ಸಾರಾಂಶ
ಮುಂಗಾರು ಕೃಷಿ ಚಟುವಟಿಕೆ ಶುರುವಾಗಿದ್ದು, ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರವನ್ನು ಸಕಾಲಕ್ಕೆ ರೈತರಿಗೆ ಪೂರೈಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ದಾವಣಗೆರೆ ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ನೇತೃತ್ವದಲ್ಲಿ ಸ್ವಾಭಿಮಾನಿ ಬಳಗ ಮನವಿ ಸಲ್ಲಿಸಿತು.
ದಾವಣಗೆರೆ : ತೀವ್ರ ಬರದಿಂದ ಕಂಗಾಲಾದ ದಾವಣಗೆರೆ ಜಿಲ್ಲೆಯ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಶೀಘ್ರ ಸ್ಪಂದಿಸಿ, ಬೆಳೆ ಪರಿಹಾರ ನೀಡಬೇಕು. ಜೊತೆಗೆ ಮುಂಗಾರು ಕೃಷಿ ಚಟುವಟಿಕೆ ಶುರುವಾಗಿದ್ದು, ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರವನ್ನು ಸಕಾಲಕ್ಕೆ ರೈತರಿಗೆ ಪೂರೈಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ದಾವಣಗೆರೆ ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ನೇತೃತ್ವದಲ್ಲಿ ಸ್ವಾಭಿಮಾನಿ ಬಳಗ ಮನವಿ ಸಲ್ಲಿಸಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಮನವಿ ಅರ್ಪಿಸಿ ಮಾತನಾಡಿದ ಜಿ.ಬಿ.ವಿನಯಕುಮಾರ, ಮಳೆಯನ್ನೇ ನಂಬಿಕೊಂಡು ರೈತರು ಉಳುಮೆ ಮಾಡುತ್ತಾರೆ. ಸಕಾಲಕ್ಕೆ ಮಳೆ ಬಾರದೇ, ಕೆಲವೊಮ್ಮೆ ಕಳಪೆ ಬಿತ್ತನೆ ಬೀಜ, ರಸಗೊಬ್ಬರಗಳಿಂದಲೂ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬೆವರು ಹರಿಸಿ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗದೇ ತೀವ್ರ ಕಂಗಾಲಾಗುತ್ತಿದ್ದಾರೆ. ಈ ಹಿನ್ನೆಲೆ ರೈತರ ಹಿತ ಕಾಯಬೇಕಾದುದುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಕಬ್ಬು ಬೆಳೆಗಾರರು ಜಿಲ್ಲೆಯಲ್ಲಿ ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಜಿಲ್ಲೆಯ ರೈತ ಮುಖಂಡರು, ಕಬ್ಬು ಬಳೆಗಾರರು ಕಬ್ಬು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜಿಲ್ಲೆಯ 2070 ಎಕರೆ ಕಬ್ಬು ಬೆಳೆ ನಾಶವಾದ ಬಗ್ಗೆ ವರದಿ ಇದೆ. 1 ಎಕರೆ ಕಬ್ಬು ಬೆಳೆಯಲು ಕನಿಷ್ಠ ₹45 ಸಾವಿರ ವೆಚ್ಚವಾಗುತ್ತದೆ. ಸಕ್ಕರೆ ಕಾರ್ಖಾನೆ ಮಾಲೀಕರು ₹29,200 ಸಾಲ ನೀಡಿದ್ದಾರೆ ಎಂದರು.
ಕಬ್ಬು ಬೆಳೆಗೆ ಸೂಕ್ತ ಪರಿಹಾರ ನೀಡಿ:
ಕಳೆದ ವರ್ಷ ಜೂನ್‌ನಿಂದ ನವೆಂಬರ್ ಅವಧಿಯಲ್ಲಿ ರೈತರು ಕಬ್ಬು ನಾಟಿ ಮಾಡಿದ್ದರು. ಕಬ್ಬು ಬೆಳೆ ನಿರೀಕ್ಷೆಯಲ್ಲಿ ರೈತರು ಸಾಕಷ್ಟು ಸಾಲ ಮಾಡಿ, ಬೆಳೆ ಬೆಳೆದಿದ್ದರು. ಬೆಳೆ ರೈತರ ಕೈಗೆ ಸಿಗದೇ, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಂಕಷ್ಟ ಪರಿಹಾರಕ್ಕೆ ಜಿಲ್ಲಾಡಳಿತ, ರಾಜ್ಯ ಸರ್ಕಾರ ಪ್ರಥಮಾದ್ಯತೆ ಮೇಲೆ ಧಾವಿಸಬೇಕು. ಕಬ್ಬುಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಕಳೆದ ವರ್ಷ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಈ ಸಲ ಮುಂಗಾರು ಪೂರ್ವದ ಮಳೆ ಒಂದಿಷ್ಟು ಆಶಾಭಾವನೆ ತಂದಿದೆ. ಅದಕ್ಕೆ ತಕ್ಕಂತೆ ಸರ್ಕಾರ, ಜಿಲ್ಲಾಡಳಿತವೂ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಮಳೆ ಶುರುವಾದ ಹಿನ್ನೆಲೆಯಲ್ಲಿ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ರೈತರಿಗೆ ಅನಾನುಕೂಲ ಆಗದಂತೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಪೂರೈಸಲು ಜಿಲ್ಲಾಡಳಿತ ಮುಂದಾಗಬೇಕು. ಕಾಳಸಂತೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಕಲಿ ಬೀಜ ಮಾರಾಟ ಮಾಡುವವರನ್ನು ಮಟ್ಟ ಹಾಕಬೇಕು. ಇಂತಹವರ ಮೇಲೆ ಕಣ್ಗಾವಲು ಇಡಬೇಕು ಎಂದು ವಿನಯಕುಮಾರ್ ಕೋರಿದರು.
ಜಿಲ್ಲಾಡಳಿತವು ರೈತ ಸಂಘಟನೆಗಳು, ಮುಖಂಡರ ಸಭೆ ಕರೆದು, ಸಮಸ್ಯೆಗಳ ಆಲಿಸಬೇಕು. ತಾಲೂಕು ಕೇಂದ್ರಗಳಲ್ಲೂ ಉಪವಿಭಾಗಾಧಿಕಾರಿ, ತಹಸೀಲ್ದಾರರು ರೈತರ ಸಭೆ ನಡೆಸಲಿ. ಜಿಲ್ಲಾಡಳಿತ, ತಾಲೂಕು ಕೇಂದ್ರಗಳಲ್ಲೂ ಎಸಿ, ತಹಸೀಲ್ದಾರ, ಕೃಷಿ ಅಧಿಕಾರಿಗಳು ರೈತರ ಸಭೆ ನಡೆಸಬೇಕು. ಜಿಲ್ಲಾಡಳಿತ, ಕೃಷಿ ಅಧಿಕಾರಿಗಳು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ, ರೈತರ ಕುಂದುಕೊರತೆ ಆಲಿಸಿ, ಸಮಸ್ಯೆ ಪರಿಹರಿಸಬೇಕು. ಜಿಲ್ಲೆಯ ರೈತರಿಗೆ ಜಿಲ್ಲಾಡಳಿತ ನಮ್ಮ ಜೊತೆಯಲ್ಲಿದೆ ಎಂಬ ನಂಬಿಕೆ, ವಿಶ್ವಾಸ ಮೂಡಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.
ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಬಳ್ಳಾರಿ ಅವರಿಗೆ ಜಿ.ಬಿ.ವಿನಯಕುಮಾರ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು. ಕುರುಬ ಸಮಾಜದ ಮುಖಂಡ ರಾಜು ಮೌರ್ಯ, ಬಳಗದ ಎಸ್.ಎಂ. ಸಿದ್ದಲಿಂಗಪ್ಪ, ಆರ್.ಬಿ.ಪರಮೇಶ, ಷಣ್ಮುಖಪ್ಪ, ಶಾಮನೂರು ಗೀತಾ ಮುರುಗೇಶ, ವೀರಣ್ಣ ಹಾಲೇಕಲ್ಲು, ಷಣ್ಮುಖಪ್ಪ, ಮುರುಡಪ್ಪ, ಪುರಂದರ ಲೋಕಿಕೆರೆ, ಸಾಂಬ್ಲೆ ಇತರರು ಇದ್ದರು.
ಕ್ಷೇತ್ರದಲ್ಲಿ ಜನಪರ ಹೋರಾಟಗಳ ರೂಪಿಸುತ್ತೇನೆ
- ಶೀಘ್ರದಲ್ಲೇ ಬೆಂಗಳೂರು ಮಾದರಿ ಕೋಚಿಂಗ್ ಸೆಂಟರ್ ಆರಂಭ ದಾವಣಗೆರೆ: ನನ್ನ ರಾಜಕೀಯ ಜೀವನ ಶುರುವಾಗಿದ್ದೇ ದಾವಣಗೆರೆಯಿಂದ. ಯಾವುದೇ ಕಾರಣಕ್ಕೂ ನಾನು ದಾವಣಗೆರೆ ಕ್ಷೇತ್ರವನ್ನು ಬಿಟ್ಟುಹೋಗುವ ಪ್ರಶ್ನೆಯೇ ಇಲ್ಲ ಎಂದು ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ, ಬೆಂಗಳೂರಿನ ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಹೇಳಿದರು.
ನಗರದ ಡಿಸಿ ಕಚೇರಿಯಲ್ಲಿ ಕೃಷಿ ಕ್ಷೇತ್ರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರೈತರ ಸಮಸ್ಯೆ, ಯುವಜನರ ಸಮಸ್ಯೆ, ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ವಿವಿಧ ಜನಪರ ಹೋರಾಟ ಹಮ್ಮಿಕೊಳ್ಳುತ್ತೇನೆ. ಹೊಸ ನಾಯಕತ್ವದ ಜೊತೆಗೆ ಹೊಸ ಅಧಿಕಾರ ಹುಟ್ಟುಹಾಕುವ ಕೆಲಸವನ್ನು ಜವಾಬ್ದಾರಿಯಿಂದ ಮಾಡಲಿದ್ದೇನೆ ಎಂದು ತಿಳಿಸಿದರು.
ದಾವಣಗೆರೆಯಲ್ಲೂ ಕೋಚಿಂಗ್ ಸೆಂಟರ್:
ದಾವಣಗೆರೆ ಜಿಲ್ಲೆಯ ಜನತೆ ನನಗೆ ಅತ್ಯಂತ ಪ್ರೀತಿ, ವಿಶ್ವಾಸವನ್ನು ಕೊಟ್ಟಿದ್ದಾರೆ. ಆ ಜನರ ಕಷ್ಟ, ಸುಖ ಎರಡರಲ್ಲೂ ನಾನು ಭಾಗಿಯಾಗುತ್ತೇನೆ. ಬೆಂಗಳೂರು ಮಾದರಿಯಲ್ಲೇ ದಾವಣಗೆರೆಯಲ್ಲಿಯೂ ಬಡವರ ಮಕ್ಕಳಿಗಾಗಿ ಉಚಿತ ಕೋಚಿಂಗ್ ಸೆಂಟರ್ ಶೀಘ್ರದಲ್ಲೇ ಆರಂಭಿಸುತ್ತೇನೆ ಎಂದು ವಿನಯಕುಮಾರ ಹೇಳಿದರು.