ಆರ್ಥಿಕ ಶಕ್ತಿಗೆ ಪೂರಕ ಬಜೆಟ್‌: ಸಂಸದ ಬಿ.ವೈ.ರಾಘವೇಂದ್ರ

| Published : Jul 24 2024, 12:22 AM IST

ಸಾರಾಂಶ

ಹಣದುಬ್ಬರ ಪ್ರಮಾಣವು ಕಳೆದ ವರ್ಷ ಶೇ.5.8 ಇದ್ದು, ಶೇ.4.5 ಇಳಿಯುವಲ್ಲಿ ಈ ಬಜೆಟ್‌ ಸಹಕಾರಿಯಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 7ನೇ ಬಾರಿಗೆ ಮಂಡಿಸಿರುವ ಬಜೆಟ್‌ ಸರ್ವ ವ್ಯಾಪಿ, ಸರ್ವ ಸ್ಪರ್ಶಿಯಾಗಿದ್ದು, ದೇಶವು ವಿಶ್ವದಲ್ಲಿ ಆರ್ಥಿಕವಾಗಿ ಅತೀ ವೇಗವಾಗಿ ಬೆಳೆಯಲು ಪೂರಕವಾದ ಬಜೆಟ್‌ ಆಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಹಣದುಬ್ಬರ ಪ್ರಮಾಣವು ಕಳೆದ ವರ್ಷ ಶೇ.5.8 ಇದ್ದು, ಶೇ.4.5 ಇಳಿಯುವಲ್ಲಿ ಈ ಬಜೆಟ್‌ ಸಹಕಾರಿಯಾಗಲಿದೆ. ಅಲ್ಲದೇ ಪ್ರಸ್ತುತ ಈಗಿರುವ 3 ಟ್ರಿಲಿಯನ್ ಆರ್ಥಿಕ ವ್ಯವಹಾರವು 5 ಟ್ರಿಲಿಯನ್ ಅಷ್ಟಾಗುವ ಎಲ್ಲಾ ನಿರೀಕ್ಷೆಯಿದ್ದು, ಜಿಡಿಪಿ ಪ್ರಮಾಣವು ಶೇ. 6.5 ರಿಂದ 7ಕ್ಕೆ ಏರಿಕೆಯಾಗುವುದಾಗಿ ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2030ರವರೆಗೆ ಭಾರತದಲ್ಲಿ ಪ್ರತಿ ವರ್ಷ 78 ಲಕ್ಷ ಯುವಕ-ಯುವತಿಯರಿಗೆ ಉದ್ಯೋಗ ದೊರೆಯುವಲ್ಲಿ ಈ ಬಾರಿಯ ಬಜೆಟ್‌ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕೈಗಾರಿಕಾ ಉತ್ಪನ್ನ ವಲಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಈ ಬಾರಿ ಕೃಷಿ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಮುಂದಿನ 5 ವರ್ಷಗಳಿಗೆ ವಿಸ್ತರಣೆ ಮಾಡುವುದರ ಮೂಲಕ ಬಡಜನರಿಗೆ ಅನ್ನ ನೀಡುವ ಯೋಜನೆ ಮುಂದುವರೆಸಲಾಗಿದೆ. ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆಧ್ಯತೆ ನೀಡುವುದರ ಜೊತೆಗೆ ಉನ್ನತ ಶಿಕ್ಷಣಕ್ಕೆ ನೀಡಲಾಗುವ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಸ್ವಯಂ ಉದ್ಯೋಗ ಕ್ಕೆ ಹೆಚ್ಚಿನ ಆಧ್ಯತೆ ನೀಡುವ ಸಲುವಾಗಿ ಈಗಿರುವ ಮುದ್ರಾ ಯೋಜನೆಯಡಿ ಇರುವ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 3 ಕೋಟಿ ಹೆಚ್ಚುವರಿ ಹೊಸ ಮನೆಗಳ ನಿರ್ಮಾಣಕ್ಕೆ ಆಧ್ಯತೆ ನೀಡುವುದರ ಮೂಲಕ ಬಡವರ ಬಾಳಿಗೆ ಆಶಾಕಿರಣವಾಗಿದೆ. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ಮುಂದಿನ ಹಂತದ ಜಾರಿಗೆ ನಿರ್ಧರಿಸಿದ್ದು, ಇದರಿಂದಾಗಿ 20 ಲಕ್ಷ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಉತ್ತಮ ರಸ್ತೆ ಸಂಪರ್ಕ ದೊರೆಯಲಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ನೆರವು ನೀಡಲು ಜಾಗತಿಕ ಪ್ರವಾಸೋದ್ಯಮ ಹಬ್ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ಆದಾಯ ತೆರಿಗೆ ಪದ್ಧತಿಯಲ್ಲಿ ಹೆಚ್ಚಿನ ನೆರವು ನೀಡುವದರ ಮೂಲಕ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಬದಲಾಗುತ್ತಿರುವ ಭಾರತಕ್ಕೆ ಬುನಾದಿ: ಶಾಸಕ

ಶಿವಮೊಗ್ಗ: ಸತತ 3ನೇ ಬಾರಿಗೆ ಜನಾದೇಶ ಪಡೆದ ನರೇಂದ್ರಮೋದಿಯವರ 3.0 ಸರ್ಕಾರದ ಪೂರ್ಣ ಪ್ರಮಾಣದ ಪ್ರಥಮ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣ, ಯುವಜನ ಸ್ನೇಹಿ, ನಾವೀನ್ಯತೆ ಪೂರಕವಾದ ಮತ್ತು ಮಧ್ಯಮ ವರ್ಗದ ಜನರ ಅನೂಕೂಲಕರವಾದ ಬಜೆಟ್ ಘೋಷಿಸಿದೆ. ಹೊಸ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆ ವಿನಾಯಿತಿ, ಕುಟುಂಬ ಪಿಂಚಣಿ ಮೇಲಿನ ಮಿತಿ ಸರಳೀಕರಣ, ಸ್ಟಾರ್ಟ್ ಆಪ್ ಗಳಿಗೆ ಉತ್ತೇಜಿಸುವ ಸಲುವಾಗಿ ಏಂಜಲ್ ತೆರಿಗೆ ರದ್ದುಗೊಳಿಸುವ ನಿರ್ಧಾರ, ಕಂಪನಿ ತೆರಿಗೆಯನ್ನು ಕಡಿಮೆಗೊಳಿಸಿದ ನಿರ್ಧಾರ, ಪ್ರವಾಸೋದ್ಯಮ ಉತ್ತೇಜಿಸಲು ಕೈಗೊಂಡಿರುವ ವಿಷ್ಣುಪಾದ ಕಾರಿಡಾರ್ ಯೋಜನೆ ಅತ್ಯುತ್ತಮ ನಿರ್ಧಾರವಾಗಿದೆ. ಇನ್ನು ರೈತರಿಗೆ ಹಾಗೂ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಕೃಷಿ ಆಧಾರಿತ ಹೊಸ ಹೊಸ ಸಂಶೋಧನೆಗೆ ಉತ್ತೇಜಿಸಿರುವುದು ಸ್ವಾಗತಾರ್ಹ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅಭಿಪ್ರಾಯಪಟ್ಟರು.