಳನ್ನು ಭವಿಷ್ಯದಲ್ಲಿ ಆಯೋಜಿಸಿ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಆಡಳಿತ ನಿರ್ವಹಣಾಧಿಕಾರಿ ರವಿ ಪಿ. ಸೇರಿದಂತೆ ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ, ಪೋಷಕರು, ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು. ಲಕ್ಷ್ಯ ಪೊನ್ನಕ್ಕ ಹಾಗೂ ಸುದೀಕ್ಷ ನಿರೂಪಿಸಿದರು. ವರ್ಣ ಭೋಜಮ್ಮ ಸ್ವಾಗತಿಸಿದರು. ಶ್ರೀಯಾ ಕಿರಣ್ ಅತಿಥಿಗಳನ್ನು ಪರಿಚಯಿಸಿದರು. ಸಾನ್ಯ ವಂದಿಸಿದರು.