ಬಿಸಿಲ ಧಗೆ: ಈಜು ಕೊಳಕ್ಕೆ ಮುಗಿಬಿದ್ದ ಯುವ ಜನತೆ

| Published : Mar 18 2025, 12:32 AM IST

ಬಿಸಿಲ ಧಗೆ: ಈಜು ಕೊಳಕ್ಕೆ ಮುಗಿಬಿದ್ದ ಯುವ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳವನ್ನು ಲಾರಾ ಸ್ವಿಮ್ಮಿಂಗ್ ಫೂಲ್ ಎಂಬ ಖಾಸಗಿ ಕಂಪನಿ ಗುತ್ತಿಗೆಗೆ ಪಡೆದು ಇದರ ನಿರ್ವಹಣೆ ಮಾಡುತ್ತಿದೆ. ವರ್ಷಪೂರ್ತಿ ಸಪ್ಪೆಮೋರೆ ಹಾಕುವ ಇಲ್ಲಿನ ಈಜುಕೊಳ ಬೇಸಿಗೆ ಬಂತೆಂದರೆ ದೊಡ್ಡವರು ಚಿಕ್ಕವರು ಎನ್ನದೆ ಎಲ್ಲ ವಯೋಮಾನದವರನ್ನೂ ಕೈಬೀಸಿ ಕರೆಯುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬೇಸಿಗೆಯ ಬಿಸಿಲ ಧಗೆ ಧರೆಯನ್ನು ಸುಡುತ್ತಿರುವ ಈ ಹೊತ್ತಿನಲ್ಲಿ ಜಿಲ್ಲೆಯ ಜನತೆ ನೀರಿನ ಮೊರೆ ಹೋಗುತ್ತಿರುವುದು ಸಾಮಾನ್ಯ. ಇಂಥವರಿಗಾಗಿಯೇ ಜಿಲ್ಲಾ ಕ್ರೀಡಾಂಗಣದಲ್ಲಿ 50 ಮೀಟರ್ ಉದ್ದದ ಸುಸಜ್ಜಿತ ಈಜುಕೊಳ ಈಜಾಡುವವರನ್ನು ಕೈಬೀಸಿ ಕರೆಯುತ್ತಿದೆ. ಈಗಾಗಲೇ ಇಲ್ಲಿ ನೀರಾಟ ಜೋರಾಗಿದ್ದು ರಜೆ ದಿನಗಳು ಬಂದರೆ ಸಾಕು ಈಜುಕೊಳದ ತುಂಬೆಲ್ಲಾ ಹುಡುಗರದ್ದೇ ಕಾರುಬಾರು ಎನ್ನುವಂತಾಗಿದೆ. ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳವನ್ನು ಲಾರಾ ಸ್ವಿಮ್ಮಿಂಗ್ ಫೂಲ್ ಎಂಬ ಖಾಸಗಿ ಕಂಪನಿ ಗುತ್ತಿಗೆಗೆ ಪಡೆದು ಇದರ ನಿರ್ವಹಣೆ ಮಾಡುತ್ತಿದೆ. ವರ್ಷಪೂರ್ತಿ ಸಪ್ಪೆಮೋರೆ ಹಾಕುವ ಇಲ್ಲಿನ ಈಜುಕೊಳ ಬೇಸಿಗೆ ಬಂತೆಂದರೆ ದೊಡ್ಡವರು ಚಿಕ್ಕವರು ಎನ್ನದೆ ಎಲ್ಲ ವಯೋಮಾನದವರನ್ನೂ ಕೈಬೀಸಿ ಕರೆಯುತ್ತದೆ.

ಇನ್ನು ಮುಂದೆ ಪ್ರವೇಶ ದರ ನಿಗದಿಬೇಸಿಗೆಯಲ್ಲಿ ತರಬೇತುದಾರರ ನೆರವಿನಿಂದ ಈಜು ಕಲಿಯಲು ಪ್ರತಿ ವ್ಯಕ್ತಿಗೆ 20 ತರಗತಿಗೆ ಪ್ರವೇಶ 1600 ರಿಂದ 1800 ರು.ಗಳ ಶುಲ್ಕ ನಿಗದಿ ಮಾಡುವ ಯೋಚನೆಯಿದೆ. ಮುಂದಿನ ವಾರದಲ್ಲಿ ಇದು ಅಂತಿಮವಾಗಲಿದ್ದು ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚಲಾಗುವುದು. ಜಿಲ್ಲಾ ಕ್ರೀಡಾಂಗಣದಲ್ಲಿ ಹೆಣ್ಣು ಮಕ್ಕಳಗಾಗಿಯೇ ಸಂಜೆ 4 ರಿಂದ 5 ರ ಸಮಯವನ್ನು ನಿಗದಿಪಡಿಸಲಾಗಿದೆ. ಆಸಕ್ತರು ಇದನ್ನು ಸದುಪಯೋಗಪಡಿಸಿಕೊಳ್ಳಲು ಈಜುಕೊಳದ ಸಿಬ್ಬಂದಿ ಮನವಿ ಮಾಡಿದ್ದಾರೆ. ಈಗಿರುವ ಈಜುಕೊಳದಲ್ಲಿ ಮಕ್ಕಳಿಗೆ ಈಜು ಕಲಿಸಲು ಆಗುವುದಿಲ್ಲ. ಆದ ಕಾರಣ ಪೋಷಕರೇ ನೀರಿಗೆ ಇಳಿದು ಮಕ್ಕಳಿಗೆ ಆಟವಾಡಿಸುತ್ತಾರೆ.

ಈಜುಕೊಳ ನಿರ್ವಹಣೆ ದುಬಾರಿ

ಜಿಲ್ಲಾ ಕ್ರೀಡಾಂಗಣದ ಈಜುಕೊಳ ಬಿಳಿ ಆನೆಯಾಗಿದೆ. ಇದನ್ನು ನಿರ್ವಹಣೆ ಮಾಡಲು ಪ್ರತಿ ತಿಂಗಳು 1.30 ಲಕ್ಷ ರು.ಗಳು ವೆಚ್ಚವಾಗುತ್ತದೆ. ಇದರಲ್ಲಿ ಸಿಬ್ಬಂದಿಯ ಸಂಬಳ, ನೀರನ್ನು ಸ್ವಚ್ಛ ಮಾಡಲು ಬಳಸುವ ಕ್ಲೋರಿನ್ ಜತೆಗೆ ತಿಂಗಳಿಗೆ 25 ಸಾವಿರ ರು. ವಿದ್ಯುತ್ ಶುಲ್ಕ ಎಲ್ಲವೂ ಕೂಡಿದರೆ ದುಬಾರಿಯಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ 500 ರಿಂದ 700 ಜನರು ಬಂದರೆ ಹೆಚ್ಚೆ. ಶನಿವಾರ ಭಾನುವಾರ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎನ್ನುತ್ತಾರೆ ನಿರ್ವಹಣೆ ಸಿಬ್ಬಂದಿ.

ಸಾರಾ ಸ್ವಿಮಿಂಗ್ ಪೂಲ್ ಕಂಪನಿ ಉಸ್ತುವಾರಿ ಸತೀಸ್‌ ಹೇಳುವಂತೆ, ಜಿಲ್ಲಾ ಕ್ರೀಡಾಂಗಣದ ಈಜುಕೊಳಕ್ಕೆ ಬಂದರೆ ತರಬೇತುದಾರರ ನೆರವಿನಲ್ಲಿ ಸುರಕ್ಷಿತವಾಗಿ ಈಜು ಕಲಿಯಬಹುದು.ಈಜು ಕಲಿಯುವ ಆಸಕ್ತಿಯುಳ್ಳವರು ಇಲ್ಲಿಗೆ ಬಂದು ಸೇಫ್ಟಿ ಗಾರ್ಡ್ ಬಳಸಿಕೊಂಡು ಈಜು ಕಲಿಯುವ ಅವಕಾಶವಿದೆ. ಪ್ರವೇಶ ಶುಲ್ಕ ಪ್ರತಿ ವ್ಯಕ್ತಿಗೆ 50 ರು. ಮಾತ್ರ ಪಡೆಯಲಾಗುತ್ತಿದೆ.