ನಾಳೆಯಿಂದ ವೀರಶೈವ ಪೀಠಾಚಾರ್ಯರು, ಶಿವಾಚಾರ್ಯರ ಶೃಂಗ ಸಮ್ಮೇಳನ: ಶ್ರೀಗಳು

| Published : Jul 20 2025, 01:15 AM IST

ನಾಳೆಯಿಂದ ವೀರಶೈವ ಪೀಠಾಚಾರ್ಯರು, ಶಿವಾಚಾರ್ಯರ ಶೃಂಗ ಸಮ್ಮೇಳನ: ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಜು.21 ಮತ್ತು 22ರಂದು ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ನಡೆಯಲಿದೆ. ಇದು ಹೊಸ ಆಯಾಮಕ್ಕೆ ಅಡಿಪಾಯ ಹಾಕಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

- ವೀರಶೈವ ಲಿಂಗಾಯತ ಜಾತಿಯಲ್ಲ, ಧರ್ಮ: ರಂಭಾಪುರಿ ಶ್ರೀ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಜು.21 ಮತ್ತು 22ರಂದು ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ನಡೆಯಲಿದೆ. ಇದು ಹೊಸ ಆಯಾಮಕ್ಕೆ ಅಡಿಪಾಯ ಹಾಕಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ವೀರಶೈವ ಲಿಂಗಾಯತ ಧರ್ಮದ ಹಲವಾರು ಮಹತ್ವಪೂರ್ಣ ವಿಚಾರಗಳನ್ನು ಚಿಂತಿಸಿ, ಎಲ್ಲರಿಗೂ ಒಳಿತಾಗುವ ಯೋಜನೆಯತ್ತ ಸಾಗಬೇಕಿದೆ. ಕೇಂದ್ರ ಸರ್ಕಾರದಿಂದ ಜನಗಣತಿ ಜೊತೆಗೆ ಜಾತಿ ಜನಗಣತಿ ವೇಳೆಯೂ ಎಲ್ಲರೂ ಒಗ್ಗಟ್ಟು ತೋರಿಸಬೇಕಿದೆ. ಒಗ್ಗಟ್ಟಿನಲ್ಲಿ ಬಲವಿದೆ, ಅದ್ಭುತ ಶಕ್ತಿ ಇದೆ. ಈ ನಿಟ್ಟಿನಲ್ಲಿ ಶೃಂಗ ಸಮ್ಮೇಳನ ಮಹತ್ವದ್ದಾಗಿದೆ ಎಂದಿದ್ದಾರೆ.

ಸಮಾಜದ ಹಬ್ಬ:

ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗಸಭೆಗೆ ನಾಡಿನ ಮಠಾಧೀಶರು, ಧರ್ಮಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ, ಎಲ್ಲ ಒಳಜಾತಿಗಳ ಮುಖಂಡರು ಸಹ ಸಮ್ಮೇಳನದಲ್ಲಿ ಭಾಗಿಯಾಗುವರು. ಒಂದಾಗಿ ಬಾಳೋಣ ಬನ್ನಿರಿ, ಚೆಂದಾಗಿ ಬಾಳೋಣ ಬನ್ನಿರಿ, ನಗು ನಗುತಾ ಸೊಗಸಿನ ಬಾಳನ್ನು ಬೆಳೆಸೋಣ ಬನ್ನಿರಿ ಎಂಬ ರಂಭಾಪುರಿ ಪೀಠದ ಲಿಂಗೈಕ್ಯ ಶ್ರೀ ವೀರಗಂಗಾಧರ ಜಗದ್ಗುರುಗಳ ತಪೋವಾಣಿ ಸಾಕಾರಗೊಳ್ಳುವ ಸಮಾಜದ ಹಬ್ಬ ಸಮ್ಮೇಳನವಾಗಿದೆ ಎಂದು ವಿವರಿಸಿದ್ದಾರೆ.

ರಾಷ್ಟ್ರಪ್ರೇಮ, ಧರ್ಮ ನಿಷ್ಠೆ, ಕರ್ತವ್ಯಶೀಲತೆ ಪ್ರತಿಯೊಬ್ಬರ ಉಸಿರಾಗಬೇಕು. ಹೆತ್ತ ತಾಯಿ, ಹೊತ್ತ ಭೂಮಿ ಎಷ್ಟು ಮುಖ್ಯವೋ ಜೀವನಕ್ಕೆ ಧರ್ಮವೂ ಅಷ್ಟೇ ಅವಶ್ಯಕ. ಪ್ರಾಚೀನ ಇತಿಹಾಸ, ಪರಂಪರೆ ಹೊಂದಿರುವ ವೀರಶೈವ ಲಿಂಗಾಯತ ಸಮಾಜ ಸೈದ್ಧಾಂತಿಕ ನೆಲೆಗಟ್ಟನ್ನು ಅರಿತು, ಆಚರಿಸಿ, ಬಾಳುವುದರಲ್ಲಿ ಜೀವನ ಶ್ರೇಯಸ್ಸು ಇದೆಯೆಂಬುದನ್ನು ಯಾರೂ ಮರೆಯಲಾಗದು. ವೀರಶೈವ ಲಿಂಗಾಯತ ಜಾತಿಯಲ್ಲ, ಧರ್ಮ ಎಂಬುದನ್ನು ಮರೆಯಬಾರದು. ಸಕಲ ಜೀವಾತ್ಮರಿಗೂ ಸದಾ ಒಳಿತನ್ನೇ ಬೋಧಿಸಿದ ಧರ್ಮ ವೀರಶೈವ ಲಿಂಗಾಯತ. ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಈ ಧರ್ಮ ಆದ್ಯತೆ ನೀಡಿದೆ. ಶ್ರೀ ಜಗದ್ಗುರು ಪಂಚಾಚಾರ್ಯರ ತತ್ವಸಿದ್ಧಾಂತಗಳು, 12ನೇ ಶತಮಾನದ ಬಸವಾದಿ ಶರಣರ ಸಾಮಾಜಿಕ ಚಿಂತನೆಗಳು ಬದುಕಿ ಬಾಳುವ ಜನಾಂಗಕ್ಕೆ ಬೆಳಕಿನ ದಾರಿ ತೋರಿಸುತ್ತವೆ ಎಂದು ಶ್ರೀ ರಂಭಾಪುರಿ ಜಗದ್ಗುರು ಹೇಳಿದ್ದಾರೆ.

- - -

-19ಕೆಡಿವಿಡಿ2: ರಂಭಾಪುರಿ ಸ್ವಾಮೀಜಿ