ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಭೆ ಮೂರು ದಶಕದ ನಂತರ ಇದೀಗ ದಾವಣಗೆರೆಯಲ್ಲಿ ಜು.21 ಮತ್ತು 22ರಂದು ನಡೆಯಲಿದ್ದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳುವರು ಎಂದು ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- 15 ವರ್ಷದ ನಂತರ ದಾವಣಗೆರೆಯಲ್ಲಿ ಒಂದೇ ವೇದಿಕೆಯಲ್ಲಿ ಪಂಚ ಪೀಠಾಧೀಶರು

- - -

- ವೀರಶೈವ ಲಿಂಗಾಯತ ಒಳಪಂಗಡಗಳನ್ನೆಲ್ಲಾ ಮುಖ್ಯವಾಹಿನಿಗೆ ತರಲು ಸಂಕಲ್ಪ

- ಶಾಮನೂರು ಒತ್ತಾಸೆ, ಸಮಾಜದ ನಿರೀಕ್ಷೆಯಂತೆ ಒಂದೇ ವೇದಿಕೆಯಲ್ಲಿ ಪೀಠಗಳು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಭೆ ಮೂರು ದಶಕದ ನಂತರ ಇದೀಗ ದಾವಣಗೆರೆಯಲ್ಲಿ ಜು.21 ಮತ್ತು 22ರಂದು ನಡೆಯಲಿದ್ದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳುವರು ಎಂದು ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ವರ್ಷಗಳ ನಂತರ ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪೀಠಗಳ ಜಗದ್ಗುರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಭಕ್ತರಿಗೆ ಪಂಚ ಪೀಠಾಧೀಶರು ಆಶೀರ್ವಾದ ಮಾಡಲಿದ್ದಾರೆ. 30 ವರ್ಷದ ನಂತರ ನಡೆಯುತ್ತಿರುವ ಐತಿಹಾಸಿಕ ಸಮ್ಮೇಳನ ಇದಾಗಿದೆ ಎಂದರು.

ಜನಗಣತಿ ಜೊತೆಗೆ ಜಾತಿಗಣತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿವೆ. ವೀರಶೈವ ಲಿಂಗಾಯತ ಒಳಪಂಗಡಗಳು ಬಹಳಷ್ಟು ಇವೆ. ಜಾತಿಗಣತಿಯಲ್ಲಿ ಎಲ್ಲರೂ ವೀರಶೈವ ಲಿಂಗಾಯತ ಅಂತಾ ಸೇರಿಸಬೇಕೆಂಬ ನಿರ್ಣಯ ಕೈಗೊಳ್ಳುವ ಉದ್ದೇಶವಿದೆ. ಕೇವಲ ಜಾತಿ ಜನಗಣತಿ ವಿಚಾರವಲ್ಲದೇ, ರಾಜಕೀಯ ಹಿತಾಸಕ್ತಿಯಿಂದ ಛಿದ್ರಛಿದ್ರವಾಗಿರುವ ವೀರಶೈವ ಲಿಂಗಾಯತದ ಎಲ್ಲ ಒಳಪಂಗಡಗಳನ್ನು ಮುಖ್ಯವಾಹಿನಿಗೆ ತರುವ ಸಂಕಲ್ಪ ಮಾಡಲಾಗುವುದು ಎಂದು ಹೇಳಿದರು.

ಯಾವುದೇ ಒಳಪಂಗಡ ಇದ್ದರೂ ಅದನ್ನು ವೀರಶೈವ ಲಿಂಗಾಯತವೆಂದೇ ಪರಿಗಣಿಸಬೇಕು. 15 ವರ್ಷಗಳಿಂದ ಆಂತರಿಕ ಸಂಘರ್ಷದಿಂದಾಗಿ ಪಂಚಪೀಠಗಳು ಒಂದೇ ವೇದಿಕೆಯಲ್ಲಿ ಬಂದಿರಲಿಲ್ಲ. ಇದೀಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಸಮಾಜದ ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ, ಮಹಾಸಭಾ ಹಾಗೂ ಸಮಾಜ ಬಾಂಧ‍ವರ ಒತ್ತಾಸೆಯಂತೆ ಪಂಚ ಪೀಠಾಧೀಶರು ಒಂದೇ ವೇದಿಕೆಯಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ ಎಂದು ತಿಳಿಸಿದರು.

- - -

(ಬಾಕ್ಸ್‌)

* 1.50 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಸಮುದಾಯ ಸಮ್ಮೇಳನವನ್ನು ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ.ಸೋಮಣ್ಣ, ಸಚಿವರಾದ ಎಸ್ಸೆಸ್ ಮಲ್ಲಿಕಾರ್ಜುನ, ಶರಣ ಪ್ರಕಾಶ ಪಾಟೀಲ, ಬಿ.ವೈ.ವಿಜಯೇಂದ್ರ, ಜಿ.ಎಂ. ಸಿದ್ದೇಶ್ವರ ಸೇರಿದಂತೆ ಅನೇಕ ರಾಜಕೀಯ ನಾಯಕರು ಸಹ ಭಾಗವಹಿಸುವರು. 2 ದಿನಗಳ ಶೃಂಗ ಸಮ್ಮೇಳನದಲ್ಲಿ ಕೆಲವು ಮಹತ್ವಪೂರ್ಣ ನಿರ್ಣಯಗಳನ್ನೂ ಕೈಗೊಳ್ಳಲಿದ್ದೇವೆ. ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ಒಂದಾದರೆ ರಾಜ್ಯದಲ್ಲಿ ವೀರಶೈವ ಲಿಂಗಾಯತ ಜನಸಂಖ್ಯೆ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವೂಇಲ್ಲ. 1.50 ಕೋಟಿಗೂ ಅಧಿಕ ವೀರಶೈವ ಲಿಂಗಾಯತ ಜನಸಂಖ್ಯೆ ಇದೆ. ಶೃಂಗ ಸಭೆಯಲ್ಲಿ ಕೈಗೊಳ್ಳುವ ನಿರ್ಣಯವು ಜನಸಮುದಾಯದ ಮೇಲೆ ಹೆಚ್ಚಿನ ಪರಿಣಾಮವನ್ನೂ ಬೀರಲಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದರು.

- - -

-20ಕೆಡಿವಿಜಿ5: ಪಂಚ ಪೀಠಾಧೀಶರು