ಸಾರಾಂಶ
ಶಿವಮೊಗ್ಗ : ಬೆಂಗಳೂರಿನ ವಸಂತನಗರದಲ್ಲಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ (52) ಅವರು ಶಿವಮೊಗ್ಗದ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದ ಚಂದ್ರಶೇಖರನ್ ಅವರ ಮೃತದೇಹ ಶಿವಮೊಗ್ಗದ ವಿನೋಬನಗರದ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಂಚೆಯೊಂದನ್ನು ಬಳಸಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ 6 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದು, ಅವರ ಸಾವು ಇದೀಗ ಸಂಚಲನ ಮೂಡಿಸಿದೆ.
ಡೆತ್‌ನೋಟ್‌ನಲ್ಲಿ ತಾವು ನಿರ್ವಹಿಸುತ್ತಿದ್ದ ನಿಗಮದಲ್ಲಿ ಆಗಿರುವ ಅವ್ಯವಹಾರ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಇಲಾಖೆಯ ಖಾತೆಯ ಹಣವನ್ನು ನಿಗಮದ ಅಧಿಕಾರಿಗಳು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ಎಳೆ, ಎಳೆಯಾಗಿ ವಿವರಿಸಿರುವ ಅವರು, ತಾವು ಹೇಡಿಯಲ್ಲ. ಆದರೆ, ಅವಮಾನ ಸಹಿಸಲು ಆಗುತ್ತಿಲ್ಲ. ನಡೆದ ಅಕ್ರಮ ವಹಿವಾಟಿಗೆ ತಾವು ಕಾರಣರಲ್ಲ. ಪ್ರಸ್ತಾಪಿಸಿರುವ ಅಧಿಕಾರಿಗಳೇ ಅಕ್ರಮವೆಸಗಿದ್ದಾರೆ. ಇದೇ ಕಾರಣಕ್ಕಾಗಿ ನೇಣಿಗೆ ಶರಣಾಗುತ್ತಿರುವೆ ಎಂದು ತಿಳಿಸಿದ್ದಾರೆ.
ನಿಗಮಕ್ಕೆ ಸಂಬಂಧಿಸಿದ 187 ಕೋಟಿ ರು. ಅವ್ಯವಹಾರದ ಬಗ್ಗೆ ಉಲ್ಲೇಖಿಸಿ, ಇದಕ್ಕೆ ಕಾರಣರಾದ ಅಧಿಕಾರಿಗಳ ಹೆಸರನ್ನು ಬರೆದಿದ್ದಾರೆ. ತಮ್ಮ ಸಾವಿಗೂ ಹಾಗೂ ನಿಗಮದಲ್ಲಿ ನಡೆದಿರುವ ಅಕ್ರಮಕ್ಕೂ ಈ ಅಧಿಕಾರಿಗಳೇ ಕಾರಣ ಎಂದು ನಮೂದಿಸಿದ್ದಾರೆ ಎಂದು ತಿಳಿದು ಬಂದಿದೆ.