ಸಾರಾಂಶ
ಬೆಂಗಳೂರು: ಬಿರು ಬಿಸಿಲು ಯುಗಾದಿ ಹಬ್ಬದ ವ್ಯಾಪಾರಕ್ಕೂ ಹೊಡೆತ ಕೊಟ್ಟಿದೆ. ಪೂರೈಕೆ ಕಡಿಮೆಯಿಂದ ಒಂದು ಕಡೆ ಹೂ ಹಣ್ಣುಗಳ ದರ ಏರಿಳಿತ ಆಗುತ್ತಿದ್ದರೆ ಇನ್ನೊಂದೆಡೆ ಪ್ರತಿ ವರ್ಷದಷ್ಟು ಗ್ರಾಹಕರು ಈ ಬಾರಿ ಕಂಡುಬಂದಿಲ್ಲ ಎಂದು ಪ್ರಮುಖ ಮಾರುಕಟ್ಟೆಗಳ ವರ್ತಕರು ಬೇಸರ ವ್ಯಕ್ತಪಡಿಸಿದರು.
ಹೊಸವರ್ಷ ಶ್ರೀ ಕ್ರೋಧಿನಾಮ ಸಂವತ್ಸರದ ಯುಗಾದಿ ಹಬ್ಬಕ್ಕಾಗಿ ನಗರದ ಮಾರುಕಟ್ಟೆಗಳಲ್ಲಿ ಬೇವು ಬೆಲ್ಲ, ಹೂವು, ಹಣ್ಣು ಖರೀದಿ ನಡೆಯಿತು. ಬುಧವಾರದ ಹೊಸತೊಡಕು ಆಚರಣೆಗೂ ಮುಂಚಿತವಾಗಿಯೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳನ್ನು ಜನತೆ ಕೊಂಡರು. ಬೆಲೆ ಏರಿಕೆಯಾಗಿದ್ದರೂ, ವಸ್ತುಗಳ ಖರೀದಿ ಭರಾಟೆ ಕಡಿಮೆಯಾಗಿರಲಿಲ್ಲ.ಬಿಸಿಲೇರುವ ಕಾರಣದಿಂದ ಸೋಮವಾರ ಬೆಳಗ್ಗೆ ಬೆಳಗ್ಗೆ 10 ಗಂಟೆಯೊಳಗೆ ಕೆ.ಆರ್. ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರು ಅಗತ್ಯ ವಸ್ತು ಕೊಂಡೊಯ್ದಿದ್ದು ಕಂಡುಬಂತು. ಮಧ್ಯಾಹ್ನದ ಬಳಿಕವೂ ಹೆಚ್ಚಿನ ಜನರಿದ್ದರು. ಆದರೆ ಬಿಸಿಲಿನ ನಡುವೆ ಮಾರುಕಟ್ಟೆಯಲ್ಲಿ ಕೊಳ್ಳುವ ಭರಾಟೆ ತಗ್ಗಿತ್ತು. ನಸುಕಿಗೆ ಬಂದ ಗ್ರಾಹಕರು ತಾಜಾ ಹೂವು, ಹಣ್ಣು, ತರಕಾರಿ, ತಳಿರು ತೋರಣಗಳನ್ನು ಖರೀದಿಸಿದರು.
ಗಾಂಧಿಬಜಾರ್, ಮಲ್ಲೇಶ್ವರಂನಲ್ಲಿ ಬೆಲೆ ಏರಿಕೆ ಬಿಸಿ ನಡುವೆಯೂ ಭರ್ಜರಿ ವ್ಯಾಪಾರ ನಡೆಯಿತು. ಯುಗಾದಿ ಅಲಂಕಾರ ಹೆಚ್ಚಾಗಿರುವ ಕಾರಣ ಹೂಗಳಿಗೆ ಹೆಚ್ಚು ಬೇಡಿಕೆಯಿದ್ದರೂ ಕೊರತೆ ಕಾರಣದಿಂದ ಹೂಗಳ ಬೆಲೆ ದುಪ್ಪಟ್ಟಾಗಿತ್ತು.ಯುಗಾದಿ ಹಬ್ಬದ ವಿಶೇಷ ಖಾದ್ಯವಾದ ಹೋಳಿಗೆ ಸಿಹಿಖಾದ್ಯಕ್ಕಾಗಿ ಹಬ್ಬದ ಅಡುಗೆಗೆ ಅಗತ್ಯವಾದ ತೊಗರಿಬೇಳೆ, ಬೆಲ್ಲ, ಸಕ್ಕರೆ, ಎಣ್ಣೆ ಸೇರಿ ಇತರೆ ದಿನಸಿ ಖರೀದಿಯಲ್ಲಿ ನಿರತರಾಗಿದ್ದಾರೆ.
ನಗರದ ಬಸವನಗುಡಿ ದೊಡ್ಡಗಣಪತಿ ದೇವಾಲಯ, ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ, ಇಸ್ಕಾನ್, ಬನಶಂಕರಿ ದೇವಾಲಯ, ಕೋಟೆ ಆಂಜನೇಯ ದೇವಸ್ಥಾನ, ವೆಂಕಟೇಶ್ವರ ಮಂದಿರ ಸೇರಿ ನಗರದ ಪ್ರಮುಖ ದೇವಾಲಯಗಳಲ್ಲಿ ದೇವಿ ದೇವಸ್ಥಾನಗಳಲ್ಲಿ ಯುಗಾದಿ ವಿಶೇಷ ಪೂಜೆಗೆ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ಬಿರು ಬಿಸಿಲಿನ ಕಾರಣ ಆಗಮಿಸುವ ಭಕ್ತರಿಗಾಗಿ ಪೆಂಡಾಲ್ ವ್ಯವಸ್ಥೆ, ಕುಡಿಯುವ ನೀರು ಕಲ್ಪಿಸಲು ಮುಂದಾಗಿವೆ. ನಸುಕಿನಿಂದಲೇ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.ಹೊಸತೊಡಕು: ಹಬ್ಬದ ಮರುದಿನ ಬುಧವಾರ ವರ್ಷ ತೊಡಕು ಇರುವುದರಿಂದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಸೌತೆಕಾಯಿ, ತೆಂಗಿನ ಕಾಯಿ ಖರೀದಿ ಕೂಡ ಜೋರಾಗಿತ್ತು. ಮಟನ್ ಒಂದು ಕೆಜಿಗೆ 700 - 760 ರೂ. ಇದ್ದುದು 750ರಿಂದ 800 ರೂ. ಆಗಿತ್ತು. ಚಿಕನ್ ಬೆಲೆ ಕೆಜಿಗೆ 20- 25 ರೂ. ವರೆಗೆ ಬೆಲೆ ಹೆಚ್ಚಾಗಿತ್ತು. ತುಳಸಿ ಒಂದು ಮಾರಿಗೆ 100 ರೂ., ಬೇವು ಒಂದು ಕಟ್ಟಿಗೆ 20 ರಿಂದ 30 ರೂ., ಮಾವಿನ ಎಲೆಗೆ 30 ರೂ. ದರವಿತ್ತು.
ಬಿಸಿಲಿನ ಕಾರಣದಿಂದ ಹೂವುಗಳ ದರ ಅನಿಶ್ಚಿತವಾಗಿದೆ. ಜೊತೆಗೆ ಕಳೆದ ವರ್ಷಗಳಿಗೆ ಹೋಲಿಸಿದರೆ ಗ್ರಾಹಕರು ಕಡಿಮೆಯಿದ್ದರು.- ಜಿ.ಎಂ. ದಿವಾಕರ್, ಕೆ.ಆರ್.ಮಾರುಕಟ್ಟೆ ವರ್ತಕರ ಸಂಘ