ಸಾರಾಂಶ
ವಿನ್ಸೆಂಟ್ ಎಂ.ಬಿ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಕೊಡಗಿನ ಕೊಲ್ಕೊತ್ತಾ ಹಾಗೂ ಫುಟ್ಬಾಲ್ ಕಾಶಿ ಎಂದು ಬಣ್ಣಿಸಲಾಗುವ ಸುಂಟಿಕೊಪ್ಪ ಸಹಿತ ಕೊಡಗು ಜಿಲ್ಲೆಯಲ್ಲಿ ಸೂಕ್ತ ಆಟದ ಮೈದಾನದ ಕೊರತೆ ಇದೆ. ಸುಂಟಿಕೊಪ್ಪದ ಸರ್ಕಾರಿ (ಜಿಎಂಪಿ) ಶಾಲಾ ಮೈದಾನದಲ್ಲೆ ಇಂದಿಗೂ ಕ್ರೀಡಾ ಚಟುವಟಿಕೆ ಆಯೋಜಿಸಲಾಗುತ್ತಿದ್ದು, ಉದಯೋನ್ಮುಖ ಕ್ರೀಡಾಪಟುಗಳ ಅಭ್ಯಾಸಕ್ಕೆ ಸುಸಜ್ಜಿತ ಸ್ಥಳದ ಕೊರತೆ ಇದೆ.
ಸುಂಟಿಕೊಪ್ಪ ಹೋಬಳಿ ಫುಟ್ಬಾಲ್‌ಗೆ ಸೀಮಿತ ಆಗಿಲ್ಲ. ಇಲ್ಲಿನವರು ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಫುಟ್ಬಾಲ್‌ನಲ್ಲೇ ಕ್ರೀಡಾಬದುಕು ಪ್ರಾರಂಭಿಸಿ ಒಲಂಪಿಕ್ ಮತ್ತು ವಿಶ್ವಕಪ್ ಹಾಕಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಗೆಲ್ಲಿಸಿದ ಪದ್ಮಶ್ರೀ ಪುರಸ್ಕೃತ ಡಾ.ಮೊಳ್ಳೇರ ಪಿ.ಗಣೇಶ್, ಟೆನ್ನಿಸ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಮಚ್ಚಂಡ ರೋಹನ್ ಬೋಪಣ್ಣ, ಬಾಸ್ಕೆಟ್‌ಬಾಲ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಪಟ್ಟೆಮನೆ ನವನೀತ, ಜಿಲ್ಲೆಯಲ್ಲಿ ಪುಟ್ಬಾಲ್ ಅಶೋಸಿಯೇಶನ್ ಹುಟ್ಟುಹಾಕಿದ ಪಿ.ಕೆ.ಜಗದೀಶ್ ರೈ, 25 ವರ್ಷಗಳಿಗೂ ಹೆಚ್ಚಿನ ಕಾಲ ತನ್ನ ತಂದೆಯವರ ನೆನಪಿನಲ್ಲಿ ರಾಜ್ಯ ಮಟ್ಟದ ಗೋಲ್ಡ್ ಕಪ್ ಪುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಕೊಂಡು ಬರುತ್ತಿರುವ ಬೆಟ್ಟಗೇರಿ ತೋಟದ ಮಾಲೀಕರಾದ ಡಿ.ವಿನೋದ್ ಶಿವಪ್ಪ ಮತ್ತಿತರರು ಈ ಭಾಗದವರು.ಸಾಮಾನ್ಯವಾಗಿ ಫುಟ್ಬಾಲ್‌ಗೆ ಸುಂಟಿಕೊಪ್ಪದಲ್ಲಿ ಅತೀ ಹೆಚ್ಚು ಅಭಿಮಾನಿಗಳು ಇದ್ದಾರೆ. ಈ ಹಿನ್ನೆಲೆಯಲ್ಲಿ ಸುಂಟಿಕೊಪ್ಪದಲ್ಲಿ 11 ಮಂದಿ ಆಟಗಾರರು ಒಂದು ತಂಡದಲ್ಲಿ ಆಡಲು ಸಾದ್ಯವಾಗುವಂತಹ ಮೈದಾನ ಹಾಗೂ ಪ್ರೇಕ್ಷಕರೂ ಕುಳಿತುಕೊಳ್ಳಲು ಅನುಕೂಲವಾಗುವ ಗ್ಯಾಲರಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಒಳಗೊಳ್ಳುವ ಸ್ಥಳಾವಕಾಶ ಬೇಕು. ಈಗಿನ ಶಾಲಾ ಮೈದಾನದ ಹೊರತು ಸುಸಜ್ಜಿತ ಜಾಗ ಗುರುತಿಸುವ ಕಾರ್ಯವೂ ಆಗಬೇಕು. ಸುಂಟಿಕೊಪ್ಪ ಶಾಲಾ ಮೈದಾನದಲ್ಲಿ ಯಾವುದೇ ವಯೋಮಾನದ ಪಂದ್ಯಾವಳಿ ನಡೆದರೂ ಸಹಸ್ರಾರು ಕ್ರೀಡಾಭಿಮಾನಿಗಳು ಸೇರಿಯೇ ಸೇರುತ್ತಾರೆ. ಈ ಭಾಗದಲ್ಲಿ ಹಿರಿಯ ಮತ್ತು ಕಿರಿಯ ಮಕ್ಕಳು ಅತೀವ ಫುಟ್ಬಾಲ್ ಆಸಕ್ತಿ ಹೊಂದಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು 15 ಬಾರಿ ರಾಜ್ಯ ಮಟ್ಟದವರೆಗೂ, 10 ಸಲ ರಾಷ್ಟ್ರಮಟ್ಟದ ವರೆಗೂ ತೆರಳಿ ಸಾಧನೆ ಮಾಡಿ ತೋರಿಸಿದ್ದಾರೆ. 1960ರ ದಶಕದಿಂದಲೂ ಈ ಮೈದಾನಲ್ಲೇ ಫುಟ್ಬಾಲ್ ಸೇರಿದಂತೆ ಇತರೆ ಕ್ರೀಡಾಕೂಟಗಳು ನಡೆದುಕೊಂಡು ಬಂದಿವೆ. ಬದಲಾದ ಕಾಲಘಟ್ಟದಲ್ಲಿ ಸಮಕಾಲೀನ ಮೈದಾನ ಈಗಿನ ಮಕ್ಕಳಿಗೆ ಅಗತ್ಯವಾಗಿದೆ. ಎಲ್ಲಾ ಕ್ರೀಡೆಗಳೂ ಟರ್ಫ್ ಮೈದಾನದಲ್ಲಿ ನಡೆಯುತ್ತಿದ್ದರೂ ಸುಂಟಿಕೊಪ್ಪದ ಮೈದಾನದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕಲ್ಲು ಮಣ್ಣು ಮಿಶ್ರಿತ ನೆಲ ಹಾಗೂ ಬರಿಗಾಲಿನಲ್ಲಿ ಆಡುವಂತಾಗಿದೆ.ಈಗಿನ ಮೈದಾನಕ್ಕೆ ಮಿತಿಗಳಿವೆ:
ಸುಂಟಿಕೊಪ್ಪ ಶಾಲಾ ಮೈದಾನದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ, ವಿದೇಶಿ ಆಟಗಾರರೂ ಆಡಿರುವ ನಿದರ್ಶನಗಳಿವೆ. ಆದರೆ ಇದು ಪ್ರಾಥಮಿಕ ಶಾಲಾ ಮೈದಾನವಾಗಿರುವುದ್ದರಿಂದ ಶಾಲಾವಧಿಯಲ್ಲಿ ಪಾಠ ಪ್ರವಚನ ಸಂದರ್ಭದಲ್ಲಿ ಯಾವುದೇ ಖಾಸಗಿ ಯಾವುದೇ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಕಷ್ಟ. ಜಿಲ್ಲೆಯಿಂದ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಹಂತದಲ್ಲಿ ಆಟಗಾರರು ಪ್ರತಿಭಾವಂತರಾಗಿದ್ದರೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಅಧಿಕೃತ ಸಂಸ್ಥೆಯ ಮೂಲಕ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಬೇಕಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಈ ಕೊರತೆಯನ್ನು ಮನಗಂಡು 2002ರಲ್ಲಿ ಸಮಾನ ಮನಸ್ಕರು ಹಾಗೂ ಹಿರಿಯ ಕಿರಿಯ ಆಟಗಾರರೊಂದಿಗೆ ಪ್ರಯತ್ನಿಸಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಹುಟ್ಟುಹಾಕಲಾಯಿತು.1996 ರಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್‌ನವರು ಅಂದಿನ ಹಿರಿಯ ಫುಟ್ಬಾಲ್ ಪ್ರೇಮಿ ಕೆ.ಎಂ.ಇಬ್ರಾಹಿಂ ಮಾಸ್ಟರ್ ಅವರ ಮೂಲಕ ಕ್ರೀಡಾ ಪ್ರೇಮಿಯಾಗಿರುವ ಬೆಟ್ಟಗೇರಿ ಸಮೂಹ ತೋಟಗಳ ಮಾಲೀಕ ಡಿ.ವಿನೋದ್ ಶಿವಪ್ಪ ಮನವೊಲಿಸಿ ಅವರ ತಂದೆಯ ಹೆಸರಿನಲ್ಲಿ ರಾಜ್ಯ ಮಟ್ಟದ ಡಿ.ಶಿವಪ್ಪ ಸ್ಮಾರಕ ಗೋಲ್ಡ್ ಕಪ್ ಪುಟ್ಬಾಲ್ ಪಂದ್ಯಾವಳಿ ಆರಂಭಿಸಿದರು. ಈ ಪಂದ್ಯ ಈಗಾಗಲೇ 25 ವರ್ಷಗಳನ್ನು ಪೂರೈಸಿ ಮುಂದುವರಿದಿದೆ.
ಸ್ವತಃ ಆಟಗಾರನಾಗಿದ್ದು, ರಾಜ್ಯ ಸರ್ಕಾರಿ ನೌಕರರ ಪುಟ್ಬಾಲ್ ತಂಡದ ನಾಯಕನಾಗಿಯೂ ಇದ್ದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಈ ಹಿಂದಿನ ಪಿಡಿಒ ವೇಣುಗೋಪಾಲ್ ಸುಂಟಿಕೊಪ್ಪ ಫುಟ್ಬಾಲ್ ಮೈದಾನ ಅಭಿವೃದ್ಧಿಗಾಗಿ ಕ್ರೀಡಾ ಪಟುಗಳ ವೆಚ್ಚ ಭರಿಸಿ ಅವರನ್ನು ಪ್ರೋತ್ಸಾಹಿಸಿದ್ದಾರೆ. ಕ್ರೀಡಾಕೂಟ ಅಯೋಜಿಸಿದ್ದಾಗ ತನ್ನ ಕೈಲಾದ ಸಹಾಯಹಸ್ತ ನೀಡಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ಮುನ್ನಡೆಸಲು ತನ್ನ ಕೊಡುಗೆ ನೀಡಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಮತ್ತು ಫುಟ್ಬಾಲ್ ಆಟಗಾರ ಪಿ.ಇ.ನಂದ ಅವರು ಪ್ರಾಥಮಿಕ ಶಾಲಾ ಬಡಕೂಲಿ ಕಾರ್ಮಿಕ ಮಕ್ಕಳನ್ನು ಊರಿನಲ್ಲಿರುವ ದಾನಿಗಳ ನೆರವಿನಿಂದ 15 ಬಾರಿ ರಾಜ್ಯ ಮಟ್ಟಕ್ಕೆ, 10 ಬಾರಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವಂತೆ ಮಾಡಿದ್ದು ಕಡಿಮೆ ಸಾಧನೆಯೇನು ಅಲ್ಲ. ಈ ಎಲ್ಲ ಇತಿಹಾಸ ಹಾಗೂ ಸಾಧನೆ ಪರಿಗಣಿಸಿದ ಸುಂಟಿಕೊಪ್ಪಕ್ಕೆ ಸುಸಜ್ಜಿತ ಕ್ರೀಡಾಮೈದಾನ ಒದಗಿಸಬೇಕಾದ ಅಗತ್ಯವಿದೆ.ವಾರ್ಷಿಕ ಲೀಗ್ ಪಂದ್ಯಾವಳಿ ಸಂತೋಷ್ ಟ್ರೋಫಿ ವರೆಗಿನ ಆಯ್ಕೆ ಪ್ರಕ್ರಿಯೆವರೆಗೆ ಜಿಲ್ಲೆಯ ಫುಟ್ಬಾಲ್ ಆಟಗಾರರನ್ನು ಪರಿಗಣಿಸುತ್ತಿರುವುದು ಸಾಧನೆಯಾಗಿದ್ದು, ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಫುಟ್ಬಾಲ್ ಮೈದಾನ ಹೊಂದುವುದು ಸಂಸ್ಥೆಯ ಗುರಿಯಾಗಿದೆ.-ಪಿ.ಕೆ.ಜಗದೀಶ್, ರಾಜ್ಯ ಫುಟ್ಬಾಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ.ಸುಂಟಿಕೊಪ್ಪ ಫುಟ್ಬಾಲ್ ಕ್ರೀಡೆ ಮತ್ತು ಮೈದಾನಕ್ಕೆ ಏಳು ದಶಕಗಳ ಇತಿಹಾಸವಿದ್ದು ನಾನು 1970 ದಶಕದಿಂದ ನೋಡುತ್ತಾ ಬಂದಿದ್ದೇನೆ. 1960ರಲ್ಲಿ ಭಾರತ್ ಫುಟ್ಬಾಲ್, ಅನಂತರ ಕಾಮಧೇನು ಫುಟ್ಬಾಲ್ ಕ್ಲಬ್ ಅಸ್ತಿತ್ವದಲ್ಲಿದ್ದವು. 1974ರಲ್ಲಿ ಬ್ಲೂಬಾಯ್ಸ್ ಯೂತ್ ಉದಯವಾಯಿತು ನಾನು ತಾಲೂಕು ಪಂಚಾಯಿತಿ ಸದಸ್ಯನಾಗಿ ಉಪಾಧ್ಯಕ್ಷನಾಗಿ ಸಾಕಷ್ಟು ಅನುದಾನ ತಂದಿದ್ದೇನೆ. ಆದರೆ ಸರ್ಕಾರದ ಕೆಲವೊಂದು ನೀತಿ ನಿಯಮಗಳ ಹಿನ್ನಲೆಯಲ್ಲಿ ನಾವೆಷ್ಟು ಸಾಧಿಸುವ ಉದ್ದೇಶ ಹೊಂದಿದ್ದೆವೋ, ಅವೆಲ್ಲವನ್ನು ಸಾಧಿಸಲು ಆಗಲಿಲ್ಲ.
-ಜೆರ್ಮಿ ಡಿಸೋಜ, ಬ್ಲೂಬಾಯ್ಸ್ ಹಿರಿಯ ಆಟಗಾರ.ಮೊದಲು ನಾವು ವಾರ್ಷಿಕವಾಗಿ ಪಂದ್ಯಾವಳಿ ನಡೆಸಲು ದಾನಿಗಳು ಪ್ರಯೋಜಕರಿಗಾಗಿ ಸಾಕಷ್ಟು ಅಲೆದಾಟ ನಡೆಸುತ್ತಿದ್ದೆವು. ಕೊಡುಗೈ ದಾನಿ ಎನ್ನಿಸಿದ ಡಿ.ವಿನೋದ್ ಶಿವಪ್ಪ ಅವರು 1996 ರಿಂದ ನಮ್ಮ ಬೆನ್ನಲುಬಾಗಿ ನಿಂತ ಹಿನ್ನಲೆಯಲ್ಲಿ ಊರಿನ ಕ್ರೀಡಾ ಪ್ರೇಮಿಗಳ ಆಕರ್ಷಣೆ ಮನಗಂಡ 25 ವರ್ಷಗಳಿಂದ ಫುಟ್ಬಾಲ್ ನಿರಂತರವಾಗಿ ಆಯೋಜಿಸುತ್ತಾ ಬಂದಿದ್ದಾರೆ. ಈ ವರ್ಷದಿಂದ ಅವರ ಪುತ್ರ ಡಿ.ವಿಶಾಲ್ ಶಿವಪ್ಪ ಕೈಜೋಡಿಸಿರುವುದು ನಮಗೆ ಆನೆ ಬಲ ನೀಡಿದೆ.-ಕೆ.ಎಂ.ಆಲಿಕುಟ್ಟಿ, ಬ್ಲೂಬಾಯ್ಸ್ ಸಂಘದ ಅಧ್ಯಕ್ಷ.