ಸಾರಾಂಶ
ಬಾಗಲಕೋಟೆ: ಸಂಸದರು ಮತ್ತು ರೇಲ್ವೆ ಸಚಿವರಿಗೆ ಪತ್ರ ಬರೆದರೂ ಸ್ಪಂದಿಸದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೊಸದಾಗಿ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು. ಮುಂಬೈ-ಸೊಲ್ಲಾಪುರ ರೈಲನ್ನು ವಿಜಯಪುರವರೆಗೆ ವಿಸ್ತರಿಸುವಂತೆ ಆಗ್ರಹಿಸಿದ್ದಾರೆ.
ಈ ಬೇಡಿಕೆ ಕುರಿತು ಸಂಸದ ರಮೇಶ ಜಿಗಜಿಣಗಿ ಮತ್ತು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೂ ಪತ್ರ ಬರೆದಿದ್ದರೂ ಈವರೆಗೆ ಸ್ಪಂದಿಸಿಲ್ಲ ಎಂದು ಪ್ರಧಾನಿಗೆ ಬರೆದಿರುವ ಮೂರು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.ವಿಜಯಪುರದಿಂದ ಪ್ರತಿದಿನ ರಾತ್ರಿ 9ಕ್ಕೆ ರೈಲು ಸಂಚಾರ ಪ್ರಾರಂಭಿಸಿ ಮರುದಿನ ಬೆಳಗ್ಗೆ 6 ಗಂಟೆಗೆ ಬೆಂಗಳೂರು ತಲುಪುವಂತಾಗಬೇಕು. ಬೆಂಗಳೂರಿನಿಂದಲೂ ಪ್ರತಿದಿನ ರಾತ್ರಿ 9 ಗಂಟೆಗೆ ರೈಲು ಹೊರಟು ಮರುದಿನ ಬೆಳಗ್ಗೆ 6 ಗಂಟೆಗೆ ವಿಜಯಪುರ ತಲುಪುವ ವ್ಯವಸ್ಥೆಯಾಗಬೇಕು. ವಿಜಯಪುರ ಜಿಲ್ಲೆ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದ್ದು, ಮುಂಬೈ ಮತ್ತು ಕರ್ನಾಟಕ ಮಧ್ಯೆ ಸುಮಾರು 500 ವರ್ಷಗಳಿಂದಲೂ ಅವಿನಾಭಾವ ಸಂಬಂಧವಿದೆ. ಗಡಿ ಭಾಗದ ಜನರು ಮುಂಬೈ ಮತ್ತು ಸೋಲಾಪೂರ ಪಟ್ಟಣಗಳಿಗೆ ಪ್ರಯಾಣ ಮಾಡುತ್ತಾರೆ. ಈ ಭಾಗದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನೂ ಸಾಗಿಸುತ್ತಾರೆ. ಇದಕ್ಕೆ ಅನುಕೂಲವಾಗಲು ಮುಂಬೈ-ಸೋಲಾಪೂರ ನಡುವೆ ಸಂಚರಿಸುವ ಒಂದೇ ಭಾರತ ರೈಲನ್ನು ವಿಜಯಪುರವರೆಗೆ ವಿಸ್ತರಿಸಿದರೆ ಅನುಕೂಲವಾಗಲಿದೆ. ಈ ರೈಲು ವಿಜಯಪುರವರೆಗೆ ಓಡಿಸಲು ಆದೇಶ ಹೊರಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.