ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ನೂತನ ಅಧ್ಯಕ್ಷರಾಗಿ ಸುನೀತಾ.ವೈ.ಆರ್ ಹಾಗೂ ಉಪಾಧ್ಯಕ್ಷರಾಗಿ ಸುರೇಶ್ ನಿಂಬೆಗೊಂದಿ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.
ಶಿಕಾರಿಪುರ: ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ನೂತನ ಅಧ್ಯಕ್ಷರಾಗಿ ಸುನೀತಾ.ವೈ.ಆರ್ ಹಾಗೂ ಉಪಾಧ್ಯಕ್ಷರಾಗಿ ಸುರೇಶ್ ನಿಂಬೆಗೊಂದಿ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.
ಕಳೆದ ಅ.19 ರಂದು ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ 13 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಸಾಧಿಸುವ ಮೂಲಕ ಕಳೆದ 4 ದಶಕದಿಂದ ಆಡಳಿತ ಮಂಡಳಿಯನ್ನು ಸತತವಾಗಿ ವಶ ಪಡೆಯುವಲ್ಲಿ ಯಶಸ್ಸು ಸಾಧಿಸಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷ ರನ್ನು ಅಭಿನಂದಿಸಿ ಮಾತನಾಡಿದ ಹಿರಿಯ ಸಹಕಾರಿ ಧುರೀಣ, ರಾಜ್ಯ ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ, ಸಂಘದ ನಿರ್ದೇಶಕ ಡಾ.ಬಿ.ಡಿ.ಭೂಕಾಂತ್, ಸಂಘ ತಾಲೂಕಿನಾದ್ಯಂತ ರೈತರಿಗೆ ಸಕಾಲಕ್ಕೆ ಅಗತ್ಯವಾದ ಬೀಜ, ಗೊಬ್ಬರ ಸಹಿತ ವಿವಿಧ ಪರಿಕರಗಳನ್ನು ವಿತರಿಸಿ ಬೆನ್ನೆಲುಬಾಗಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಸಂಘ ಹೆಚ್ಚು ಅನುದಾನದ ಮೂಲಕ ಅತ್ಯಂತ ಸದೃಢವಾಗಿದೆ. ಸಂಘ ಪಟ್ಟಣದ ಬಸ್ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಬೆಲೆಬಾಳುವ ವಾಣಿಜ್ಯ ಮಳಿಗೆ ಹೊಂದಿದ್ದು, ಎಲ್ಲ ಸಂಪನ್ಮೂಲ ಕ್ರೋಢೀಕರಿಸಿ ಕಚೇರಿ ಮುಂಭಾಗದಲ್ಲಿರುವ ವಿಶಾಲ ಜಾಗದಲ್ಲಿ ನೂತನ ಕಚೇರಿ ಜತೆಗೆ ವಾಣಿಜ್ಯ ಮಳಿಗೆ ನಿರ್ಮಿಸಿ ಆದಾಯ ಹೆಚ್ಚಳಕ್ಕೆ ನೂತನ ಆಡಳಿತ ಮಂಡಳಿ ಹೆಚ್ಚು ನಿಗಾವಹಿಸುವಂತೆ ಸಲಹೆ ನೀಡಿದರು. ನೂತನ ಅಧ್ಯಕ್ಷೆ ಸುನೀತಾ ಮಾತನಾಡಿ, ಪ್ರತಿಷ್ಠಿತ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಗೆ ಸಹಕರಿಸುವ ಮೂಲಕ ಸದಸ್ಯರ ಜತೆಗೆ ಪಕ್ಷದ ಮುಖಂಡರಿಗೆ ಅಭಾರಿಯಾಗಿದ್ದು, ಹುದ್ದೆಯನ್ನು ಜವಾಬ್ದಾರಿ ಎಂದು ಭಾವಿಸಿ ಸಂಘದ ಸರ್ವತೋಮುಖ ಪ್ರಗತಿಗೆ ಎಲ್ಲರ ಸಹಕಾರದಿಂದ ಹೆಚ್ಚಿನ ರೀತಿಯಲ್ಲಿ ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾರ್ಕೆಟಿಂಗ್ ಫೆಡರೇಷನ್ ವತಿಯಿಂದ 3 ಲಕ್ಷ ರು. ಚೆಕ್ಕನ್ನು ಸಂಘಕ್ಕೆ ನಿರ್ದೇಶಕ ಅಗಡಿ ಅಶೋಕ್ ನೂತನ ಅಧ್ಯಕ್ಷರ ಮೂಲಕ ಹಸ್ತಾಂತರಿಸಿದರು. ಸಂಘದ ನೂತನ ನಿರ್ದೇಶಕರಾದ ರಮೇಶ್ ನಾಯ್ಕ, ಶಶಿಧರ್ ಚುರ್ಚುಗುಂಡಿ, ಪ್ರೇಮಾ, ಗಿಡ್ಡಪ್ಪ ಮಟ್ಟೇರ್, ಸುಧೀರ್, ಗಿರೀಶ್, ಮಲ್ಲೇಶಪ್ಪ, ವೀರಣ್ಣಗೌಡ, ಸಿ.ಪಿ.ಹೆಗ್ಗಡೆ ಮುಖಂಡ ತಾ.ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ ಹುಲ್ಮಾರ್, ತಾ.ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಯೋಗೇಶಪ್ಪ ಹುಲಗಿನಕೊಪ್ಪ, ಚನ್ನವೀರಪ್ಪ, ಸಣ್ಣ ಹನುಮಂತಪ್ಪ ತೊಗರ್ಸಿ, ರಾಘವೇಂದ್ರ ಎಸ್.ಎಸ್, ಶಿವರಾಜ್ ನ್ಯಾಯವಾದಿ, ಬೆಣ್ಣೆ ಪ್ರವೀಣ ಸಹಿತ ಪಕ್ಷದ ನೂರಾರು ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.