ದೇವರಿಗೆ ಸಮರ್ಪಿಸುವ ಮುನ್ನವೇ ವಾನರರ ಗುಂಪು ಬಂದು ಅವುಗಳನ್ನು ಕಿತ್ತುಕೊಂಡು ಓಡಿ ಹೋಗುತ್ತವೆ.
ಸಿ.ಕೆ. ನಾಗರಾಜ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಕೇವಲ ಐತಿಹಾಸಿಕ ಸ್ಮಾರಕಗಳಲ್ಲಷ್ಟೇ ಅಲ್ಲದೇ ಅನೇಕ ವೈವಿಧ್ಯತೆಯ ಪ್ರಾಣಿಗಳಾದ ಚಿರತೆ, ಕರಡಿ, ನವಿಲು, ಮೊಸಳೆ, ನೀರುನಾಯಿ ಸೇರಿದಂತೆ ನಾನಾ ಪ್ರಾಣಿಗಳು, ಪಕ್ಷಿಗಳನ್ನು ಕಾಣಬಹುದು. ಕೋತಿಗಳ ದಂಡು ಸುಮಾರು ಸಾವಿರ ಸಂಖ್ಯೆಯಲ್ಲಿ ಕಂಡು ಬರುತ್ತಿವೆ.ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರು ತರುವ ತೆಂಗಿನಕಾಯಿ, ಬಾಳೆಹಣ್ಣುಗಳನ್ನು ದೇವರಿಗೆ ಸಮರ್ಪಿಸುವ ಮುನ್ನವೇ ವಾನರರ ಗುಂಪು ಬಂದು ಅವುಗಳನ್ನು ಕಿತ್ತುಕೊಂಡು ಓಡಿ ಹೋಗುತ್ತವೆ. ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಾನರರ ದಂಡು ಹಂಪಿಯಲ್ಲಿ ಕಂಡು ಬರುತ್ತವೆ.
ಈ ಮಂಗಗಳಿಗೆ ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆ ಒಂದು ಕಡೆಯಾದರೆ, ಬಾಯಾರಿಕೆಗೆ ಕುಡಿಯುವ ನೀರಿಗಾಗಿ ಪರದಾಡುವುದು ಮತ್ತೊಂದು ಚಿಂತೆಯಾಗಿದೆ. ಈಗ ಬಿರು ಬೇಸಿಗೆಯ ಬಿಸಿಲಿಗೆ ಕಂಗಾಲಾಗಿ ದಾಹ ನೀಗಿಸಿಕೊಳ್ಳಲು ದೇವಸ್ಥಾನದ ಅಭಿಷೇಕದ ನೀರು ಕುಡಿದು ಕೆಲವು ದಣಿವಾರಿಸಿಕೊಳ್ಳುತ್ತವೆ. ಮತ್ತೆ ಕೆಲವು ದೇವಸ್ಥಾನದ ಪಕ್ಕದಲ್ಲಿರುವ ಪುಷ್ಕರಣೆಯ ನೀರು, ಇನ್ನು ಕೆಲವು ದೇವಸ್ಥಾನದ ಪಕ್ಕದಲ್ಲೇ ಹರಿಯುತ್ತಿರುವ ತುಂಗಭದ್ರಾ ನದಿಗೆ ತೆರಳಿ ದಾಹ ನೀಗಿಸಿಕೊಳ್ಳುತ್ತಿವೆ.ಇನ್ನು ಕೆಲ ವಾನರರ ದಂಡು ಆಹಾರ ಹುಡುಕುವ ಜೊತೆಗೆ ದಾಹ ನೀಗಿಸಿಕೊಳ್ಳುವುದಕ್ಕಾಗಿ ದೇವಸ್ಥಾನ ಬಿಟ್ಟು ಹಂಪಿಯ ಪಕ್ಕದಲ್ಲೇ ಇರುವ ಬಾಳೆತೋಟದ ಮೂಲಕ ಕಮಲಾಪುರ ಭಾಗಕ್ಕೆ ಆಗಮಿಸಿ ಮನೆಗಳ ಮುಂದೆ ಇರುವ ನೀರಿನ ಸಂಪ್‌ಗಳಲ್ಲಿ ನೀರು ಕುಡಿಯುತ್ತವೆ. ತೆರೆದ ನೀರಿನ ಸಂಪ್ ನಲ್ಲೇ ಈಜಾಡುತ್ತಾ ಮೋಜು- ಮಸ್ತಿ ಮಾಡುತ್ತಿವೆ.
ಕಾಡಿನಲ್ಲಿ ನೀರಿನ ಕೊರತೆ ಹೆಚ್ಚಾಗುತ್ತಿದ್ದಂತೆ ದಾಹದಿಂದ ಬಳಲಿದ ವಾನರರ ದಂಡು ನಗರ, ಪಟ್ಟಣದತ್ತ ಮುಖ ಮಾಡುತ್ತಿವೆ. ಅರಣ್ಯ ಇಲಾಖೆಯವರು ಕುರುಚಲು ಕಾಡು ಪ್ರದೇಶದಲ್ಲಿ ಪ್ರಾಣಿಗಳಿಗಾಗಿ ನೀರಿನ ವ್ಯವಸ್ಥೆ ಮಾಡಬೇಕಿದೆ. ಈ ವ್ಯವಸ್ಥೆ ಇಲ್ಲದ ಕಾರಣ ದಾಹ ತೀರಿಸಿಕೊಳ್ಳುವುದಕ್ಕೆ ಪರದಾಡುತ್ತಿವೆ.ಬೇಸಿಗೆ ಕಾಲದಲ್ಲಿ ಕೋತಿಗಳು ಹಿಂಡು ಹಿಂಡಾಗಿ ಆಹಾರ, ಕುಡಿಯುವ ನೀರು ಹುಡುಕಿಕೊಂಡು ನಮ್ಮ ಊರಿನತ್ತ ಬರುತ್ತವೆ. ನಮ್ಮ ಮನೆಯ ಮಂದೆ ದೊಡ್ಡದೊಂದು ನೀರಿನ ಸಂಪ್ ಇದೆ. ಈ ಸಂಪ್‌ಗೆ ನಿತ್ಯ ಹತ್ತಾರು ಕೋತಿಗಳು ಬಂದು ನೀರು ಕುಡಿದು ಹೋಗುತ್ತಿವೆ. ನೀರು ಕುಡಿದಾದ ಮೇಲೆ ದಣಿವು ಆರಿಸಿಕೊಳ್ಳಲು ನೀರಿನಲ್ಲಿ ಮುಳಿಗಿ ಬಿಸಿನ ತಾಪ ಕಡಿಮೆ ಮಾಡಿಕೊಳ್ಳುತ್ತವೆ ಎನ್ನುತ್ತಾರೆ ಕಮಲಾಪುರ ನಿವಾಸಿ ಪೂಜಾರ್ ಗಣೇಶ್.