ಸಾರಾಂಶ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ
ಲೋಕಸಭೆ ಚುನಾವಣೆ ಹಿನ್ನೆಲೆ ಕೇಂದ್ರ ಸರ್ಕಾರ ಜನಪ್ರಿಯ ಘೋಷಣೆಗಳ ಮೊರೆಹೋಗುತ್ತದೆ ಎಂದು ಪ್ರತಿಪಕ್ಷಗಳು ಭಾವಿಸಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ಘೋಷಣೆಗಳಿಂದ ದೇಶದ ಆರ್ಥಿಕತೆ ಹಾಳಾಗುತ್ತದೆ ಎಂಬುದನ್ನು ಮನಗಂಡು ದೇಶದ ಭವಿಷ್ಯಕ್ಕೆ ಪೂರಕವಾದ ಮಧ್ಯಂತರ ಬಜೆಟ್‌ಗೆ ಒತ್ತು ನೀಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.ಆರು ದಶಕಗಳಿಗೂ ಹೆಚ್ಚು ಕಾಲದಿಂದ ಬಗೆಹರಿಯದ ತೆರಿಗೆ ಸಂಬಂಧಿತ ವ್ಯಾಜ್ಯಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. 41,000 ರೈಲುಗಳ ಬೋಗಿಗಳನ್ನು ವಂದೇ ಭಾರತ್ ರೈಲಿನ ಭೋಗಿಯ ಗುಣಮಟ್ಟಕ್ಕೆ ವಿಸ್ತರಿಸಲು ಚಿಂತನೆ ನಡೆಸಿರುವುದು ಖುಷಿ ವಿಚಾರ. ಬಂದರುಗಳ ಅಭಿವೃದ್ಧಿ, ಲಕ್ಷದ್ವೀಪ ಪ್ರವಾಸಿ ತಾಣದ ಅಭಿವೃದ್ಧಿ, ಗೂಡ್ಸ್ ರೈಲುಗಳಿಗೆ ಪ್ರತ್ಯೇಕ ಕಾರಿಡಾರ್, ಎರಡು ಹಾಗೂ ಮೂರನೇ ಹಂತದ ನಗರಗಳಿಗೂ ವಿಮಾನಯಾನ ಸೌಕರ್ಯ, 500ಕ್ಕೂ ಹೆಚ್ಚು ಉಡಾನ್ ಮಾರ್ಗಗಳನ್ನು ಗುರುತಿಸಿರುವುದು ಇವುಗಳು ಮೂಲ ಸೌಕರ್ಯದ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.
ಮನೆಗಳಿಗೆ ಸೋಲಾರ್ ವಿದ್ಯುತ್ ಒದಗಿಸುವುದು, ಹೊಸದಾಗಿ 2 ಕೋಟಿ ಮನೆಗಳ ನಿರ್ಮಾಣ ಇದೆಲ್ಲವೂ ಜನಪರ ಚಿಂತನೆಗೆ ನಿದರ್ಶನವಾಗಿದೆ. ರಕ್ಷಣಾ ಇಲಾಖೆಗೆ 11 ಲಕ್ಷ ಕೋಟಿ ನಿಗದಿಪಡಿಸಿರುವುದು ದೇಶದ ರಕ್ಷಣೆಗೆ ಕೇಂದ್ರ ಸರ್ಕಾರ ನೀಡಿರುವ ಪ್ರಾಶಸ್ತ್ಯಕ್ಕೆ ನಿದರ್ಶನವಾಗಿದೆ. ನ್ಯಾನೋ ಯೂರಿಯಾಬಳಿಕ ಇದೀಗ ನ್ಯಾನೋ ಡಿಎಪಿ ಒದಗಿಸಲು ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ ಎಂದಿದ್ದಾರೆ.ಡೈರಿಗಳಿಗೆ ಶಕ್ತಿ ತುಂಬಲು ಯೋಜನೆ ಘೋಷಣೆಯಾಗಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಒದಗಿಸಲಾಗಿದೆ. 1 ಕೋಟಿ ಮನೆಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ನಿರ್ಧರಿಸಲಾಗಿದೆ. ವಿಶ್ವದ ಅನೇಕ ರಾಷ್ಟ್ರಗಳು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲಿ ನಮ್ಮ ಆರ್ಥಿಕತೆ ಸದೃಢವಾಗಿದೆ. ಇದೇ ಕಾರಣದಿಂದ ಆದಾಯ ತೆರಿಗೆಯಲ್ಲಿ ಹೆಚ್ಚಳ ಮಾಡಿಲ್ಲ. ಲೋಕಸಭೆ ಚುನಾವಣೆ ಬಳಿಕ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಆಗ ಮಂಡನೆಯಾಗುವ ಪೂರ್ಣ ಪ್ರಮಾಣದ ಬಜೆಟ್ ನಲ್ಲಿ ದೇಶಕ್ಕೆ ಇನ್ನಷ್ಟು ಉತ್ತಮ ಕೊಡುಗೆಗಳು ಸಿಗಲಿವೆ ಎಂದು ತಿಳಿಸಿದ್ದಾರೆ.
- - - ಬಾಕ್ಸ್ ಜನಪ್ರಿಯ ಘೋಷಣೆ ಇಲ್ಲದ ಬಜೆಟ್: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಬಡವರು, ಮಹಿಳೆಯರು ಮತ್ತು ಯುವಕರಿಗೆ ಹಾಗೂ ರೈತರಿಗೆ ಆದ್ಯತೆಯನ್ನು ಘೋಷಿಸಿದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ಕುವೆಂಪು ವಿ.ವಿ. ಬಿಒಎಸ್ ಸದಸ್ಯ ಡಾ. ಎಂ.ಎಸ್. ಮಂಜುನಾಥ್ ಅಭಿಪ್ರಾಯಿಸಿದ್ದಾರೆ.ಆದಾಯ ತೆರಿಗೆ ಬದಲಾವಣೆ ಮಾಡದೇ ಜನಪ್ರಿಯ ಘೋಷಣೆ ಇಲ್ಲದೇ, ಆತ್ಮ ನಿರ್ಭಾರ ಭಾರತ್ ಗ್ಯಾರಂಟಿ ಜಾರಿಗೆ ತರಲಾಗಿದೆ. ಶೇ.5.1 ಜಿಡಿಪಿ ದರ ಅಂದಾಜಿಸಿ ಯುವಕರಿಗೆ ಒತ್ತು ನೀಡುವುದಾಗಿ ತಿಳಿಸಿದ್ದಾರೆ. ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಲಾಗಿದೆ. ರಾಜ್ಯದ ತೆರಿಗೆ ಪಾಲನ್ನು ಸಮರ್ಪಕವಾಗಿ ಹಂಚದಿರುವ ಕುರಿತು ದೂರುಗಳಿವೆ. ತೆರಿಗೆ ಸ್ನೇಹಿ ಆಗಿಲ್ಲ. ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿಲ್ಲದಿರುವುದು, ಕರ್ನಾಟಕದ ಪಾಲಿಗೆ ನೀರಾವರಿ, ರೈಲ್ವೆ ಹಾಗೂ ಯಾವುದೇ ಯೋಜನೆಗಳನ್ನು ಪ್ರೋತ್ಸಾಹಿಸದಿರುವುದು ನಿರಾಸೆ ಮೂಡಿಸಿದೆ ಎಂದಿದ್ದಾರೆ.
ಬಡತನ, ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ನಿರ್ದಿಷ್ಟವಾದ ಕಾರ್ಯಕ್ರಮ ಇಲ್ಲದಿರುವುದು. ಯಾವುದೇ ದೂರದೃಷ್ಟಿ ಇಲ್ಲದ, ಬಡ ಹಾಗೂ ಮಾಧ್ಯಮ ವರ್ಗದವರಿಗೆ ಅನುಕೂಲವಲ್ಲದ, ಕಾರ್ಪೊರೇಟ್ ಬಜೆಟ್ ಎಂಬ ಅನಿಸಿಕೆ ಉಂಟಾಗಿದೆ. ನಾಮಕಾವಸ್ತೆ ಮುಂಗಡ ಪತ್ರ ಮಂಡಿಸಲಾಗಿದೆ ಎಂಬಂತಾಗಿದೆ. ಒಟ್ಟಾರೆ ಲೇಖಾನುದಾನ ಪಡೆದುಕೊಂಡಿದ್ದು, ಮುಂದೆ ಚುನಾಯಿತ ಸರ್ಕಾರ ಮಂಡಿಸುವ ಮುಂಗಡ ಪತ್ರದ ಕಡೆ ಕಣ್ಣಿರಿಸಬೇಕಾಗಿದೆ.- - - ಕೋಟ್ಸ್
ದೇಶದ ಯಾವುದೇ ನಾಗರಿಕರಿಗೆ ಹೊಸ ತೆರಿಗೆ ಹೊರೆ ಹಾಕದೇ, ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಮಂಡಿಸಿರುವ ಬಜೆಟ್ ನರೇಂದ್ರ ಮೋದಿ ಅವರ ದೂರದರ್ಶಿತ್ವಕ್ಕೆ, ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಶಿಸ್ತಿನ ಚೌಕಟ್ಟಿನೊಳಗೆ ಮಂಡಿಸಿದ ಬಜೆಟ್. ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸುವ ಕ್ರಮವು ಮೋದಿ ಸರ್ಕಾರದ ಪಾರದರ್ಶಕತೆಗೆ ಹಿಡಿದ ಕೈಗನ್ನಡಿ. ಜಿವೈಎಎನ್ (GYAN) ( ಗರೀಬ್, ಯುವ, ಅನ್ನದಾತನ, ನಾರಿಶಕ್ತಿಯ) ಸಂಯೋಜನೆಯ ಬಜೆಟ್.- ಎಸ್.ಎನ್.ಚನ್ನಬಸಪ್ಪ, ಶಾಸಕ, ಶಿವಮೊಗ್ಗ ನಗರ ಕ್ಷೇತ್ರ.
- - - ಕೇಂದ್ರ ಸರ್ಕಾರದಿಂದ 2023-24ರ ಮಧ್ಯಂತರ ಆಯವ್ಯಯ ಮಂಡನೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹೇಳಿಕೆಯನ್ನು ನಿಜ ಅರ್ಥದಲ್ಲಿ ಸಾಕಾರಗೊಳಿಸುವ ಎಲ್ಲ ಭರವಸೆ ಮೂಡಿಸಿದೆ. ದೇಶದ ನೈಜ ಆರ್ಥಿಕ ಅಭಿವೃದ್ಧಿಗೆ ಮೋದಿಜಿ ಸರ್ಕಾರ ಮತ್ತೊಮ್ಮೆ ಒತ್ತು ನೀಡಿದೆ. 2030ರ ಒಳಗೆ 7-8 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿ ಅಭಿವೃದ್ಧಿ ಹೊಂದಿದ ದೇಶದಲ್ಲಿ ಭಾರತ ಒಂದಾಗಬೇಕೆಂಬುವ ಆಲೋಚನೆ ಹಾಗೂ ನರೇಂದ್ರ ಮೋದಿ ಅವರ ಆಲೋಚನೆಗೆ ಇದೊಂದು ಅಡಿಪಾಯ ಎಂದರೆ ತಪ್ಪಾಗಲಾರದು. ಈ ಆಯ-ವ್ಯಯದಲ್ಲಿ ಪ್ರಮುಖ ಘೋಷಣೆ ಮಾಡುವ ಮೂಲಕ ದೀರ್ಘಾವಧಿ ಅಭಿವೃದ್ಧಿಯತ್ತ ಗಮನ ನೀಡಿದ್ದಾರೆ.- ಡಿ.ಎಸ್. ಅರುಣ್, ಸದಸ್ಯ, ವಿಧಾನ ಪರಿಷತ್ತು
- - - ಕೇಂದ್ರ ಸರ್ಕಾರ ಬಜೆಟ್ ಮಧ್ಯಂತರ ಬಜೆಟ್ ಆಗಿದ್ದರಿಂದ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಆದರೆ, ಪ್ರವಾಸೋದ್ಯಮಕ್ಕೆ ₹75 ಸಾವಿರ ಕೋಟಿ ಮೀಸಲಿಟ್ಟಿರುವುದು ಉತ್ತಮ ಬೆಳವಣಿಗೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆದ್ಯತೆ ನೀಡಿದ್ದಾರೆ. ಒಂದು ರೀತಿ ಅಭಿವೃದ್ಧಿ ಪೂರಕವಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. 2014ರಲ್ಲಿ ಇದ್ದ ಭಾರತಕ್ಕೂ ಈಗಿನ ಭಾರತಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಆರ್ಥಿಕವಾಗಿ ಭಾರತ ಸಾಕಷ್ಟು ಬಲಿಷ್ಠವಾಗಿದೆ. ಭಾರತ ಅಭಿವೃದ್ಧಿ ಪೂರಕವಾಗಿ ಕೇಂದ್ರ ಸರ್ಕಾರ ನಡೆದುಕೊಂಡು ಹೋಗುತ್ತಿದೆ.- ಎನ್.ಗೋಪಿನಾಥ್, ಅಧ್ಯಕ್ಷ, ಜಿಲ್ಲಾ ವಾಣಿಜ್ಯ-ಕೈಗಾರಿಕಾ ಸಂಘ- - - -1ಎಸ್‌ಎಂಜಿಕೆಪಿ10: ಡಾ.ಎಂ.ಎಸ್.ಮಂಜುನಾಥ್
-1ಎಸ್‌ಎಂಜಿಕೆಪಿ11: ಡಿ.ಎಸ್.ಅರುಣ್-1ಎಸ್‌ಎಂಜಿಕೆಪಿ12: ಬಿ.ವೈ.ರಾಘವೇಂದ್ರ
-1ಎಸ್‌ಎಂಜಿಕೆಪಿ13: ಎಸ್.ಎನ್.ಚನ್ನಬಸಪ್ಪ