ಸುಂಟಿಕೊಪ್ಪ: ಅದ್ಧೂರಿ ಆಯುಧಪೂಜಾ ಸಮಾರಂಭ

| Published : Oct 07 2025, 01:03 AM IST

ಸಾರಾಂಶ

ಆಯುಧ ಪೂಜೆ ಮತ್ತು ವಿಜಯದಶಮಿ ಜಾತ್ಯಾತೀತ ಮತ್ತು ಧರ್ಮತೀತ ನೆಲೆಗಟ್ಟಿನಲ್ಲಿ ಆಚರಿಸಲ್ಪಡುತ್ತಿದೆ ಎಂದು ಮಾಜಿ ಸಚಿವರು ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯ ಮುಂಭಾಗದಲ್ಲಿ ಸಭೆ ಸಮಾರಂಭಗಳು ನಡೆಯುವ ಸಂದರ್ಭ ಸಾರ್ವಜನಿಕರನ್ನು ಬಿಸಿಲು ಮಳೆ ಗಾಳಿ ಸಂದರ್ಭ ರಕ್ಷಿಸುವ ಸಲುವಾಗಿ 50 ಲಕ್ಷ ರು. ವೆಚ್ಚದಲ್ಲಿ ಮೇಲ್ಛಾವಣಿ ನಿರ್ಮಾಣ ಮಾಡಲಾಗುವುದು ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಹೇಳಿದ್ದಾರೆ.ಬುಧವಾರ ರಾತ್ರಿ ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ 55ನೇ ವರ್ಷದ ಅದ್ಧೂರಿ ಆಯುಧಪೂಜಾ ಸಮಾರಂಭವು ಸಡಗರ ಸಂಭ್ರಮದಿಂದ ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಂಟಿಕೊಪ್ಪ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಈ ನಿಟ್ಟಿನಲ್ಲಿ ಸುಸಜ್ಜಿತ ಬಸ್‌ನಿಲ್ಧಾಣ ಏಳೂವರೆ ಕೋಟಿ ರು. ವೆಚ್ಚದಲ್ಲಿ ಅಮೃತ್ ಯೋಜನೆ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು. ಧಾರ್ಮಿಕ ಆಚರಣೆಗಳು ಕೇವಲ 1-2 ದಿನಗಳ ಆಚರಣೆಗೆ ಸಿಮೀತವಾಗದೆ. 365 ದಿನಗಳ ಕಾಲವು ಆಚರಣೆ ಮಾಡಬೇಕಾಗಿದೆ ಎಂದು ಕರೆ ನೀಡಿದರು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಆಯುಧಪೂಜೆ ಮತ್ತು ವಿಜಯದಶಮಿಯು ಜಾತ್ಯಾತೀತ ಮತ್ತು ಧರ್ಮತೀತ ನೆಲೆಗಟ್ಟಿನಲ್ಲಿ ಆಚರಿಸಲ್ಪಡುತ್ತಿದ್ದು ಸುಂಟಿಕೊಪ್ಪದಲ್ಲಿ ಆಯುಧಪೂಜಾ ಸಮಾರಂಭ ಇಡೀ ರಾಜ್ಯದಲ್ಲಿ ಗಮನ ಸೆಳೆದ ಕಾರ್ಯಕ್ರಮವಾಗಿದ್ದು ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ಧಾರಿ ನಮ್ಮೆಲ್ಲರದಾಗಿದೆ. ವಾಹನ ಚಾಲಕರ ಸಂಘದ ಸ್ಥಾಪಕ ಅಧ್ಯಕ್ಷರು ಮತ್ತು ತಾಲೂಕು ಪಂಚಾಯಿತಿ ಮತ್ತು ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿರುವ ಜೆರ್ಮಿಡಿಸೋಜ ಅವರು ಸಂಘದ ಉಸ್ತುವಾರಿಯಲ್ಲಿ ಅಂಬ್ಯುಲೆನ್ಸ್ ವಾಹನವನ್ನು ನೀಡಿದಾರೆ. ಕಾಲ ಕಾಲಕ್ಕೆ ಸುಂಟಿಕೊಪ್ಪ ಪಟ್ಟಣಕ್ಕೆ ಅಭಿವೃದ್ಧಿಗೊಳಿಸುವ ಕೆಲಸವನ್ನು ತಮ್ಮ ಅಧಿಕಾರವಧಿಯಲ್ಲಿ ನಡೆದಿವೆ. 5 ಕೋಟಿ ರು. ವೆಚ್ಚದಲ್ಲಿ ಬಸ್‌ನಿಲ್ಧಾಣವನ್ನು ಸ್ಥಳಾಂತರಿಸಿ ಹಳೆಯ ಮಾರುಕಟ್ಟೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ಇತರ ಸಾರ್ವಜನಿಕ ಉಪಯೋಗಕ್ಕೆ ವಿಸ್ತರವಾದ ಜಾಗ ಲಭ್ಯವಾಗಲಿದೆ ಎಂದು ಅವರು ಹೇಳಿದರು. ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಮಾತನಾಡಿ, ವಾಹನ ಚಾಲಕರ ಸಂಘದ ವೇದಿಕೆಯು ಸರ್ವಧರ್ಮ ಸಮ್ಮಿಲನಕ್ಕೆ ವೇದಿಕೆಯಾಗಿದ್ದು ಸುಂಟಿಕೊಪ್ಪದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಈ ವೇದಿಕೆಯು ಚಾಲನೆ ನೀಡಿದ ಹಿರಿಮೆಯನ್ನು ಹೊಂದಿದೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ಪಿ.ಎಂ.ಲತೀಫ್ ಪ್ರಾಸ್ತಾವಿಕವಾಗಿ, ಸಂಘವು ನಡೆದು ಹಾದಿ ಮುಂದಿನ ಸಂಘದ ಕಾರ್ಯಕ್ರಮಗಳಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಅತಿಥಿಗಳಲ್ಲಿ ಒಬ್ಬರಾಗಿದ ಖ್ಯಾತ ಚಲನಚಿತ್ರ ಹಾಸ್ಯನಟ ನಂಜಪ್ಪನ ಮಗ ಗುಂಜಪ್ಪನ ಖ್ಯಾತಿಯ ಟೆನ್ನಿಸ್‌ಕೃಷ್ಣ ಮಾತನಾಡಿ, ತಾವು ಕೊಡಗಿನ ಅಳಿಯನಾಗಿದ್ದು ಕೊಡಗಿನಲ್ಲಿ ಚಲಚಿತ್ರ ತಂಡದ ಮಹಾನು ನಟರಾದ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್ ಮತ್ತಿತರೊಂದಿಗೆ ಚಲನ ಚಿತ್ರೀಕರಣ ಸಂದರ್ಭದಲ್ಲಿ ಪಾಲ್ಗೊಂಡಿದ್ದು ಸುಂಟಿಕೊಪ್ಪದಲ್ಲಿ ಆಯುಧಪೂಜಾ ಸಮಾರಂಭವು ಇಷ್ಟೊಂದು ಅದ್ದೂರಿಯಾಗಿ ಆಚರಿಸುತ್ತಿದ್ದು 55 ವರ್ಷಗಳ ಇತಿಹಾಸ ಇರುವ ಬಗ್ಗೆ ವಾಹನಚಾಲಕ ಸಂಘದ ಪ್ರಯತ್ನಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಡಾ.ಡಿ.ದೇವರಾಜ್ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ದೇವರಾಜ್ ಅವರು ಸಾಮಾನ್ಯದಲ್ಲಿ ಸಾಮಾನ್ಯನಾದ ನನ್ನನು ಸನ್ಮಾನಿಸುವ ಮೂಲಕ ನನ್ನ ತಂದೆ ತಾಯಿಗಳನ್ನು, ನನ್ನೂರು, ಕಂಬಿಬಾಣೆಯ ಜನತೆಯನ್ನು ಗುರು ಹಿರಿಯರನ್ನು ಸನ್ಮಾನಿಸಿದಂತಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಸಮಾರಂಭದ ವೇದಿಕೆಯಲ್ಲಿ ಕುಶಾಲನಗರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಜಿಲ್ಲಾಪಂಚಾಯಿತಿ ಸದಸ್ಯರಾದ ಕೆ.ಪಿ.ಚಂದ್ರಕಲಾ, ಬಿ.ಬಿ.ಭಾರತೀಶ್, ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಸದಸ್ಯರಾದ ರಫೀಕ್‌ಖಾನ್, ಪ್ರಸಾದ್‌ಕುಟ್ಟಪ್ಪ, ಆಲಿಕುಟ್ಟಿ, ಸೋಮನಾಥ್ ಶಾಂತಿ, ವಸಂತಿ, ಮಂಜುಳಾ (ರಾಸಥಿ), ಮಂಗಳಾ, ಗ್ರಾ.ಪಂ.ಮಾಜಿ ಅಧ್ಯಕ್ಷ ಕ್ಲಾಡಿಯಸ್‌ ಲೋಬೋ, ಎವರಿಗ್ರೀನ್ ಗ್ರೂಫ್ ಮಾಲೀಕ ಎ.ಬಿ.ಅಜೀಜ್, ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎ.ಎಂ.ಶರೀಫ್, ಉದ್ಯಮಿ ವಿಲಿಯಂ, ರತ್ನಕುಮಾರ್, ಕಾರ್ಮಿಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಜಿ.ಕುಮಾರ್, ಯಂಕನ ಶ್ರೀರಾಮ್, ವರ್ಕ್ಶಾಪ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್, ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷ ಆರ್.ಕೆ.ಹರೀಶ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಕಾರ್ಯದರ್ಶಿ ಮುನೀರ್ ಮತ್ತಿತರರು ಉಪಸ್ಥಿತರಿದ್ದರು.ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದ್ದ ಸಾರ್ವಜನಿಕ ಭವ್ಯ ವೇದಿಕೆಯಲ್ಲಿ ಬೆಂಗಳೂರಿನ ಖ್ಯಾತ ಆರ್ಕೆಸ್ಟ್ರಾ ತಂಡದವರಿಂದ ಶೈನಿಂಗ್ ಸ್ಟಾರ್ ಮೆಲೋಡಿ ಗಯ್ಸ್ ಆರ್ಕೆಸ್ಟ್ರಾ ತಂಡದಿಂದ ಸಂಗೀತ ರಸಮಂಜರಿ ಹಾಗೂ ಮಿಮಿಕ್ರಿ ಗೋಪಿ ಮತ್ತು ವಿಕ್ಟರಿ ವಾಸು ಇವರಿಂದ ಮಿಮಿಕ್ರಿ ಮತ್ತು ಹಾಸ್ಯಲಾಸ್ಯ ಕಾರ್ಯಕ್ರಮವು ಮಧ್ಯರಾತ್ರಿಯವರೆಗೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನತೆಯ ಜನಮನವನ್ನು ಸೊರೆಗೊಳಿಸಿತು. ಮತ್ತೊಂದು ಕಡೆಯಲ್ಲಿ ಆಕರ್ಷಕ ಕಲಾಕೃತಿಗಳಿಂದ ಸೃಷ್ಟಿಸಿದ ಅಲಂಕಾರಗಳನ್ನು ವೀಕ್ಷಣೆ ಮಾಡುವ ಜನತೆ ಆನಂದವನ್ನು ಪಟ್ಟುಕೊಂಡರು. ವಾಹನಗಳ ಅಲಂಕಾರ, ಮಕ್ಕಳ ಪ್ರತಿಭೆಗಳಿಂದ ಮಂಟಪಗಳು ಮೂಡಿಬಂದು ತುಂಬಾ ಆಕರ್ಷಕವಾಗಿದ್ದು, ನೆರೆದಿದ್ದ ಜನರ ಸಾಗರದ ಮೆಚ್ಚುಗೆಗೆ ಪಾತ್ರವಾಯಿತು.