ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮತ್ತದೆ ನಿರಾಸೆ

| Published : Aug 20 2025, 02:00 AM IST

ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮತ್ತದೆ ನಿರಾಸೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ 6 ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸೋಮವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದು, ಅದರಲ್ಲಿ ಉತ್ತರ ಕನ್ನಡದ ಪ್ರಸ್ತಾಪವೇ ಇಲ್ಲದಿರುವುದರಿಂದ ಜಿಲ್ಲೆಯ ಜನತೆಗೆ ಸದ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೈಗೆಟುಕದಂತಾಗಿದೆ.

ಕಾರವಾರ: ರಾಜ್ಯದ 6 ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸೋಮವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದು, ಅದರಲ್ಲಿ ಉತ್ತರ ಕನ್ನಡದ ಪ್ರಸ್ತಾಪವೇ ಇಲ್ಲದಿರುವುದರಿಂದ ಜಿಲ್ಲೆಯ ಜನತೆಗೆ ಸದ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೈಗೆಟುಕದಂತಾಗಿದೆ.

ಬಾಗಲಕೋಟೆ, ಯಾದಗಿರಿ, ರಾಯಚೂರಿನಲ್ಲಿ ಶೀಘ್ರದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಬೀದರ್, ಕೊಪ್ಪಳ, ಬೆಳಗಾವಿಯಲ್ಲಿ ಮೂರು ತಿಂಗಳೊಳಗೆ ಆಸ್ಪತ್ರೆ ಲೋಕಾರ್ಪಣೆಯಾಗಲಿವೆ ಎಂದು ಸಚಿವರು ತಿಳಿಸಿದ್ದಾರೆ. ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕೆಂಬ ಬಹುಕಾಲದ ಕನಸಿಗೆ ಮತ್ತೆ ತಣ್ಣೀರೆರಚಿದಂತಾಗಿದೆ.

ಹಿಂದಿನ ಬಿಜೆಪಿ ಸರ್ಕಾರ ಚುನಾವಣೆ ಸಮೀಪಿಸಿದಾಗ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸುವ ಘೋಷಣೆ ಮಾಡಿತ್ತು. ನಂತರ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ತರುವಾಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ ಹಿನ್ನೆಲೆಗೆ ಸರಿದಿತ್ತು. ಇದಾದ ಮೇಲೆ ಕ್ರಿಮ್ಸ್ ಆವರಣದಲ್ಲಿ ₹210 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಮಂಜೂರಾತಿ ಕೋರಿ ಸಲ್ಲಿಕೆಯಾಗಿದ್ದ ಪ್ರಸ್ತಾವವನ್ನು ಮುಂದೂಡುವಂತೆ ಮಾ. 14ರಂದು ಸರ್ಕಾರ ಪತ್ರ ಬರೆದಿತ್ತು.

ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂದು ಸರ್ಕಾರದ ಮೇಲೆ ವಿಧಾನಸಭೆಯಲ್ಲಿ ಒತ್ತಡ ಹೇರಬೇಕಾಗಿದ್ದ ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರದ ಶಾಸಕ ಸತೀಶ ಸೈಲ್ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಆದೇಶ ಅಡ್ಡಿಯಾಗಿದೆ. ಇದರಿಂದ ವಿಧಾನಸಭೆಯಲ್ಲಿ ಕಾರವಾರ ಕ್ಷೇತ್ರ ಅನಾಥವಾದಂತಾಗಿದೆ. ವಿಧಾನಸಭೆಗೆ ಹೋಗಲಾಗದೆ ಇದ್ದರೆ ಹೊರಗಡೆಯಿಂದಲಾದರೂ ಒತ್ತಡ ಹೇರಬಹುದಿತ್ತು. ಆದೂ ಕೂಡ ಸಾಧ್ಯವಾಗದೆ ಇರುವುದು ಕ್ಷೇತ್ರದ ಮಟ್ಟಿಗೆ ದುರದೃಷ್ಟಕರ ಸಂಗತಿಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿತ್ತು. ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿಲ್ಲ ಎಂದರೆ ಅವರೂ ಕೂಡ ಗಂಭೀರ ಪ್ರಯತ್ನ ನಡೆಸಿದಂತೆ ಕಂಡುಬಂದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕೇಣಿ ವಾಣಿಜ್ಯ ಬಂದರು ನಿರ್ಮಾಣದ ಬಗ್ಗೆ ಜನಪ್ರತಿನಿಧಿಗಳು ತೋರುವ ಉತ್ಸಾಹವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ತೋರಿಸಿದರೆ ಈ ವೇಳೆಗಾಗಲೆ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿರುತ್ತಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.