ಸಾರಾಂಶ
ರಾಜ್ಯಸಭೆ ಚುನಾವಣಾ ಫಲಿತಾಂಶದ ಬಳಿಕ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು ಎಂದು ಬಿಜೆಪಿ ಸದಸ್ಯ ವಿ.ಸುನಿಲ್‌ಕುಮಾರ್ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಧಾನಸಭೆರಾಜ್ಯಸಭೆ ಚುನಾವಣಾ ಫಲಿತಾಂಶದ ಬಳಿಕ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು ಎಂದು ಬಿಜೆಪಿ ಸದಸ್ಯ ವಿ.ಸುನಿಲ್‌ಕುಮಾರ್ ಆಗ್ರಹಿಸಿದ್ದಾರೆ.ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪದ ವಿಚಾರವು ಬುಧವಾರ ಸದನದಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಘಟನೆಯ ಸಂಪೂರ್ಣ ಹೊಣೆಯನ್ನು ಸರ್ಕಾರ ಹೊರಬೇಕು. ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ಸ್ಪಷ್ಟನೆ ನೀಡಬೇಕು. ಅಲ್ಲಿಯವರೆಗೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದರು.
ಇಂದು ವಿಧಾನಸೌಧದಲ್ಲಿ ಈಗ ಘೋಷಣೆ ಕೂಗಿದವರು, ನಾಳೆ ಧ್ವಜ ಹಾರಿಸುವುದಿಲ್ಲ ಎಂಬ ಗ್ಯಾರಂಟಿ ಏನು? ಜಿನ್ನಾ ಮನಸ್ಥಿತಿಯವರು ಇಂತಹ ಕೃತ್ಯ ಎಸಗಿದ್ದು, ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ಮನಸ್ಥಿತಿಯವರು ವಿಧಾನಸೌಧದೊಳಗೆ, ಹೊರಗೆ ಇದ್ದರೆ ಅದನ್ನು ದೊಡ್ಡಪ್ರಮಾಣದಲ್ಲಿ ಖಂಡಿಸಬೇಕು ಎಂದರು.ಸಂವಿಧಾನದ ಕುರಿತು ಸರ್ಕಾರ ಕಾರ್ಯಾಗಾರ ನಡೆಸಿದ್ದು, ಈ ವೇಳೆ ಭಾರತ ವಿರೋಧಿ ಧೋರಣೆಯುಳ್ಳ ನಿತಾಶ ಕೌಲ್ ಎಂಬುವವರಿಂದ ಭಾಷಣ ಮಾಡಿಸಿದೆ ಎಂದು ಹೇಳಿದಾಗ ಕಾಂಗ್ರೆಸ್‌ನಿಂದ ಆಕ್ಷೇಪ ವ್ಯಕ್ತವಾಯಿತು. ಅಲ್ಲದೇ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟನೆ ನೀಡಲು ಮುಂದಾದರು. ಆದರೆ, ಸುನಿಲ್‌ಕುಮಾರ್ ಮಾತು ಮುಂದುವರಿಸಿ, ಘೋಷಣೆ ಕೂಗಿದ ಗುಂಪನ್ನು ಹೊರಹೋಗಲು ಬಿಡಲಾಗಿದೆ. ಈವರೆಗೂ ಒಬ್ಬರನ್ನೂ ಬಂಧಿಸಿಲ್ಲ. ಇದರ ಹಿಂದಿರುವ ಶಕ್ತಿ ಯಾವುದು ಎಂದು ಕಿಡಿಕಾರಿದರು.