ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಹಾಲು ಉತ್ಪಾದಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗದಂತೆ ಸರಿಯಾದ ಸಮಯಕ್ಕೆ ಪಶು ಆಹಾರ ವ್ಯವಸ್ಥೆ ಮಾಡುವುದಾಗಿ ಮನ್ಮುಲ್ ನಿರ್ದೇಶಕ ಕೃಷ್ಣೆಗೌಡ ಭರವಸೆ ನೀಡಿದರು.ಗೊಲ್ಲರಹಳ್ಳಿ ಡೇರಿ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಘದ ಕಟ್ಟಡ ನಿಧಿಯಿಂದ ಒಂದು ಗೋಡೌನ್ ನಿರ್ಮಾಣವಾದರೆ ಹೆಚ್ಚು ಫೀಡ್ಸ್ ಶೇಖರಿಸಲು ಅವಕಾಶವಾಗುತ್ತದೆ ಎಂದರು.
ಸಂಘದ ಕಟ್ಟಡ ನಿಧಿಯಿಂದ ಸುತ್ತ ಕಾಂಪೌಂಡ್ ನಿರ್ಮಿಸಲು ಚರ್ಚಿಸಲಾಗಿದೆ. ಮ್ಯಾಟ್‌ಗಳನ್ನು ಟೆಂಡರ್ ಆದ ಮೇಲೆ ನೀಡಲಾಗುತ್ತದೆ. 250ಮಿಲ್ಕಿ ಮಿಷನ್‌ಗಳು ನಮ್ಮ ತಾಲೂಕಿಗೆ ಅವಶ್ಯಕತೆ ಇದೆ. ಆದರೆ, ನನಗೆ ಈಗ 104 ಮಾತ್ರ ಲಭ್ಯವಿದ್ದು ಅದನ್ನು ಕೊಡುತ್ತೇನೆ. ಡೇರಿಯಲ್ಲಿ ಹೆಚ್ಚು ಹಾಲು ಶೇಖರಣೆಯಾಗುತ್ತಿರುವುದರಿಂದ 3000 ಲೀಟರ್ ಸಾಮರ್ಥ್ಯ ಇರುವ ಕ್ಯಾಂಟರಿಗೆ ಬದಲಾಗಿ 5000 ಲೀಟರ್ ಸಾಮರ್ಥ್ಯ ಇರುವ ಕ್ಯಾಂಟರ್ ಕೊಡಿಸುವ ಭರವಸೆ ನೀಡಿದರು.ಪ್ರತಿಯೊಬ್ಬರು ತಪ್ಪದೆ ನಿಮ್ಮ ಹಸುಗಳಿಗೆ ವಿಮೆ ಮಾಡಿಸಬೇಕು. ಇದಕ್ಕೆ 1800 ರು. ಆಗುತ್ತದೆ. ಮನ್ಮುಲ್ 50 ರಷ್ಟು ಹಣವನ್ನು ಸೇವಾಧನವಾಗಿ ಕಟ್ಟಿಕೊಡಲಾಗುತ್ತದೆ. ಒಂದು ಹಸುವಿಗೆ 60 ರು. ವಿಮೆ ಮಾಡಿಸಿದರೆ 800 ರು. ಕಟ್ಟಬೇಕಾಗುತ್ತದೆ ಎಂದರು.
ಎಮ್ಮೆ ಹಾಲಿಗೆ ಡೆಲ್ಲಿಯಲ್ಲಿ ಬಹಳ ಬೇಡಿಕೆ ಇದೆ. ತಾಲೂಕಿನಿಂದ ಎಮ್ಮೆ ಹಾಲನ್ನು ಶೇಖರಿಸಿ ಡೆಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕಿದೆ. ಮನ್ಮುಲ್ ನಿಂದ ಎಮ್ಮೆ ಕೊಳ್ಳುವವರಿಗೆ 10 ಸಹಾಯಧನ ನೀಡಲಾಗುತ್ತದೆ. ರೈತರು ಎಮ್ಮೆ ಹಾಲನ್ನು ಡೇರಿ ಸರಬರಾಜು ಮಾಡಬೇಕು. ಡೈರಿಗೆ ಈ ವರ್ಷ 20,83,000 ನಿವ್ವಳ ಲಾಭ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹಾಲು ಸರಬರಾಜು ಮಾಡಿ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿಕೊಳ್ಳಬೇಕು ಎಂದರು.ಇದೇ ವೇಳೆ ಸಂಘದಿಂದ ಮನ್ಮುಲ್ ನಿರ್ದೇಶಕರಾದ ಕೃಷ್ಣೆಗೌಡ, ಗೆಜ್ಜಲಗೆರೆ ಡೇರಿ ತಾಲೂಕು ಮುಖ್ಯಸ್ಥರಾದ ಡಾ.ಸದಾಶಿವ ಮತ್ತು ಮನ್ಮುಲ್ ವಿಸ್ತರಣಾಧಿಕಾರಿ ರವೀಶ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಡೇರಿ ಅಧ್ಯಕ್ಷ ಕೆ.ಮಹಾದೇವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜಿ.ಭಾಗ್ಯ, ನಿರ್ದೇಶಕರಾದ ಗೋಪಾಲ್, ಎನ್.ಡಿ.ವೆಂಕಟೇಶ್ ನಾಗರಾಜು, ಮಹಾದೇವ, ಸಿದ್ದಯ್ಯ, ಎಚ್.ರವಿ, ಚೆನ್ನಮ್ಮ, ಶಿವಮುತ್ತಮ್ಮ, ಸಿಇಒ ಶಿವಲಿಂಗೇಗೌಡ, ಹಾಲು ಪರೀಕ್ಷಕ ಎಚ್.ಎಂ.ಉಮೇಶ್, ಸಹಾಯಕ ಕಿರಣ್, ಸೇರಿದಂತೆ ಇತರರು ಇದ್ದರು.