ಸಾರಾಂಶ
ಕಲಘಟಗಿ:
ರೈತರ ಪಂಪ್‌ಸೆಟ್‌ಗಳಿಗೆ ಸರ್ಕಾರದ ನಿಯಮದಂತೆ ವಿದ್ಯುತ್ ಪೂರೈಸಬೇಕು. ಆಯಾ ಭಾಗದ ಕಡೆ ಒಂದು ವಾರ ರಾತ್ರಿ, ಇನ್ನೊಂದು ವಾರ ಹಗಲು ಹೊತ್ತಿನಲ್ಲಿ ಸಮಯ ನಿಗದಿಗೊಳಿಸಿ ವಿದ್ಯುತ್ ಪೂರೈಸಿ. ಅದನ್ನು ಬಿಟ್ಟು ಮನಸ್ಸಿಗೆ ಬಂದಂತೆ ನೀಡಬೇಡಿ ಎಂದು ಸಚಿವ ಸಂತೋಷ ಲಾಡ್ ಹೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರಣ್ಯ ಪ್ರದೇಶದ ಕೃಷಿ ಜಮೀನುಗಳಿಗೆ ರಾತ್ರಿ 3 ಗಂಟೆಗೆ ವಿದ್ಯುತ್ ನೀಡಿದರೆ ಕಾಡು ಪ್ರಾಣಿಗಳ ಹಾವಳಿಯಿಂದ ರೈತರಿಗೆ ಹೋಗಲು ಕಷ್ಟವಾಗುತ್ತದೆ. ಅವರಿಗೆ ಹಗಲು ಹೊತ್ತಿನಲ್ಲಿ ಹೆಚ್ಚಿನ ಸಮಯ ವಿದ್ಯುತ್ ನೀಡಲು ಪ್ರಯತ್ನಿಸಿ ಎಂದು ಸೂಚಿಸಿದರು.ನನ್ನ ಅವಧಿಯಲ್ಲಿ ಕೃಷಿ ವರ್ಗಕ್ಕೆ ಹೆಚ್ಚಿನ ವಿದ್ಯುತ್ ಪೂರೈಸಲು ಮಂಜೂರಾದ ಕಾಮಗಾರಿಯ ಸರಿಯಾದ ಮಾಹಿತಿ ನೀಡದ ಪರಿಣಾಮ ಸಮಸ್ಯೆ ಪರಿಹಾರ ಆಗುತ್ತಿಲ್ಲ. ನಿಮ್ಮ ಕಡೆ ಆಗದೆ ಇದ್ದಾಗ ನನ್ನ ಗಮನಕ್ಕೆ ತಂದರೆ ಮೇಲಾಧಿಕಾರಿಗಳ ಜತೆ ಮಾತನಾಡುತ್ತೇನೆ. ತಕ್ಷಣ ನನಗೆ ಮಾಹಿತಿ ನೀಡಿ ಎಂದು ಹೆಸ್ಕಾಂ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಹೊನ್ನೂರಪ್ಪ ಅವರಿಗೆ ಸೂಚಿಸಿದರು.
ಆಸ್ಪತ್ರೆ ಸ್ವಚ್ಛತೆಗೆ ಗಡುವು:ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ 100 ಬೆಡ್ ಹೊಂದಿದ್ದು ಹಿಂದಿನ ಸಭೆಯಲ್ಲಿ ಸ್ವಚ್ಛತೆ ಮಾಡಲು ತಿಳಿಸಲಾಗಿದೆ. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆ, ಪೌರಕಾರ್ಮಿಕರ ಬಳಸಿಕೊಂಡು ಒಂದೊಂದು ದಿನ ಕ್ಯಾಂಪ್ ಮಾಡಿ ಸ್ವಚ್ಛತೆ ಮಾಡಿ. ನನ್ನನ್ನು ಕೂಡಾ ಆಹ್ವಾನಿಸಿದರೆ ಸ್ವಚ್ಛತೆಗೆ ಕೈಜೋಡಿಸುತ್ತೇನೆ. ಸರ್ಕಾರದಿಂದ ಸ್ವಚ್ಛತೆಗೆ ಅನುದಾನ ಬಂದರೂ ನಿರ್ಲಕ್ಷವೇಕೆ ಎಂದು ತಾಲೂಕು ಆರೋಗ್ಯಧಿಕಾರಿ ಎನ್.ಬಿ. ಕರ್ಲವಾಡ ಅವರನ್ನು ಸಚಿವರು ಪ್ರಶ್ನಿಸಿದರು. ಜತೆಗೆ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಸೂಚಿಸಿದರು.
ಸಭೆಯಲ್ಲಿ ತಾಪಂ ಇಒ ಪರಶುರಾಮ ಸಾವಂತ, ಗ್ರೇಡ್-2 ತಹಸೀಲ್ದಾರ್ ಬಸವರಾಜ ಹೊಂಕನ್ನದವರ, ಗ್ಯಾರಂಟಿ ಅನುಷ್ಠಾನದ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ, ಸಿಪಿಐ ಶ್ರೀಶೈಲ್ ಕೌಜಲಗಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ.ಜೆ. ಯೋಗಪ್ಪನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಹರಿಶಂಕರ ಮಠದ, ಸೋಮಶೇಖರ ಬೆನ್ನೂರ ಇದ್ದರು.