ಸುಂಟಿಕೊಪ್ಪ: ವಿದ್ಯಾರ್ಥಿ ಸಂಘ ಉದ್ಘಾಟನಾ ಕಾರ್ಯಕ್ರಮ

| Published : Aug 11 2025, 01:57 AM IST

ಸಾರಾಂಶ

ಸಂತ ಮೇರಿ ಶಿಕ್ಷಣ ಸಂಸ್ಥೆಗಳ ಶಾಲಾ ವಿದ್ಯಾರ್ಥಿ ಸಂಘ ಉದ್ಘಾಟನಾ ಕಾರ್ಯಕ್ರಮ ಸಂತ ಮೇರಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಿತು.

ಕನ್ನಡಪ್ರಬ ವಾರ್ತೆ ಸುಂಟಿಕೊಪ್ಪ

ಸಂತ ಮೇರಿ ಶಿಕ್ಷಣ ಸಂಸ್ಥೆಗಳ ಶಾಲಾ ವಿದ್ಯಾರ್ಥಿ ಸಂಘ ಉದ್ಘಾಟನಾ ಕಾರ್ಯಕ್ರಮ ಗುರುವಾರ ಸಂತ ಮೇರಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಟ್ಟಗೇರಿ ಸಮೂಹ ಕಾಫಿ ತೋಟಗಳ ಮಾಲೀಕರು ಮತ್ತು ಉದ್ಯಮಿಗಳಾದ ದೊಡ್ಡಮನೆ ವಿಶಾಲ್ ಶಿವಪ್ಪ ಮಾತನಾಡಿ, ವಿದ್ಯಾರ್ಥಿಗಳು ಭವ್ಯ ಭವಿಷ್ಯ ಮತ್ತು ಬದುಕಿಗೆ ವಿದ್ಯಾಭ್ಯಾಸ ಮೂಲ ಆಧಾರ. ವಿದ್ಯಾಭ್ಯಾಸವು ಪಠ್ಯವನ್ನು ಮಾತ್ರವಲ್ಲದೆ ಕ್ರೀಡೆಯನ್ನು ಒಳಗೊಂಡಿದೆ. ಸಾಧನೆ ಮತ್ತು ಒಳ್ಳೆಯ ಬದುಕಿಗೆ ನಾವು ಆಯ್ಕೆಮಾಡಿಕೊಂಡ ವಿದ್ಯಾಭ್ಯಾಸ ಅಥವಾ ಕ್ರೀಡಾ ಕ್ಷೇತ್ರದಲ್ಲಿ ಏಕಾಗ್ರತೆ ಕಠಿಣ ಪರಿಶ್ರಮ ಅಗತ್ಯ. ಯಾವುದೇ ಸಂದರ್ಭದಲ್ಲೂ ಏಕಾಗ್ರತೆ ಮತ್ತು ಕಠಿಣ ಪರಿಶ್ರಮ ವನ್ನು ಭಂಗಗೊಳಿಸುವ ಆಸೆ ಆಮೀಷಗಳಿಗೆ ಬಲಿಯಾಗದಿರಿ ಎಂಬ ಕಿವಿಮಾತನ್ನು ಅವರು ಹೇಳಿದರು. ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ ಸುಪುಷ್ಠದೇಹದಲ್ಲಿ ಸುಪುಷ್ಠ ಮನಸ್ಸು ಎಂಬ ಗ್ರೀಕ್ ನಾಣ್ಣುಡಿಯಂತೆ ಸದಾ ಎಚ್ಚರವಹಿಸಲು ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಮೇರಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರಾದ ರೇ.ಪಾ.ವಿಜಯಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೋವಿಟಾವಾಸ್ ಮತ್ತು ಸಂತ ಮೇರಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಸೆಲ್ವರಾಜ್ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಿಸ್ತುಬದ್ಧ ಪಥಸಂಚಲನ ಮತ್ತು ಅತಿಥಿಗಳಿಗೆ ಗೌರವ ವಂದನೆಯನ್ನು ಸಲ್ಲಿಸಿದರು.