ಜಿಲ್ಲೆಯಾದ್ಯಂತ ಬೇಸಿಗೆ ಮಳೆಯ ಅಬ್ಬರ

| Published : Apr 19 2024, 01:02 AM IST

ಸಾರಾಂಶ

ಗುರುವಾರ ಸಂಜೆ ಗುಡುಗು ಮಿಂಚಿನ ಅಬ್ಬರದೊಂದಿಗೆ ಪ್ರಾರಂಭವಾದ ಮಳೆ ವ್ಯಾಪಕ ಪ್ರಮಾಣದಲ್ಲಿ ಆಗುವ ಎಲ್ಲ ಲಕ್ಷಣಗಳಿದ್ದವು, ಆದರೆ ಆರಂಭದಲ್ಲಿ ಬಿರುಗಾಳಿಗೆ ಕೆಲ ಹೊತ್ತು ಜನರು ತತ್ತರಿಸುವಂತೆ ಮಾಡಿತು.

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಗುರುವಾರ ಸಂಜೆ ಬೇಸಿಗೆ ಮಳೆ ಅಬ್ಬರಿಸಿದ್ದು, ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನರಿಗೆ ಮಳೆ ಕೊಂಚ ತಂಪನ್ನೆರೆದಿದೆ. ಬೆಳಗ್ಗೆಯಿಂದಲೇ ತೀವ್ರ ಬಿಸಿಲು ಮತ್ತು ಝಳದ ವಾತಾವರಣ ನಿರ್ಮಾಣವಾಗಿತ್ತು, ಸಂಜೆಯಾಗುತ್ತಿದ್ದಂತೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಮಳೆ ಪ್ರಾರಂಭವಾಗಿ ಹರ್ಷಕ್ಕೆ ಕಾರಣವಾಯಿತು.

ಗದಗ ನಗರದ ಕೆಸಿ ರಾಣಿ ರಸ್ತೆ, ಚೇತನಾ ಕ್ಯಾಂಟೀನ್, ಸಾಯಿ ಬಾಬಾ ದೇವಸ್ಥಾನದ ರಸ್ತೆಯಲ್ಲಿ ಬೃಹತ್ ಮರಗಳು ಬಹುತೇಕ ಕೊಂಬೆಗಳು ಧರೆಗೆ ಉರುಳಿದ್ದು, ಹಲವು ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕೂಡಾ ಸ್ಥಗಿತಗೊಂಡಿತ್ತು.

ಇನ್ನುಳಿದ ಬಡಾವಣೆಗಳಲ್ಲಿಯೂ ಸಣ್ಣ ಪುಟ್ಟ ಮರಗಳ ಕೊಂಬೆಗಳು ತುಂಡಾಗಿ ಬಿದ್ದಿವೆ, ಕೆಲವೆಡೆ ಮನೆಗಳ ಮುಂದೆ ನಿಲ್ಲಿಸಿದ್ದ ಕಾರ್ ಗಳ ಮೇಲೆಯೂ ಕೊಂಬೆಗಳು ಬಿದ್ದು ಅಲ್ಪಸ್ವಲ್ಪ ಹಾನಿಯಾಗಿವೆ.

ಕಳೆದೊಂದು ವಾರದಿಂದ ಏರುಗತಿಯಲ್ಲಿದ್ದ ತಾಪಮಾನ 40 ಡಿಗ್ರಿಗೆ ತಲುಪಿದ್ದು, ಮಧ್ಯಾಹ್ನವಾಗುತ್ತಿದ್ದಂತೆ ಜನರು ಮನೆಯಿಂದ ಆಚೆ ಬರಲು ಹೆದರುವಂತಾಗಿತ್ತು. ಅದರಲ್ಲಿಯೂ ವಯೋವೃದ್ಧರು, ದೀರ್ಘ ಕಾಯಿಲೆಗಳಿಂದ ಬಳಲುತ್ತಿರುವವರು ತತ್ತರಿಸಿ ಹೋಗಿದ್ದರು. ಗುರುವಾರ ಸಂಜೆ ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಿಂದ ಇಳೆ ಕೊಂಚ ತಣ್ಣಗಾಗಿದ್ದು, ಜನರು ನಿಟ್ಟುಸಿರುವ ಬಿಡುವಂತಾಗಿದೆ.

ಮಳೆಗಿಂತ ಗಾಳಿಯೇ ಹೆಚ್ಚು: ಗುರುವಾರ ಸಂಜೆ ಗುಡುಗು ಮಿಂಚಿನ ಅಬ್ಬರದೊಂದಿಗೆ ಪ್ರಾರಂಭವಾದ ಮಳೆ ವ್ಯಾಪಕ ಪ್ರಮಾಣದಲ್ಲಿ ಆಗುವ ಎಲ್ಲ ಲಕ್ಷಣಗಳಿದ್ದವು, ಆದರೆ ಆರಂಭದಲ್ಲಿ ಬಿರುಗಾಳಿಗೆ ಕೆಲ ಹೊತ್ತು ಜನರು ತತ್ತರಿಸುವಂತೆ ಮಾಡಿತು. ಅದರಲ್ಲಿಯೂ ದ್ವಿಚಕ್ರ ವಾಹನಗಳಲ್ಲಿ ತೆರಳುವ ಜನರು ಗಾಳಿಯ ರಭಸಕ್ಕೆ ವಾಹನ ನಿಲ್ಲಿಸಿ ಅಲಲ್ಲಿ ಆಶ್ರಯ ಪಡೆಯುವಂತಾಯಿತು. ನಿಲ್ಲಿಸಿದ ದ್ವಿಚಕ್ರ ವಾಹನಗಳು ಸ್ಥಳದಲ್ಲಿಯೇ ಉರುಳಿ ಬಿದ್ದಿವೆ. ಅಲಲ್ಲಿ ಮನೆಗಳ ಮೇಲ್ಛಾವಣಿ, ವಾಟರ್ ಟ್ಯಾಂಕ್ ಸಂಪರ್ಕಗಳು ಕೂಡಾ ಕಿತ್ತು ಹೋಗುವಷ್ಟು ರಭಸದಲ್ಲಿ ಗಾಳಿ ಬೀಸಿದ್ದು ಇದರಿಂದ ಮಳೆ ಕೂಡಾ ಗಾಳಿಗೆ ಹಾರಿ ಹೋಗುವಂತಾಯಿತು.

ಆಶಾದಾಯಕ: ಬೇಸಿಗೆಯಲ್ಲಿಯೇ ಮಳೆ ಸುರಿದ ಹಿನ್ನೆಲೆಯಲ್ಲಿ ಬಿತ್ತನೆ ಪೂರ್ವದಲ್ಲಿನ ಕೃಷಿ ಚುಟುವಟಿಕೆಗಳಿಗೆ ಗುರುವಾರದ ಮಳೆ ಮುನ್ನುಡಿ ಬರೆದಿದ್ದು, ಈಗಾಗಲೇ ಹರಗಿ ಸಿದ್ಧಗೊಂಡಿರುವ ಹೊಲಗಳಿಗೆ ಮಳೆ ಅನುಕೂಲವಾಗಿದ್ದು, ಮತ್ತೆ ಜಮೀನು ಸಿದ್ಧಪಡಿಸಲು ಸಹಕಾರಿಯಾಗಿದೆ. ಕಳೆದ ಸಾಲಿನಲ್ಲಿ ಸಂಪೂರ್ಣ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಗುರುವಾರದ ಮಳೆ ಹೊಸ ಆಶಾ ಭಾವನೆ ಮೂಡಿಸಿದೆ.