ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕಾಫಿ,ಅಡಿಕೆ ಹಾಗೂ ತೆಂಗಿನಮರಗಳನ್ನು ನಾಶಗೊಳಿಸಿದ್ದು, 80 ಸಾವಿರ ರು.ಗಳಿಗೂ ಮಿಕ್ಕಿ ನಷ್ಟವುಂಟಾಗಿದೆ ಎಂದು ಕೃಷಿಕ ಹೆರೂರು ಚಂದ್ರಶೇಖರ್ ಆಳಲನ್ನು ತೋಡಿಕೊಂಡಿದ್ದಾರೆ.

ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕಾಫಿ,ಅಡಿಕೆ ಹಾಗೂ ತೆಂಗಿನಮರಗಳನ್ನು ನಾಶಗೊಳಿಸಿದ್ದು, 80 ಸಾವಿರ ರು.ಗಳಿಗೂ ಮಿಕ್ಕಿ ನಷ್ಟವುಂಟಾಗಿದೆ ಎಂದು ಕೃಷಿಕ ಹೆರೂರು ಚಂದ್ರಶೇಖರ್ ಆಳಲನ್ನು ತೋಡಿಕೊಂಡಿದ್ದಾರೆ.

ಗ್ರಾಮದಲ್ಲಿ ಆನೆಗಳ ಉಪಟಳ ಮಿತಿ ಮೀರಿದೆ. ನಿನ್ನೆ ಪ್ರಗತಿಪರ ಕೃಷಿಕ ಚಂದ್ರಶೇಖರ್ ಹೇರೂರು ಅವರ ತೋಟಕ್ಕೆ ಕಾಡಾನೆಯೊಂದು ಲಗ್ಗೆ ಇಟ್ಟು ಫಲಭರಿತ 20 ಅಡಿಕೆ ಗಿಡ, ಕಾಫಿ ಗಿಡ ಮತ್ತು ತೆಂಗಿನ ಮರಗಳನ್ನು ನಾಶ ಮಾಡಿದ್ದು 80 ಸಾವಿರ ರು.ಗಳಿಗೂ ಮಿಕ್ಕಿ ನಷ್ಟವಾಗಿದೆ. ಕೆಲದಿನಗಳ ಹಿಂದಷ್ಟೇ ಇದೇ ತೋಟಕ್ಕೆ ಆನೆಗಳು ನುಗ್ಗಿ ಸುಮಾರು 100 ಅಡಿಕೆ ಮರಗಳನ್ನು ನಾಶ ಮಾಡಿದ್ದವು. ಆ ಘಟನೆಯ ನೋವು ಮಾಸುವ ಮುನ್ನವೇ ಈಗ ಮತ್ತೆ ದಾಳಿ ನಡೆದಿದೆ ಎಂದು ರೈತರು ಸಂಕಷ್ಟ ತೋಡಿಕೊಂಡಿದ್ದಾರೆ. ಆಗಿಂದಾಗ್ಗೆ ಕಾಡಾನೆಗಳು ತೋಟಗಳಿಗೆ ಲಗ್ಗೆಯಿಡುತ್ತಿರುವುದ್ದರಿಂದ ಲಕ್ಷಾಂತರ ರು. ನಷ್ಟವನ್ನು ಕೃಷಿಕರು ಅನುಭವಿಸುವಂತಾಗಿದೆ ಎಂದು ಕೃಷಿಕರು ಆಳಲನ್ನು ತೋಡಿಕೊಂಡಿದ್ದಾರೆ.ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ರೈತರನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಕಾಡಾನೆ ನಿರಂತರ ಹಾವಳಿ ಆನೆ ಮಾನವಸಂಘರ್ಷಗಳ ಬಗ್ಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಮತ್ತು ಪರಿಹಾರ ವಿತರಣೆಯಲ್ಲಿ ವಿಳಂಬ ಧೋರಣೆಯನ್ನು ಖಂಡಿಸಿ ರೈತ ಸಂಘದ ವತಿಯಿಂದ ಕುಶಾಲನಗರದ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡ ಎನ್.ಸಿ.ಪೊನ್ನಪ್ಪ ತಿಳಿಸಿದ್ದಾರೆ.