ಸಾರಾಂಶ
ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಆಕಾಂಕ್ಷಿಯಾಗಿ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೆ. ನಾಯಕರು ಮತ್ತು ಪಕ್ಷದ ತೀರ್ಮಾನದಿಂದ ಅವಕಾಶ ಸಿಗಲಿಲ್ಲ, ಬೇಸರವಿಲ್ಲದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಗೆಲ್ಲಿಸಲು ಶಕ್ತಿಯನ್ನು ಧಾರೆ ಎರೆಯುವ ಕೆಲಸ ಮಾಡುವೆ ಎಂದು ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಆಕಾಂಕ್ಷಿಯಾಗಿ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೆ. ನಾಯಕರು ಮತ್ತು ಪಕ್ಷದ ತೀರ್ಮಾನದಿಂದ ಅವಕಾಶ ಸಿಗಲಿಲ್ಲ, ಬೇಸರವಿಲ್ಲದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಗೆಲ್ಲಿಸಲು ಶಕ್ತಿಯನ್ನು ಧಾರೆ ಎರೆಯುವ ಕೆಲಸ ಮಾಡುವೆ ಎಂದು ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ತಿಳಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಕ್ಷದ ಪದಾಧಿಕಾರಿಗಳ ಜೊತೆಗೆ ಕ್ಷೇತ್ರ ಪ್ರವಾಸ ಮಾಡಿದ್ದೇನೆ. ಪಕ್ಷದ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ. ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಚುನಾವಣೆಯಂತೆ ನಡೆಯುತ್ತಿದೆ. ಬದಲಾವಣೆ ಪರ್ವದಲ್ಲಿ ಐತಿಹಾಸಿಕ ಚುನಾವಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರಲ್ಲಿ ಜಾಗೃತಿ ಮತ್ತು ಸ್ವಾಭಿಮಾನ ಮೂಡಿಸುವ ಕೆಲಸವನ್ನು ಭಾರತ್ ಜೋಡೊ ಯಾತ್ರೆ ನಾಲ್ಕು ದಿಕ್ಕಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಮೂಲಕ ಮಾಡಲಾಯಿತು. ಇದರ ಮೂಲಕ ರಾಷ್ಟ್ರಜೋಡಣೆ ಮಾಡುವ ಕೆಲಸವಾಯಿತು. ಇದೀಗ ರಾಜ್ಯ ಮತ್ತು ರಾಷ್ಟ್ರದ ಮಟ್ಟದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ವಿಚಾರವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮಾತನಾಡಿ, ೨೦೨೪ರ ಚುನಾವಣೆ ಸ್ವಾತಂತ್ರ್ಯ ಭಾರತದಲ್ಲಿ ಐತಿಹಾಸಿಕ ಚುನಾವಣೆಯಾಗಿದ್ದು, ಎನ್‌ಡಿಎ ಹಠಾವೋ ಇಂಡಿಯಾ ಬಚಾವೋ ಅಭಿಯಾನ ನಡೆಸಲಾಗುತ್ತಿದೆ. ೧೦ ವರ್ಷಗಳಿಂದ ಮೋದಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದು, ನಾವು ದೇಶದ ಸಂವಿಧಾನಕ್ಕೆ ನಿಷ್ಠರಾಗಿದ್ದೇವೆ ಎಂದು ತಿಳಿಸಿದರು. ರಾಷ್ಟ್ರೀಯ ವಿಧ್ವಂಸಕರ ಕೂಟಕ್ಕೆ ಅಧಿಕಾರ ನೀಡಿ. ಬಲಿಪಶುಗಳಾಗುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಬುದ್ದ ಭಾರತ ರೂಪಿಸುವ ಆಲೋಚನೆ ಇಲ್ಲ. ನಮ್ಮನ್ನು ಬದುಕಲು ಬಿಡುತ್ತಿಲ್ಲ. ಪ್ರಜೆಗಳಿಗೆ ಅನ್ನ ಕೊಡಬೇಕು, ಇದನ್ನು ಬಿಟ್ಟು ಬರೀ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಾರೆ. ಅವರು ಬದುಕಿರುವವರೆಗೂ ಪ್ರಧಾನಿಯಾಗಿರಬೇಕು ಎಂದುಕೊಂಡಿದ್ದಾರೆ. ರೈತರಿಗೆ ಸುರಕ್ಷತೆಯಿಂದ ಬದುಕುಲು ಬಿಡುತ್ತಿಲ್ಲ.ಬ್ಯಾಂಕ್ ಖಾತೆಗೆ ೧೫ ಲಕ್ಷ ಜಮಾ ಮಾಡಲಿಲ್ಲ. ಕಾರ್ಪೊರೇಟ್ ಯುಗದಲ್ಲಿ ಉದ್ಯೋಗ ಕಸಿಯುತಿದ್ದಾರೆ. ಉದ್ಯೋಗ ಎಂಬುದೇ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನದ ಆಶಯಗಳಿಗೆ ಬದ್ದವಾಗಿರುವ ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿದರು. ಯಳಂದೂರು ಕಸಾಪ ಮಾಜಿ ಅಧ್ಯಕ್ಷ ಮದ್ದೂರು ವಿರೂಪಾಕ್ಷ, ಸಿದ್ದರಾಜು, ಚಾಮರಾಜು, ರೈತ ಮುಖಂಡ ಪಂಜು ಇದ್ದರು.