ಹಗಲಿನಲ್ಲೇ 5ಗಂಟೆ ವಿದ್ಯುತ್ ಪೂರೈಸಿ: ಸಿಎಂ
KannadaprabhaNewsNetwork | Published : Nov 01 2023, 01:01 AM IST
ಹಗಲಿನಲ್ಲೇ 5ಗಂಟೆ ವಿದ್ಯುತ್ ಪೂರೈಸಿ: ಸಿಎಂ
ಸಾರಾಂಶ
ಹಗಲಿನಲ್ಲೇ 5ಗಂಟೆ ವಿದ್ಯುತ್ ಪೂರೈಸಿ: ಸಿಎಂಕೃಷಿ ಪಂಸೆಟ್ ಗಳಿಗೆ ಹಗಲಿನ ವೇಳೆ 5:00 ನಿರಂತರ ವಿದ್ಯುತ್ ಸರಬರಾಜು ಮಾಡಿ
ಕೃಷಿ ಪಂಸೆಟ್ ಗಳಿಗೆ ಹಗಲಿನ ವೇಳೆ 5:00 ನಿರಂತರ ವಿದ್ಯುತ್ ಸರಬರಾಜು ಮಾಡಿ ಕನ್ನಡಪ್ರಭ ವಾರ್ತೆ ಮಂಡ್ಯ ಕೃಷಿ ಪಂಸೆಟ್ ಗಳಿಗೆ ಹಗಲಿನ ವೇಳೆ 5:00 ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು. ಮಂಗಳವಾರ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಡ್ಯ ಜಿಲ್ಲೆಯ ಹಲವು ಭಾಗಗಳಲ್ಲಿ ಆನೆ, ಚಿರತೆ, ಹಾವಿನ ಕಾಟ ಇದ್ದು ಕೃಷಿಗೆ ರಾತ್ರಿ ವೇಳೆಗಿಂತ ಹಗಲಿನಲ್ಲೇ ನಿರಂತರ ಐದು ಗಂಟೆ ವಿದ್ಯುತ್ ಕೊಡಬೇಕು ಎನ್ನುವ ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ಕ್ರಮ ವಹಿಸಲು ಸಾಧ್ಯವೇ ಪರೀಕ್ಷಿಸಿ ಎಂದು ಹೇಳಿದರು. ದಿನ ಬಿಟ್ಟು ದಿನ ಬೇರೆ ಬೇರೆ ಬ್ಯಾಚ್ ಗಳಲ್ಲಿ ನಿರಂತರ ಐದು ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಕಡ್ಡಾಯವಾಗಿ ಆಗಲೇಬೇಕು. ಯಾವ ವೇಳೆಯಲ್ಲಿ ವಿದ್ಯುತ್ ಸರಬರಾಜು ಆಗುತ್ತದೆ ಎನ್ನುವ ಮಾಹಿತಿ ಆಯಾ ಭಾಗದ ರೈತರಿಗೆ ಕೊಡಬೇಕು. ಈ ಸಭೆಯಲ್ಲಿ ತೆಗೆದುಕೊಂಡ ಎಲ್ಲಾ ತೀರ್ಮಾನಗಳನ್ನು ಚಾಚೂ ತಪ್ಪದೆ ಜಾರಿ ಮಾಡಬೇಕು. ರೈತರಿಗೆ ದ್ರೋಹ ಮಾಡದೆ ಅವರಿಗೆ ನಡರವಾಗಿ. ತಪ್ಪಿದರೆ ಕ್ರಮ ಖಚಿತ ಎಂದು ಎಚ್ಚರಿಸಿದರು. ಜಿಲ್ಲೆಯ ಯಾವುದೇ ಭಾಗದಲ್ಲೂ ಕುಡಿಯುವ ನೀರಿಗೆ ತೊಂದರೆ ಆಗಬಾರದು. ಬೇಕಿದ್ದರೆ ಎಷ್ಟಾದರೂ ಹಣ ಕೇಳಿ. ಕುಡಿಯುವ ನೀತಿನ ಬಗ್ಗೆ ದೂರು ಬಂದರೆ ನೇರವಾಗಿ ನಿಮ್ಮನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಸಿಇಒಗೆ ತಿಳಿಸಿದರು. ಬರಗಾಲದ ಸಂದರ್ಭದಲ್ಲಿ ನರೇಗಾ ಕೆಲಸ 100 ದಿನ, 120 ದಿನ ಅಂತೆಲ್ಲಾ ಮಿತಿ ಹಾಕಿಕೊಳ್ಳಬೇಡಿ. ಕೆಲಸ ಕೇಳಿದವರಿಗೆಲ್ಲಾ ಕೆಲಸ ಕೊಡಿ. ಹಣ ಬೇಕಿದ್ದರೆ ಸರ್ಕಾರಕ್ಕೆ ಬರೆಯಿರಿ ಎಂದು ಸಿಇಒ ಅವರಿಗೆ ಸೂಚನೆ ನೀಡಲಾಯಿತು. ಕ್ಯಾನ್ಸರ್ ಆಸ್ಪತ್ರೆಯ ಸಿವಿಲ್ ಕೆಲಸ ಮತ್ತು ಲೈಬ್ರೆರಿ ಕಟ್ಟಡದ ಕೆಲಸ ಸೇರಿದಂತೆ ಎಲ್ಲವನ್ನೂ ತ್ವರಿತವಾಗಿ ಮುಗಿಸಲು ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ಸೂಚಿಸಿದರು. ಕ್ಯಾನ್ಸರ್ ರೋಗಿಗಳು ಮೈಸೂರು, ಬೆಂಗಳೂರಿಗೆ ಹೋಗುತ್ತಿದ್ದಾರೆ. ಆದ್ದರಿಂದ ಇಲ್ಲಿ ಕ್ಯಾನ್ಸರ್ ಆಸ್ಪತ್ರೆ ತ್ವರಿತವಾಗಿ ಕೆಲಸ ಆರಂಭಿಸಬೇಕು ಎನ್ನುವ ಸೂಚನೆ ನೀಡಿದರು. 100 ಬೆಡ್ ಗಳ ಹೆರಿಗೆ ಆಸ್ಪತ್ರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಾಕಿ ಕೆಲಸ ಮುಗಿಸಲು ಕೇವಲ 8 ಕೋಟಿ ರೂಪಾಯಿ ಅಗತ್ಯವಿದೆ ಎಂದು ಶಾಸಕ ರವಿ ಗಣಿಗ ಅವರು ಮುಖ್ಯಮಂತ್ರಿಗಳ ಗಮನ ಸೆಳೆದರು. ರವಿಯವರ ಮನವಿಗೆ ಸ್ಪಂದಿಸಿದ ಸಿಎಂ ಹಣ ಬಿಡುಗಡೆಗೊಳಿಸುವುದಾಗಿ ಸೂಚಿಸಿದರು. ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಅಗತ್ಯ ಅಂಡರ್ ಪಾಸ್, ಡ್ರೈನೇಜ್ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ನಡೆಸಬೇಕಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಅಸಮಾಧಾನಗೊಂಡ ಮುಖ್ಯಮಂತ್ರಿಗಳು, ನಾನು ಈ ಬಗ್ಗೆ ಕೇಂದ್ರ ಸಚಿವರನ್ನು ಭೇಟಿಯಾದಾಗ ಅಗತ್ಯ ಕಾಮಗಾರಿಗಳಿಗೆಲ್ಲಾ ಅನುಮತಿ ನೀಡುವ ಭರವಸೆ ನೀಡಿದ್ದರು. ಈ ಬಗ್ಗೆ ಬೇಗ ಸಂಬಂಧಪಟ್ಟವರನ್ನು ಸಂಪರ್ಕಿಸಿ ಪ್ರಕ್ರಿಯೆ ಪೂರ್ಣಗೊಳಿಸಿ ಎನ್ನುವ ಸಲಹೆ ನೀಡಿದರು. ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರ ಕುರಿತು ಸಚಿವ ಚಲುವರಾಯಸ್ವಾಮಿ ಮತ್ತು ಶಾಸಕ ರವಿ ಗಣಿಗ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿ, ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಸ್ಪಷ್ಟ ಸೂಚನೆ ನೀಡಿದರು. ಸಭೆಯಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ವಿಧಾನ ಪರಿಷತ್ ಶಾಸಕರಾದ ಮರಿತಿಬ್ಬೇಗೌಡ, ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ ಹಾಗೂ ವಿಧಾನಸಭೆ ಶಾಸಕರಾದ ಪಿ.ರವಿಕುಮಾರ್, ಎ.ಬಿ ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ ನರೇಂದ್ರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಹೆಚ್.ಟಿ ಮಂಜು, ಕೆ.ಎಂ ಉದಯ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಎನ್.ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್ ನಾಗರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.