ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಅಂಗನವಾಡಿ ಕೇಂದ್ರಗಳಿಗೆ ಮೇ ೧೧ರಿಂದ ೨೬ರ ತನಕ ಬೇಸಿಗೆ ರಜೆ ನೀಡಲಾಗಿದ್ದು, ರಜಾ ಅವಧಿಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸುವ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಅಂಗನವಾಡಿಯಲ್ಲಿ ಇರಬೇಕಾಗಿದೆ. ಇದರಿಂದಾಗಿ ರಜೆ ಮುಗಿದ ಬಳಿಕ ಆಹಾರ ಪೂರೈಕೆ ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ಮನವಿ ಸಲ್ಲಿಸಿ ಆಗ್ರಹಿಸಿದೆ.ಈ ಬಗ್ಗೆ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರಜೆಯ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸಂಬಂಧಿಕರ ಮನೆಗೆ, ಪ್ರವಾಸ ಮತ್ತಿತರ ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಹೊರ ತಾಲೂಕು ಇಲ್ಲವೇ ಹೊರ ಜಿಲ್ಲೆಗಳಿಗೆ ಹೋಗಿರುತ್ತಾರೆ. ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿ ಪೂರೈಕೆ ಮಾಡಿದರೆ ಅದನ್ನು ಸ್ವೀಕರಿಸುವುದಕ್ಕೆ ಸಮಸ್ಯೆಯಾಗುತ್ತದೆ. ಈ ಬಾರಿ ಬೇಸಿಗೆಯ ಪ್ರಖರತೆಯ ಹಿನ್ನೆಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಏಪ್ರಿಲ್ ೧೮ರಿಂದ ರಜೆ ನೀಡಲಾಗಿದೆ. ಆದರೆ ಚುನಾವಣೆಯ ಕಾರಣದಿಂದಾಗಿ ಏಪ್ರಿಲ್ ೧೮ರಿಂದ ಮೇ ೧೦ರವರೆಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಜೆ ಇರಲಿಲ್ಲ. ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಮೇ ೧೧ರಿಂದ ೨೬ರವರೆಗೆ ಅಂಗನವಾಡಿ ಕೇಂದ್ರಗಳಿಗೆ ಬೇಸಿಗೆ ರಜೆ ನೀಡಲಾಗಿದೆ. ಆದರೆ ಇದೇ ಅವಧಿಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸುವ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ.ರಜೆಯ ಸಮಯವಾದ ಕಾರಣ ಈ ಅವಧಿಯಲ್ಲಿ ವೈಯಕ್ತಿಕ ಕಾರ್ಯದ ನಿಮಿತ್ತ ಕಾರ್ಯಕರ್ತೆರು ಮತ್ತು ಸಹಾಯಕಿಯರು ಬೇರೆ ಪ್ರದೇಶಗಳಿಗೆ ಹೋಗಿದ್ದಲ್ಲಿ ಸಾಮಗ್ರಿ ಸ್ವೀಕರಿಸುವುದು ಸಮಸ್ಯೆಯಾಗುತ್ತದೆ. ಅಲ್ಲದೆ ರಜೆ ಅವಕಾಶವನ್ನು ಕೂಡ ಉಪಯೋಗ ಮಾಡದಂತೆ ಮಾಡುವುದು ಸರಿಯಲ್ಲ. ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಸಮಸ್ಯೆಗಳನ್ನು ಇಲಾಖೆ ಅರ್ಥ ಮಾಡಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ತಾರಾ ಬಳ್ಳಾಲ್ ಮನವಿಯಲ್ಲಿ ಆಗ್ರಹಿಸಿದ್ದಾರೆ.