ಅಪ್ಪ ಸೋತ ಕ್ಷೇತ್ರದಲ್ಲಿ 33 ವರ್ಷ ಬಳಿಕ ಗೆದ್ದ ಮಗ!

| Published : Jun 05 2024, 01:30 AM IST / Updated: Jun 05 2024, 06:17 AM IST

ಅಪ್ಪ ಸೋತ ಕ್ಷೇತ್ರದಲ್ಲಿ 33 ವರ್ಷ ಬಳಿಕ ಗೆದ್ದ ಮಗ!
Share this Article
  • FB
  • TW
  • Linkdin
  • Email

ಸಾರಾಂಶ

ಚಾ.ನಗರದಲ್ಲಿ ಮಹದೇವಪ್ಪ ಪುತ್ರ ಸುನಿಲ್‌ಗೆ ಗೆಲುವು ಲಭಿಸಿದ್ದು, ಈ ಮೂಲಕ ತಂದೆ ಸೋತಿದ್ದ ಕ್ಷೇತ್ರದಲ್ಲಿ 33 ವರ್ಷಗಳ ಬಳಿಕ ಗೆದ್ದಂತಾಗಿದೆ.

ಅಂಶಿ ಪ್ರಸನ್ನಕುಮಾರ್

  ಮೈಸೂರು : ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು 33 ವರ್ಷಗಳ ಹಿಂದೆ ಚಾಮರಾಜನಗರದಲ್ಲಿ ಜನತಾದಳ ಅಭ್ಯರ್ಥಿಯಾಗಿ ಸೋತಿದ್ದರು. ಈ ಬಾರಿ ಅವರ ಪುತ್ರ ಸುನಿಲ್ ಬೋಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿ ಮೊದಲ ಚುನಾವಣೆಯಲ್ಲೇ ನೇರವಾಗಿ ಲೋಕಸಭೆ ಪ್ರವೇಶಿಸಿದ್ದಾರೆ.

ಈ ಕ್ಷೇತ್ರದಿಂದ ಡಾ.ಮಹದೇವಪ್ಪ ಅವರೇ ಕಣಕ್ಕಿಳಿಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಆಶಯವಾಗಿತ್ತು. ಇಲ್ಲದಿದ್ದರೆ ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಅವರ ಪುತ್ರ, ಹಾಲಿ ನಂಜನಗೂಡು ಶಾಸಕ ದರ್ಶನ್‌ ಅವರಿಗೆ ಟಿಕೆಟ್‌ ನೀಡುವ ಉದ್ದೇಶವಿತ್ತು. ಆದರೆ ದರ್ಶನ್‌ ಲೋಕಸಭೆ ಸ್ಪರ್ಧೆಗೆ ಆಸಕ್ತಿ ತೋರಲಿಲ್ಲ. ಜತೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅರ್ಧದಷ್ಟು ಕಡೆ ಕಾಂಗ್ರೆಸ್‌ ಸಚಿವರು, ಶಾಸಕರ ಸಂಬಂಧಿಕರಿಗೆ ಟಿಕೆಟ್‌ ನೀಡಿದ ಕಾರಣ ಮಹದೇವಪ್ಪ ಪಟ್ಟು ಹಿಡಿದು ಪುತ್ರನಿಗೆ ಟಿಕೆಟ್‌ ಪಡೆದರು.

1991ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮಹದೇವಪ್ಪ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಇದೀಗ 33 ವರ್ಷಗಳ ನಂತರ ಪುತ್ರ ಸುನಿಲ್ ಬೋಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಚುನಾವಣೆಯಲ್ಲೇ ನೇರ ಲೋಕಸಭೆ ಪ್ರವೇಶಿಸಿದ್ದಾರೆ.

ಸುನಿಲ್ 2017ರ ಏಪ್ರಿಲ್‌ನಲ್ಲಿ ನಡೆದ ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಯತ್ನಿಸಿದ್ದರು. ಆದರೆ ಟಿಕೆಟ್ ಜೆಡಿಎಸ್‌ನಿಂದ ಬಂದ ಕಳಲೆ ಕೇಶವಮೂರ್ತಿ ಅವರ ಪಾಲಾಗಿತ್ತು. 2023ರ ಚುನಾವಣೆಯಲ್ಲಿ ಸುನಿಲ್‌ ಬೋಸ್‌ ನಂಜನಗೂಡಿನಿಂದ ಟಿಕೆಟ್‌ ಬಯಸಿದ್ದರು. ಆದರೆ ನಂಜನಗೂಡಿನ ಟಿಕೆಟ್‌ ಆಕಾಂಕ್ಷಿಯಾಗಿದ್ದ ಆರ್.ಧ್ರುವನಾರಾಯಣ ನಿಧನರಾಗಿದ್ದರಿಂದ ಅವರ ಪುತ್ರ ದರ್ಶನ್‌ಗೆ ಟಿಕೆಟ್ ನೀಡಲಾಯಿತು. ಇದರಿಂದ ಮಹದೇವಪ್ಪ ಅನಿವಾರ್ಯವಾಗಿ ಟಿ.ನರಸೀಪುರದಿಂದಲೇ ಸ್ಪರ್ಧಿಸಿದರೆ, ಸುನಿಲ್ ಅವಕಾಶ ವಂಚಿತರಾಗಬೇಕಾಯಿತು.