ಹಿರೇಹಳ್ಳದುದ್ದಕ್ಕೂ ಇರುವ ಬ್ಯಾರೇಜ್‌ಗಳಿಗೆ ಗೇಟ್ ಹಾಕದೆ ನೀರು ಪೋಲು ಮಾಡಿ, ಈಗ ಮಳೆಗಾಲ ಮುಗಿದ ಮೇಲೆ ಹಾಕುವುದಕ್ಕೆ ಮುಂದಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸ್ವಯಂ ದೂರು ದಾಖಲಿಸಿಕೊಂಡಿರುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದರು.

ಕೊಪ್ಪಳ: ಹಿರೇಹಳ್ಳದುದ್ದಕ್ಕೂ ಇರುವ ಬ್ಯಾರೇಜ್‌ಗಳಿಗೆ ಗೇಟ್ ಹಾಕದೆ ನೀರು ಪೋಲು ಮಾಡಿ, ಈಗ ಮಳೆಗಾಲ ಮುಗಿದ ಮೇಲೆ ಹಾಕುವುದಕ್ಕೆ ಮುಂದಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸ್ವಯಂ ದೂರು ದಾಖಲಿಸಿಕೊಂಡಿರುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ''''''''ಕನ್ನಡಪ್ರಭ'''''''' ಮರಳು ದಂಧೆಗಾಗಿ ತೆರೆದ ಬ್ಯಾರೇಜ್ ಗೇಟ್‌ಗಳು ಎನ್ನುವ ತಲೆಬರಹದಡಿಯಲ್ಲಿ ಪ್ರಕಟವಾಗಿರುವ ವರದಿಯ ಪ್ರತಿಯನ್ನು ಪಡೆದ ಅವರು, ಈ ಕುರಿತು ಪರಿಶೀಲನೆ ಮಾಡುವಂತೆ ಸೂಚಿಸಿದರು.

ಕೊಪ್ಪಳ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗೊಂಡ ಪ್ರವಾಸದ ವೇಳೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು, ತಹಸೀಲ್ದಾರ ಕಚೇರಿ, ಆರ್‌ಟಿಒ, ಗ್ರಾಪಂ, ವಿದ್ಯಾರ್ಥಿನಿಲಯಗಳು ಹಾಗೂ ಶಾಲೆಗಳು ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳ ಮೇಲೆ ಆಕಸ್ಮಿಕ ದಾಳಿ, ಕಾರ್ಯಾಚರಣೆ ನಡೆಸಲಾಗಿದೆ. ಇದಕ್ಕಾಗಿ ಸುಮಾರು 65 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡಗಳನ್ನು ರಚಿಸಿ, ನಾಲ್ಕು ಜಿಲ್ಲೆಗಳಲ್ಲಿ ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ನಡೆಸಲಾಗಿದೆ ಎಂದರು.

ಶಾಲೆಗಳ ಮೇಲ್ಚಾವಣಿ ಕುಸಿತ, ಮೂಲಸೌಕರ್ಯ ಕೊರತೆಗಳಂತಹ ಬೇರೆ ಬೇರೆ ವಿಷಯಗಳ ಬಗ್ಗೆ ಮಾಧ್ಯಮಗಳ ವರದಿ ಮತ್ತು ಸಾರ್ವಜನಿಕರ ದೂರುಗಳ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ (ಸುಮೋಟೊ) ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಪ್ರಕರಣಗಳ ವಿಲೇವಾರಿಯಲ್ಲಿ ಆಗುವ ವಿಳಂಬ ತಪ್ಪಿಸಲು ಲೋಕಾಯುಕ್ತ ಸಂಸ್ಥೆಯು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ನಾಗರಿಕರ ಕುಂದುಕೊರತೆಗಳಿಗೆ ಸ್ಪಂದಿಸಿ ಲೋಕಾಯುಕ್ತ ಸಂಸ್ಥೆಯು ಸದಾ ಕಾಲ ಸಾರ್ವಜನಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಲೋಕಾಯುಕ್ತ ಸಂಸ್ಥೆಯಲ್ಲಿರುವ ಸುಮಾರು 30ರಿಂದ 35 ನ್ಯಾಯಾಂಗ ಅಧಿಕಾರಿಗಳು ಹಾಗೂ ಅವರ ಸಿಬ್ಬಂದಿ ಶನಿವಾರ, ಭಾನುವಾರ ಸೇರಿದಂತೆ ರಜಾ ದಿನಗಳಲ್ಲೂ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆ ದಿನಗಳಲ್ಲೂ ಕರ್ತವ್ಯ ನಿರ್ವಹಿಸುವ ಮೂಲಕ ಸಂಸ್ಥೆಯು ಸಾವಿರಾರು ಪ್ರಕರಣಗಳನ್ನು ವಿಲೇವಾರಿ ಮಾಡಿದೆ. ಮಾನವ ಸಂಪನ್ಮೂಲದ ಕೊರತೆಯ ನಡುವೆಯೂ ಲೋಕಾಯುಕ್ತ ಸಂಸ್ಥೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಥೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಇಲ್ಲ ಎಂದು ಕಾರ್ಯಾಚರಣೆ ನಿಲ್ಲಿಸಿಲ್ಲ; ನಿಲ್ಲಿಸುವುದಿಲ್ಲ ಎಂದರು. ಹೊಸದಾಗಿ ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿ ಭರ್ತಿಗೂ ಒತ್ತು ನೀಡುತ್ತಿದ್ದೇವೆ ಎಂದರು.

ತಾವು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ವೇಳೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಈಗ ದಾಖಲಾಗುವ ಪ್ರಕರಣಗಳ ಸಂಖ್ಯೆ ದುಪ್ಪಟ್ಟಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ದಿನೇ ದಿನೇ ದಾಖಲಾಗುವ ದೂರುಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಜನತೆ ರೋಸಿಹೋಗಿ ಲೋಕಾಯುಕ್ತ ಸಂಸ್ಥೆಯ ಬಾಗಿಲು ತಟ್ಟದಂತೆ, ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಜನತೆಗೆ ಸ್ಪಂದಿಸಬೇಕು ಎಂದು ಹೇಳಿದರು.

ಲೋಕಾಯುಕ್ತ ಕಾರ್ಯದರ್ಶಿ ಶ್ರೀನಾಥ, ವಿಚಾರಣಾ ವಿಭಾಗದ ಅಪರ ನಿಬಂಧಕ ಕೃಷ್ಣಯ್ಯ, ಕೊಪ್ಪಳ ಜಿಲ್ಲಾಧಿಕಾರಿ ಡಾ.‌ ಸುರೇಶ ಬಿ. ಇಟ್ನಾಳ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ರಾಯಚೂರು, ಕೊಪ್ಪಳ ಲೋಕಾಯುಕ್ತ ಎಸ್ಪಿ ಸಿದ್ದರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಇದ್ದರು.