ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರೈತರ ಸುಗ್ಗಿ ಹಬ್ಬವಾಗಿರುವ ಹಬ್ಬ ಮಕರ ಸಂಕ್ರಮಣವನ್ನು ವೈವಿಧ್ಯಮವಾಗಿ ನಗರದ ವಿವಿಧೆಡೆ ಆಚರಿಸಲು ಸಜ್ಜಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಬೇಕಾದ ಎಳ್ಳು-ಬೆಲ್ಲ, ಕಬ್ಬು, ಗೆಣಸು ಇತ್ಯಾದಿಗಳನ್ನು ಈಗಾಗಲೇ ಖರೀದಿಸಿರುವ ಜನರು ಸೋಮವಾರ ದಿನವಿಡೀ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಲಿದ್ದಾರೆ.
ಸಂಕ್ರಾಂತಿ ಹಬ್ಬದ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳು ಕಿಚ್ಚು ಹಾಯಿಸುವ, ಸಾಂಸ್ಕೃತಿಕ ಕಾರ್ಯಕ್ರಮ ಸಹ ಏರ್ಪಡಿಸಿವೆ. ಉಳಿದಂತೆ ಸೋಮವಾರ ಸಂಜೆ ನಗರದ ಗವಿಪುರಂನಲ್ಲಿರುವ ಪುರಾತನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಲಿದೆ.
ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸಂಧ್ಯಾಕಾಲ 5.20ರಿಂದ 5.23ರವರೆಗಿನ ಅವಧಿಯಲ್ಲಿ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲಿದೆ. ಲಿಂಗಭಾಗದಲ್ಲಿ ಎಷ್ಟು ಸಮಯ ಸೂರ್ಯರಶ್ಮಿ ಇರಲಿದೆ ಎನ್ನುವುದರ ಮೇಲೆ ಭವಿಷ್ಯ ಹೇಳಲಾಗುವುದು.
ಸೂರ್ಯ ಅಸ್ತಮಾನಕ್ಕೂ ಮುನ್ನ ಪೂಜೆ ಸಲ್ಲಿಸಿ ಉತ್ತರಾಯಣ ಪ್ರವೇಶಿಸಿ ಬಳಿಕ ಅಸ್ತಮಾನವಾಗಲಿದ್ದಾನೆ ಎಂದು ಪ್ರಧಾನ ಅರ್ಚಕರಾದ ಡಾ. ಸೋಮಸುಂದರ ದೀಕ್ಷಿತರು ತಿಳಿಸಿದರು.
ದೇವಸ್ಥಾನದಲ್ಲಿ ಬೆಳಗ್ಗೆ 5 ಗಂಟೆಗೆ ತೆರೆದು 5.30ರಿಂದ 6.30ರವರೆಗೆ ಧನುರ್ಮಾಸದ ಕೊನೆಯ ಅಭಿಷೇಕ ನಡೆಸಿ ಮಂಗಳಾರತಿ ಸಲ್ಲಿಸಲಾಗುವುದು. ವಿಶೇಷಪೂಜೆ, ಅಲಂಕಾರ ಮಾಡಲಾಗುವುದು.
ಮಧ್ಯಾಹ್ನ 12ರವರೆಗೆ ದೇವಸ್ಥಾನ ತೆರೆಯಲಿದ್ದು ಸಾರ್ವಜನಿಕರಿಗೆ ದರ್ಶನ ಅವಕಾಶವಿದೆ. ಬಳಿಕ ದೇವಸ್ಥಾನ ಬಂದ್ ಮಾಡಿ ಸೂರ್ಯಪೂಜೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು.
ಸಂಜೆ ಸೂರ್ಯರಶ್ಮಿ ಲಿಂಗವನ್ನ ಸ್ಪರ್ಶಿಸುವುದರ ನಂತರ ಸ್ವಾಮಿಗೆ ಕ್ಷೀರಾಭಿಷೇಕ ನೆರವೇರಿಸಿ ಅಲಂಕಾರ ಮಾಡಿ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ ಎಂದು ಅವರು ಹೇಳಿದರು.
ಖರೀದಿ ಭರಾಟೆ: ಹಬ್ಬದ ಮುನ್ನಾದಿನವಾದ ಭಾನುವಾರ ನಗರದ ಮಾರುಕಟ್ಟೆಗಳಲ್ಲಿ ಗ್ರಾಹಕರು ಮುಗಿಬಿದ್ದು ಹಬ್ಬಕ್ಕಾಗಿ ಕಬ್ಬು, ಗೆಣಸು, ಕಡಲೆಕಾಯಿ, ಬಾಳೆಹಣ್ಣು ಮತ್ತು ಅವರೆಕಾಯಿ ಖರೀದಿ ಮಾಡಿದರು. ನಗರದ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಜಯನಗರ, ಯಶವಂತಪುರ, ಮಡಿವಾಳ, ರಾಜಾಜಿನಗರ, ಗಾಂಧಿ ಬಜಾರ್ನಲ್ಲಿ ವ್ಯಾಪಾರದ ಭರಾಟೆ ಜೋರಾಗಿತ್ತು.
ಇಲ್ಲಿನ ಜಯನಗರ, ಮಲ್ಲೇಶ್ವರ ಸೇರಿ ವಿವಿಧೆಡೆ ಗೋವು ಕಿಚ್ಚು ಹಾಯಿಸಲು ಜನತೆ ಸಿದ್ಧತೆ ಮಾಡಿಕೊಂಡಿದ್ದಾರೆ.