ಸಾರಾಂಶ
ರಾಮದುರ್ಗ ತಾಲೂಕಿನ ಜಾಗೃತ ಕ್ಷೇತ್ರ ಸುನ್ನಾಳ ಗ್ರಾಮದ ಶ್ರೀಧೀರ ಮಾರುತಿ ಕಾರ್ತಿಕೋತ್ಸವವು ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಜರುಗಿತು.
ಕನ್ನಡಪ್ರಭ ವಾರ್ತೆ ರಾಮದುರ್ಗ
ರಾಮದುರ್ಗ ತಾಲೂಕಿನ ಜಾಗೃತ ಕ್ಷೇತ್ರ ಸುನ್ನಾಳ ಗ್ರಾಮದ ಶ್ರೀಧೀರ ಮಾರುತಿಯ ಕಾರ್ತಿಕೋತ್ಸವವು ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಜರುಗಿತು.ಬೆಳಗ್ಗೆ ಐದಕ್ಕೆ ಮಾರುತಿ ದೇವರ ಮೂರ್ತಿಗೆ ಮಹಾಅಭಿಷೇಕ ಹಾಗೂ ವಿವಿಧ ಹೂವುಗಳಿಂದ ಮತ್ತು ಬೆಳ್ಳಿ ಬಂಗಾರದ ಆಭರಣಗಳಿಂದ ವಿಶೇಷವಾಗಿ ಅಲಂಕೃತಗೊಂಡ ಅಶ್ವಾರೂಢ ಶ್ರೀಧೀರ ಮಾರುತಿಯ ಪೂಜೆಯು ಮಹಾಮಂಗಳಾರತಿ, ವಾದ್ಯಘೋಷಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನಕ್ಕೆ ಆಗಮಿಸಿದ ಸರ್ವ ಭಕ್ತರು ಮಹಾಪ್ರಸಾದದ ಸವಿದು ಶ್ರೀಧೀರ ಮಾರುತಿ ದರ್ಶನ ಪಡೆದರು. ತಲೆತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ರಾತ್ರಿ ಎಂಟಕ್ಕೆ ಗ್ರಾಮದ ದೊಡ್ಡ ಗೌಡರಾದ ಬಾಪುಗೌಡ ಮಲ್ಲನೌಡ ಪಾಟೀಲ ಅವರ ಮನೆಯಿಂದ ಮಹಾ ಆರತಿಯು ವಾದ್ಯಮೇಳಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿತು ನಂತರ ಗ್ರಾಮದ ನೂರಾರು ಮುತ್ತೈದೆಯರು ಆರತಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ನಂತರ ಭಜನಾ ಮಂಡಳಿಯ ಹರ್ಷದ ಭಜನೆಯ ಮೂಲಕ ಶ್ರೀಧೀರ ಮಾರುತಿಯ ಪಲ್ಲಕ್ಕಿ ಉತ್ಸವವು ಪ್ರಾರಂಭವಾಯಿತು.ಅದೇ ಸಮಯಕ್ಕೆ ಸುತ್ತ-ಮುತ್ತಲಿನ ಗ್ರಾಮದಿಂದ ಹಾಗೂ ದೂರದ ದೂರುಗಳಿಂದ ಆಗಮಿಸಿದ ಸಾವಿರಾರು ಭಕ್ತರು ದೇವಸ್ಥಾನದ ಸುತ್ತ-ಮುತ್ತಲಿನ ಆವರಣದಲ್ಲಿ ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವವನ್ನು ಆಚರಿಸಿದರು.
ಅದಕ್ಕೂ ಮುಂಚೆ ದೇವಸ್ಥಾನದಲ್ಲಿ ಹಾಗೂ ದೀಪಸ್ತಂಭದ ಮೇಲೆ ದೇವಸ್ಥಾನದ ಪೂಜಾರಿಗಳು ಮತ್ತು ಗ್ರಾಮದ ಹಿರಿಯರು ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಧೀರ ಮಾರುತಿ ದೇವರ ಭಕ್ತರಾದ ಚಿಪ್ಪಲಕಟ್ಟಿ ಗ್ರಾಮದ ಎಚ್ಚರಪ್ಪ ಬಡಿಗೇರ ಕುಟುಂಬದವರಿಂದ ಅನ್ನದಾಸೋಹ ಸೇವೆಯು ನಡೆಯಿತು. ರಾತ್ರಿ ಹತ್ತು ಗಂಟೆಗೆ ಗ್ರಾಮದ ಯುವ ಕಲಾವಿದರಿಂದ ಸಂಪತ್ತಿಗೆ ಸವಾಲ್ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶಿಸಿತು.