ಸಾರಾಂಶ
ಬಾಳೆಕಾಡು ಚಾಮುಂಡೇಶ್ವರಿ ಮತ್ತು ಮುತ್ತಪ್ಪ ಸೇವಾ ಸಮಿತಿ ವತಿಯಿಂದ 60ನೇ ವರ್ಷದ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದ ವಾರ್ಷಿಕ ಮಹೋತ್ಸವ ಅಂಗವಾಗಿ ಅದ್ಧೂರಿಶೋಭಾಯಾತ್ರೆ ನಡೆಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಬಾಳೆಕಾಡು ಚಾಮುಂಡೇಶ್ವರಿ ಮತ್ತು ಮುತ್ತಪ್ಪ ಸೇವಾ ಸಮಿತಿ ವತಿಯಿಂದ 60 ನೇ ವರ್ಷದ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದ ವಾರ್ಷಿಕ ಮಹೋತ್ಸವದ ಅಂಗವಾಗಿ ಅದ್ಧೂರಿ ಶೋಭಯಾತ್ರೆ ರಾತ್ರಿ ನಡೆಯಿತು.ದೇವಾಲಯದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಪೈಂಗುತ್ತಿ ಪೂಜೆ, ಅಲಂಕಾರ ಪೂಜೆ ನಡೆಯಿತು.ಸಂಜೆ ಬಾಳೆಕಾಡುವಿನ ತೋಟದ ದೇವಾಲಯದಿಂದ ಕೇರಳದ 30 ಅಡಿ ಎತ್ತರದ ಬೃಹತ್ ವಿದ್ಯುತ್ ದೀಪ ಅಲಂಕೃತ ಆಕರ್ಷಣೀಯ ಮಂಟಪ ಮತ್ತು ವೈಭವಯುತ ಮತ್ತೊಂದು ಆಕರ್ಷಕ ಮಂಟಪದಲ್ಲಿ ಮುತ್ತಪ್ಪ , ತಿರುವಪ್ಪ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಬಾಳೆಕಾಡು ದೇವಾಲಯದಿಂದ ಸುಂಟಿಕೊಪ್ಪ ಪಟ್ಟಣದತ್ತ ಸಾಗಿತು. ಅದರೊಂದಿಗೆ ಝಗಝಗಿಸುವ ಬೆಳಕಿನೊಂದಿಗೆ ಆರ್ಭಟಿಸಿದ ಡಿಜೆ ಹಾಡಿಗೆ ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರೆ, ಮತ್ತೊಂದು ಕಡೆ ವಾದ್ಯಮೇಳ, ಕೇರಳದ ಸಿಂಗಾರಿ ಮೇಳಕ್ಕೆ ಮಕ್ಕಳು, ಮಹಿಳೆಯರು, ಯುವಕರು, ಯುವತಿಯರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.ಸಮಿತಿಯ ಸದಸ್ಯರು ಸಮವಸ್ತ್ರ ಮತ್ತು ಮಲಯಾಳಿ ಸಮುದಾಯದ ಭಕ್ತರು ಬಿಳಿ ವಸ್ತ್ರದಲ್ಲಿ ಮಿಂಚಿದರು.ಈ ಅತ್ಯಕರ್ಷಕವಾದ ಮನಸೂರೆಗೊಂಡ ಮೆರವಣಿಗೆಯನ್ನು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಎರಡು ಬದಿಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದರು. ಪಟ್ಟಣದ ಕನ್ನಡ ವೃತ್ತಕ್ಕೆ ಆಗಮಿಸಿದ ವಸೂರಿಮಲೆ ದೇವಿಯ ಸ್ಚಾಗತಕ್ಕೆ ಸಿಡಿಲಬ್ಬರದ ಪಟಾಕಿ ಮತ್ತು ಬಾನಂಚಿನಲ್ಲಿ ಬಣ್ಣಬಣ್ಣದ ಪಟಾಕಿಯ ಚಿತ್ತಾರ ಇನ್ನಷ್ಟು ಆಕರ್ಷಿಸಿತು.ಈ ಮೆರವಣಿಗೆಯಲ್ಲಿ ಹರಕೆಯ ಬಣ್ಣಬಣ್ಣದ ಪೇಪರ್ ನಿಂದ ಅಲಂಕೃತವಾದ ಮರದ ಕಳಸವನ್ನು ವ್ರತಧಾರಿಗಳು ಹೊತ್ತು ಪಟ್ಟಣದ ಪ್ರಮುಖ ಬೀದಿಯಲ್ಲಿ ಕುಣಿಯುತ್ತಾ ಸಾಗಿದರು.ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರೂ ಸಮಿತಿಯ ಸದಸ್ಯರು ವಾಹನ ಸವಾರರಿಗೆ ತೊಂದರೆಯಾಗದಂತೆ ಸುಲಲಿತವಾಗಿ ಸಂಚರಿಸಲು ಪೊಲೀಸರದೊಂದಿಗೆ ಕೈಜೋಡಿಸಿದ್ದು ಜನಮನ್ನಣೆಗೆ ಪಾತ್ರವಾಯಿತು. ಈ ಮೆರವಣಿಗೆಯಲ್ಲಿ ಮುತ್ತಪ್ಪ ಮತ್ತು ತಿರುವಪ್ಪ ದೇವರ ಸ್ತಬ್ಥಚಿತ್ರ ಅದರೊಂದಿಗೆ ಮೂರು ಕಳಶದ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಸುಂಟಿಕೊಪ್ಪ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ ಕಳಸ ಪೂಜೆ ನಡೆಸಿ ದೇವಾಲಯದಲ್ಲಿ ಹರಕೆ ಸಮರ್ಪಿಸಿ ಕೊನೆಯಲ್ಲಿ ಮನಮೋಹಕ ಚಂಡೆವಾದ್ಯದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.ನೆರೆದಿದ್ದ ಭಕ್ತರಿಗೆ ಮಧ್ಯಾಹ್ನ ಬಾಳೆಕಾಡು ತೋಟದ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ಏರ್ಪಾಡಿಸಲಾಗಿತ್ತು.ಸಮಿತಿ ಅಧ್ಯಕ್ಷ ಪ್ರಶಾಂತ್( ಪ್ರಶು), ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಸತೀಶ, ಸಹಕಾರ್ಯದರ್ಶಿ ಪ್ರಕಾಶ್, ಸಹಖಜಾಂಚಿ ವಸಂತ ಸೇರಿದಂತೆ ಸಂದೀಪ್, ಸುಧಿ, ಮೋಹನ್, ಪ್ರವೀಣ್, ಅಶೋಕ ಸೇರಿದಂತೆ , ಪದಾಧಿಕಾರಿಗಳು, ಬಾಳೆಕಾಡು ತೋಟದ ಕಾರ್ಮಿಕರು, ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.