ಸಾರಾಂಶ
ಸುಂಟಿಕೊಪ್ಪ ನಾಡು ಪ್ರೌಢಶಾಲೆಗೆ ನೂತನ ಕಟ್ಟಡ ನಿರ್ಮಿಸಲು 1980-81ನೇ ಸಾಲಿನ ವಿದ್ಯಾರ್ಥಿಗಳು 1.5 ಲಕ್ಷ ರು. ದೇಣಿಗೆ ನೀಡಿದರು. ಈ ವೇಳೆ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಅಭಿವೃದ್ಧಿಗಾಗಿ ದೇಣಿಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಸುಂಟಿಕೊಪ್ಪ ನಾಡು ಪ್ರೌಢಶಾಲೆಗೆ ನೂತನ ಕಟ್ಟಡ ನಿರ್ಮಿಸಲು 1,50,000 ರು. ದೇಣಿಗೆಯಾಗಿ 1980-81ನೇ ಸಾಲಿನ ವಿದ್ಯಾರ್ಥಿಗಳಾದ ಡಾ. ಅಕ್ಕಪಂಡ ತಮ್ಮಯ್ಯ ಅವರ ನೇತೃತ್ವದಲ್ಲಿ ಕೆ.ಡಿ.ಪ್ರಕಾಶ್, ಸುಬ್ರಮಣಿ ಪಿ.ಪಿ., ಎಫ್.ಬಿ.ಅಶೋಕ, ಕೆ.ಆರ್. ವಾಸು, ರಾಮಕೃಷ್ಣ, ಐ.ಎಸ್.ಗಣೇಶ, ವೀಣಾ ಅವರು ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.ಇತ್ತೀಚೆಗೆ ನಡೆದ ರಾಜ್ಯಮಟ್ಟದ ‘ಬಾಲವಿಜ್ಞಾನ’ ಸಮಾವೇಶದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿರುವ ಬಾಲ ವಿಜ್ಞಾನಿ ಎ.ಎಸ್.ಶ್ರೀಶಾ ಮತ್ತು ಸಾಕ್ಷರತಾ ಇಲಾಖೆ ನಡೆಸಿದ ‘ಪ್ರಾಚ್ಯಪ್ರಜ್ಞೆ’ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಟಿ.ಎಸ್.ಫಾತಿಮತ್‌ಸಹಲ ಅವರನ್ನು ಸನ್ಮಾನಿಸಲಾಯಿತು.ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ವಹಿಸಿದ್ದರು.ಸಮಾರಂಭದಲ್ಲಿ ಮಾತನಾಡಿದ ಕೆ.ಎಸ್.ಮಂಜುನಾಥ್ ಅವರು, ನೂತನ ಕಟ್ಟಡ ನಿರ್ಮಾಣಕ್ಕಾಗಿ ಅಂದಾಜು ಮೌಲ್ಯ 35 ಲಕ್ಷ ರು. ಹಣದ ಅವಶ್ಯಕತೆಯಿದ್ದು, ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹಾಗೂ ಇತರ ದಾನಿಗಳ ಸಹಾಯಹಸ್ತಕ್ಕೆ ಮನವಿ ಮಾಡಿಕೊಂಡರು.
ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಎಸ್.ಇಂದಿರಾ, ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.ಎ.ಸಾವಿತ್ರಿ ಹಾಗೂ ಶಾಲಾ ಸಹಶಿಕ್ಷಕರು ಸಮಾರಂಭದಲ್ಲಿ ಹಾಜರಿದ್ದರು.