ಕಂಬಳ 24 ಗಂಟೆ ಒಳಗೆ ಮುಕ್ತಾಯಕ್ಕೆ ಸೈರನ್ ಸಹಿತ ಪೂರಕ ಕ್ರಮ
KannadaprabhaNewsNetwork | Published : Oct 14 2023, 01:00 AM IST
ಕಂಬಳ 24 ಗಂಟೆ ಒಳಗೆ ಮುಕ್ತಾಯಕ್ಕೆ ಸೈರನ್ ಸಹಿತ ಪೂರಕ ಕ್ರಮ
ಸಾರಾಂಶ
ಶುಕ್ರವಾರ ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ.
ಕನ್ನಡಪ್ರಭ ವಾರ್ತೆ ಮಂಗಳೂರು ಕಂಬಳವನ್ನು 24 ಗಂಟೆ ಒಳಗೆ ಮುಕ್ತಾಯಗೊಳಿಸಬೇಕು ಎನ್ನುವ ಉದ್ದೇಶದಿಂದ ನಿಗದಿಪಡಿಸಿರುವ ಕಾಲಮಿತಿಯನ್ನು ಕಡ್ಡಾಯಗೊಳಿಸಲು ಪ್ರತೀ ಸಂದರ್ಭದಲ್ಲಿ ಸೈರನ್ ಮೊಳಗಿಸುವ ಪದ್ಧತಿ ಸಹಿತ ವಿವಿಧ ಪೂರಕ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಮಟ್ಟದ ಕಂಬಳ ಹಾಗೂ ಶಿಸ್ತು ಸಮಿತಿ ಸಭೆ ಒಮ್ಮತದ ತೀರ್ಮಾನ ಕೈಗೊಂಡಿದೆ. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ನವೆಂಬರ್‌ನಲ್ಲಿ ವರ್ಷದ ಕಂಬಳ ಋತು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಏರ್ಪಡಿಸಿದ ಸಭೆಯಲ್ಲಿ ನ್ಯಾಯಾಲಯ ಹಾಗೂ ಸರ್ಕಾರದ ಆದೇಶ ಪ್ರಕಾರ ಶಿಸ್ತುಬದ್ಧವಾಗಿ ಕಂಬಳ ಆಯೋಜನೆ ಯಾವ ರೀತಿಯಲ್ಲಿ ಇರಬೇಕು ಎನ್ನುವ ಬಗ್ಗೆ ಸಮಾಲೋಚನೆ ನಡೆಯಿತು. ಕೋಣಗಳಿಗೆ ಹೊಡೆದರೆ ಶಿಕ್ಷೆ: ಕಂಬಳ ಮಂಜೊಟ್ಟಿಗೆ ಬಂದ ಮೇಲೆ ಕಂಬಳ ಓಡಿಸುವವರು ಒಂದು ಬಾರಿ ಮಾತ್ರ ಕೋಣದ ಮೇಲೆ ಮೆಲ್ಲನೆ ಹೊಡೆಯಬಹುದು. ಮತ್ತೆ ಒಂದು ಕಂಬಳದಲ್ಲಿ ಕೋಣಗಳಿಗೆ ಒಂದಕ್ಕಿಂತ ಹೆಚ್ಚುಬಾರಿ ಹೊಡೆದರೆ ಓಡಿಸುವವರಿಗೆ ಒಂದು ಬಾರಿ ಎಚ್ಚರಿಕೆ ನೀಡುವುದು ಹಾಗೂ ಅದರ ಮಾಲೀಕರಿಗೆ ಮಾಹಿತಿ ನೀಡುವುದು. ಎಚ್ಚರಿಕೆ ನೀಡಿದ ಬಳಿಕವೂ ಮುಂದಿನ ಕಂಬಳದಲ್ಲಿ ತಪ್ಪು ಪುನರಾವರ್ತಿಸುವ ಕಂಬಳದ ಓಟಗಾರನಿಗೆ 5,000 ರು. ದಂಡ ವಿಧಿಸುವುದು. ಮತ್ತೆ ಮೂರನೇ ಬಾರಿ ನಿಯಮ ಉಲ್ಲಂಘಿಸುವ ಕಂಬಳದ ಓಟಗಾರನಿಗೆ ಮುಂದಿನ ಒಂದು ಕಂಬಳದಲ್ಲಿ ಅವಕಾಶ ನಿರಾಕರಣೆಯ ಶಿಕ್ಷೆ ನೀಡಲು ಸಭೆ ತೀರ್ಮಾನಿಸಿತು. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಕಾಲಮಿತಿಯಲ್ಲಿ ಕಂಬಳ ಮುಗಿಸಲು ಕೋನಗಳ ಯಜಮಾನರ ಸಹಕಾರ ಮುಖ್ಯವಾಗಿದೆ. ಕಂಬಳ ಕರೆಗಳನ್ನು ಸುವ್ಯವಸ್ಥಿತ ಸ್ಥಿತಿಯಲ್ಲಿಡಬೇಕು, ಪ್ರತಿಯೊದು ಕೋಣಗಳು ಕರೆಗೆ ಬರುವ ಅವಧಿ, ಬಿಡುವ ಅವಧಿ, ಧ್ವನಿವರ್ಧಕ ಘೋಷಣೆ ಚೌಕಟ್ಟು, ಬಹುಮಾನ ವಿತರಣೆ, ಸಭಾ ಕಾರ್ಯಕ್ರಮದ ಅವಧಿ ಸೇರಿದಂತೆ ಕೆಲವೊಂದು ವಿಚಾರದಲ್ಲಿ ಸಮಗ್ರ ಚರ್ಚೆ ನಡೆಸಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾವುದೇ ಕಂಬಳ ಕೋಣಗಳನ್ನು ಬಿಡುವ ಅವಧಿ ಮೀರಿದರೆ ಸೈರನ್ ಮೂಲಕ ಎಚ್ಚರಿಸುವ ವ್ಯವಸ್ಥೆಯನ್ನು ಈ ಬಾರಿಯಿಂದ ಅಳವಡಿಸಲಾಗಿದೆ ಎಂದರು. ರಾಜಧಾನಿ ಕಂಬಳಕ್ಕೆ ಸಹಕಾರ: ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಜಿಲ್ಲಾ ಕಂಬಳ ಸಮಿತಿ, ಕಂಬಳ ಕೋಣಗಳ ಯಜಮಾನರು ಸಂಪೂರ್ಣ ಸಹಕಾರ ನೀಡಲಿದ್ದಾರೆ. ರಾಜಧಾನಿಯಲ್ಲಿ ನಡೆಯುವ ಕಂಬಳಕ್ಕೆ ಈಗಾಗಲೇ 75ಕ್ಕೂ ಅಧಿಕ ಜೋಡಿ ಕೋಣಗಳ ಹೆಸರನ್ನು ಮಾಲೀಕರು ನೋಂದಾಯಿಸಿದ್ದಾರೆ. ಕನಿಷ್ಠ 125 ಜೋಡಿ ಕೋಣಗಳನ್ನು ಕೊಂಡೊಯ್ಯುವ ಕುರಿತು ಸಿದ್ಧತೆ ನಡೆದಿದೆ ಎಂದು ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು. ಕಂಬಳ ಸಮಿತಿ ಉಪಾಧ್ಯಕ್ಷ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು, ಮಾಜಿ ಅಧ್ಯಕ್ಷರಾದ ಬಾರ್ಕೂರು ಶಾಂತರಾಮ ಶೆಟ್ಟಿ, ಪಿ.ಆರ್. ಶೆಟ್ಟಿ, ಎರ್ಮಾಳ್ ರೋಹಿತ್ ಹೆಗ್ಡೆ, ಕಂಬಳ ಕೋಣಗಳ ಯಜಮಾನ ಶ್ರೀಕಾಂತ್ ಭಟ್, ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ, ಕಂಬಳ ವ್ಯವಸ್ಥಾಪಕ ಬ್ರಿಜೇಶ್ ಚೌಟ, ಕಂಬಳ ಶಿಸ್ತು ಸಮಿತಿ ಮುಖ್ಯಸ್ಥ ವಿಜಯ ಕುಮಾರ್ ಕಂಗಿನಮನೆ, ಕಂಬಳ ಸಮಿತಿ ಕೋಶಾಧಿಕಾರಿ ಚಂದ್ರಹಾಸ್ ಸನಿಲ್ ಇದ್ದರು. ಶೀಘ್ರ ಅಸೋಸಿಯೇಷನ್ ಅಸ್ತಿತ್ವಕ್ಕೆ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಸ್ಥಾಪನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಈ ಕುರಿತು ಸರ್ಕಾರಕ್ಕೆ ಈಗಾಲೇ ಸದಸ್ಯರ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಆದರೆ ನಾವು ಕಳುಹಿಸಿ ಕೊಟ್ಟಿರುವ ಸಮಿತಿ ಸದಸ್ಯರ ಸಂಖ್ಯೆಯನ್ನು 11ಕ್ಕೆ ಮಿತಿಗೊಳಿಸುವಂತೆ ಸರ್ಕಾರದಿಂದ ನಿರ್ದೇಶನ ಬಂದಿದೆ. ಶೀಘ್ರದಲ್ಲೇ ಒಮ್ಮತದ ಇನ್ನೊಂದು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ತಿಳಿಸಿದರು.