ಮುರಿನಕಟ್ಟೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ವಿರುದ್ಧ ಮಾಜಿ ಶಾಸಕ ಸುನೀಲ ನಾಯ್ಕ ಮಾಡಿರುವ ಆರೋಪಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ನೀವು ಶಾಸಕರಾಗಿದ್ದಾಗ ನಿಮ್ಮದೇ ಡಬಲ್ ಎಂಜಿನ್ ಸರಕಾರ ಇದ್ದು, ಆಗ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಭಟ್ಕಳ
ಮುರಿನಕಟ್ಟೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ವಿರುದ್ಧ ಮಾಜಿ ಶಾಸಕ ಸುನೀಲ ನಾಯ್ಕ ಮಾಡಿರುವ ಆರೋಪಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ನೀವು ಶಾಸಕರಾಗಿದ್ದಾಗ ನಿಮ್ಮದೇ ಡಬಲ್ ಎಂಜಿನ್ ಸರಕಾರ ಇದ್ದು, ಆಗ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸುನೀಲ ನಾಯ್ಕರು ಶಾಸಕರಾಗಿದ್ದಾಗ ಮುರಿನಕಟ್ಟೆ ಬಗ್ಗೆ ಆಸಕ್ತಿ ವಹಿಸಿಲ್ಲ. ಆಗ ರಾಜ್ಯ ಮತ್ತು ಕೇಂದ್ರದಲ್ಲೂ ಅವರ ಬಿಜೆಪಿ ಸರಕಾರ ಇತ್ತು. ಮುರಿನಕಟ್ಟೆ ಸಮಸ್ಯೆಯನ್ನು ಶಾಸಕರಿದ್ದಾಗ ಬಗೆಹರಿಸದೇ ಈಗ ಮುರಿನಕಟ್ಟೆ ಬಗ್ಗೆ ಏನೂ ಮಾಡಿಲ್ಲ ಎಂದು ಸಚಿವರ ಮೇಲೆ ಆರೋಪ ಮಾಡುತ್ತಿದ್ದಾರೆ. ವಿನಾಕಾರಣ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಸುನೀಲ ನಾಯ್ಕರಿಗೆ ಅಧಿಕಾರ ಇದ್ದಾಗ ಹಿಂದೂಗಳ ನೆನಪು ಇರುವುದಿಲ್ಲ.ಅಧಿಕಾರ ಇಲ್ಲದಿದ್ದಾಗ ಹಿಂದೂಗಳ ನೆನಪು ಆಗುತ್ತದೆ. ಮೊನ್ನೆ ರಾತ್ರಿ ಹಿಂದೂ ಕಾರ್ಯಕರ್ತರು ಮುರಿನಕಟ್ಟೆಯಲ್ಲಿ ಕಟ್ಟೆ ಮರುನಿರ್ಮಾಣಕ್ಕೆ ಹೋದಾಗ ಸುನೀಲ ನಾಯ್ಕರು ಎಲ್ಲಿಗೆ ಹೋಗಿದ್ದರು ಎಂದು ಅವರು ಪ್ರಶ್ನಿಸಿದರು.
ಸಚಿವರು ಎಲ್ಲರನ್ನೂ ಸರಿಯಾಗಿ ನೋಡುತ್ತಾರೆ. ಸುನೀಲ ನಾಯ್ಕರು ಹೇಳಿದಂತೆ ಹಿಂದೂ ವಿರೋಧಿಗಳಲ್ಲ. ಮುರಿನಕಟ್ಟೆಯಲ್ಲಿ ಹೊಸದಾಗಿ ನಿರ್ಮಿಸಿದ ಕಟ್ಟೆಯನ್ನು ಧ್ವಂಸಗೊಳಿಸಿದವರ ಮೇಲೆ ಕ್ರಮ ಕೈಗೊಳ್ಳಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಮಾಜಿ ಶಾಸಕ ಸುನೀಲ ಸುಳ್ಳು, ಡಂಬಾಚಾರದ ಮಾತುಗಳನ್ನಾಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ. ಬೇಕಾದರೆ ಸಚಿವರನ್ನು ನಾವು ಚರ್ಚೆಗೆ ಕರೆತರುತ್ತೇವೆ. ಮಾಜಿ ಶಾಸಕ ಸುನೀಲ ನಾಯ್ಕ ಚರ್ಚೆಗೆ ಬರುತ್ತಾರೋ ಎಂದು ಸವಾಲು ಹಾಕಿದ ಅವರು, ಸುನೀಲ ನಾಯ್ಕರು ಮೊದಲು ಪಟ್ಟಣದ ರಾಜಾಂಗಣ ನಾಗಬನದ ಅರ್ಧ ಗುಂಟೆ ಜಾಗ ಹೊರತು ಪಡಿಸಿ ಉಳಿದ ಜಾಗ ಎಲ್ಲಿಗೆ ಹೋಯಿತು ಎಂದು ಸ್ಪಷ್ಟಪಡಿಸಲಿ. ಜನತೆಗೆ ಎಷ್ಟು ಸಹಾಯ ಸಹಕಾರ ಮಾಡಿದ್ದೇನೆಂದು ಹೇಳಲಿ ಎಂದು ಹೇಳಿದರು.ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಪ್ರಮುಖರಾದ ರಾಮ ಮೊಗೇರ, ಟಿ.ಡಿ. ನಾಯ್ಕ, ನಾರಾಯಣ ನಾಯ್ಕ, ಜಯಶ್ರೀ ಮೊಗೇರ, ನಯನಾ ನಾಯ್ಕ, ರಾಜು ನಾಯ್ಕ ಕೊಪ್ಪ, ಸುಧಾಕರ ನಾಯ್ಕ, ರಮೇಶ ನಾಯ್ಕ ನಾಗೇಶ ದೇವಡಿಗ, ದೇವಿದಾಸ ಆಚಾರ್ಯ, ಮಂಜುನಾಥ ನಾಯ್ಕ ಮುಂತಾದವರಿದ್ದರು.