ಕೊಡಗು ಜಿಲ್ಲೆಯ ನೂತನ ತಾಲೂಕು ಕೇಂದ್ರ ಕುಶಾಲನಗರದಲ್ಲಿ ನೂತನ ತಹಸೀಲ್ದಾರ್‌ ಕಚೇರಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಗೊಂಡಿದೆ. ಆದರೆ ನೂತನ ಕಟ್ಟಡ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳವು ಸದರಿ ಉದ್ದೇಶಕ್ಕೆ ಸೂಕ್ತವಾದುದಲ್ಲ

ಸುಂಟಿಕೊಪ್ಪ: ಕೊಡಗು ಜಿಲ್ಲೆಯ ನೂತನ ತಾಲೂಕು ಕೇಂದ್ರ ಕುಶಾಲನಗರದಲ್ಲಿ ನೂತನ ತಹಸೀಲ್ದಾರ್‌ ಕಚೇರಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಗೊಂಡಿದೆ. ಆದರೆ ನೂತನ ಕಟ್ಟಡ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳವು ಸದರಿ ಉದ್ದೇಶಕ್ಕೆ ಸೂಕ್ತವಾದುದಲ್ಲ ಎಂದು ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪಿ.ಎಫ್. ಸಬಾಸ್ಟೀನ್ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕು ಆಡಳಿತ ಭವನ ನಿರ್ಮಾಣವಾದ ಮೇಲೆ ವಿವಿಧ ಇಲಾಖೆಗಳ ಕಚೇರಿಗಳು ಈ ಭವನಕ್ಕೆ ಸ್ಥಳಾಂತರವಾಗುತ್ತದೆ. ಆದರೆ ಈಗ ಆಯ್ಕೆಯಾಗಿರುವ ಸ್ಥಳವು ಪಾಲಿಟೆಕ್ನಿಕ್‌ಗೆ ಸೇರಿದ ಜಾಗವಾಗಿದೆ. ಕಳೆದ ೨ ದಶಕಗಳಿಂದ ಪ್ರವಾಹಕ್ಕೆ ಮುಳುಗಡೆಯಾಗುವ ಜಾಗವಾಗಿರುತ್ತದೆ ಎಂದು ಸಬಾಸ್ಟೀನ್ ಆತಂಕ ವ್ಯಕ್ತಪಡಿಸಿದ್ದಾರೆ. ಸದರಿ ನಿವೇಶನದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ೨೭೫ ಹಾದು ಹೋಗುತ್ತಿದ್ದು, ಮಳೆಗಾಲದಲ್ಲಿ ಅತಿವೃಷ್ಟಿಯಾದಾಗ ೫ ರಿಂದ ೭ ಅಡಿಗಳವರೆಗೆ ನೀರು ರಸ್ತೆಯ ಮೇಲೆ ವಾರಗಟ್ಟಲೇ ನಿಂತು ಸಂಚಾರಕ್ಕೆ ಆಡಚಣೆಯಾದರೆ ಸಾರ್ವಜನಿಕರಿಗೆ ಕಚೇರಿಗೆ ಬರಲು ದೋಣಿ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಸಬಾಸ್ಟೀನ್ ಹೇಳಿದ್ದಾರೆ. ಕಚೇರಿ ನಿರ್ಮಾಣವಾದ ಮೇಲೆ ದಾಖಲಾತಿಗಳ ಸಂಗ್ರಹ ಕೊಠಡಿ (ದಾಖಲಾತಿ ಕೊಠಡಿ) ಉಪನೊಂದಣಿ ಕಚೇರಿ ಭೂದಾಖಲೆಗಳ ನಿರ್ದೇಶಕರ ಕಚೇರಿ ಆರಂಭವಾಗಬೇಕಾಗುತ್ತದೆ. ಈ ಕಚೇರಿಯು ಈಗ ಗುರುತಿಸಲ್ಪಟ್ಟ ಜಾಗದಲ್ಲಿ ನಿರ್ಮಾಣವಾದರೆ ಅತಿವೃಷ್ಟಿ ಸಂದರ್ಭದಲ್ಲಿ ದಾಖಲೆಗಳು ಪ್ರವಾಹದ ನೀರಿನಲ್ಲಿ ಮುಳುಗಿ ಗಣಕ ಯಂತ್ರಗಳು ದಾಖಲಾತಿಗಳು ನಾಶಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿವೇಶನವು ಕಾವೇರಿ ನದಿಯಿಂದ ಕೇವಲ ೩೦೦ ಮೀಟರ್ ಅಂತರದಲ್ಲಿದೆ ಹಾರಂಗಿ ಜಲಾಶಯದಿಂದ ನೀರು ಬಿಡುವ ಸಂದರ್ಭ ಸರಾಸರಿ ವಾರ್ಷಿಕವಾಗಿ ೩ ಬಾರಿ ರಸ್ತೆ ಮುಳುಗಡೆಯಾಗುತ್ತಿದ್ದು, ಭವಿಷ್ಯದಲ್ಲಿ ನಿರ್ಮಾಣವಾಗುವ ಕಚೇರಿಗೂ ಹಾನಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಆದ್ದರಿಂದ ಭವಿಷ್ಯದ ದೃಷ್ಟಿಯಿಂದ ಮುಂದಾಲೋಚನೆ ಮಾಡಿ ಎತ್ತರವಾದ ಮತ್ತು ಯೋಗ್ಯವಾದ ನಿವೇಶನದಲ್ಲಿ ತಾಲೂಕು ಆಡಳಿತ ಭವನಕ್ಕೆ ಮುಂದಾಗಬೇಕಾಗಿಯೂ ಈಗ ಉದ್ದೇಶಿಸಿರುವ ತಗ್ಗು ಪ್ರದೇಶದಲ್ಲಿ ಕಚೇರಿ ನಿರ್ಮಾಣ ಕೈ ಬಿಡುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಮಬಂಧಿಸಿದವರಲ್ಲಿ ಮನವಿ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿದ್ದಾರೆ.