ಭಯೋತ್ಪಾದನೆ ಮಟ್ಟ ಹಾಕಲು ಬಿಜೆಪಿ ಬೆಂಬಲಿಸಿ: ಸದ್ಗುರು ಪ್ರದೀಪ್

| Published : Apr 24 2024, 02:18 AM IST

ಸಾರಾಂಶ

ಹೊಸದುರ್ಗ ತಾಲೂಕಿನ ನಾಕೀಕೆರೆ ಹಾಗೂ ಇನ್ನಿತರ ಗ್ರಾಮಗಳಲ್ಲಿ ಬಿಜೆಪಿ ಮುಖಂಡ ಹಾಗೂ ಉದ್ಯಮಿ ಸದ್ಗುರು ಪ್ರದೀಪ್ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಮತಯಾಚನೆ ಮಾಡಿದರು.

ಕನ್ನಡಪ್ರಭವಾರ್ತೆ ಹೊಸದುರ್ಗ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಭಯೋತ್ಪಾದನೆ ಚಟುವಟಿಕೆಗಳು ಬಹಳಷ್ಟು ವಿರಳವಾಗಿವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಭಯೋತ್ಪಾದನೆ ಮುಕ್ತ ದೇಶಕ್ಕಾಗಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸಿ ಎಂದು ಮುಖಂಡ ಸದ್ಗುರು ಪ್ರದೀಪ್ ಹೇಳಿದರು.

ತಾಲೂಕಿನ ನಾಕೀಕೆರೆ, ಕಿಟ್ಟದಹಳ್ಳಿ, ಶೀರನಕಟ್ಟೆ, ದಾಸಜ್ಜನಹಟ್ಟಿ, ಲಕ್ಕಿಹಳ್ಳಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು. ನರೇಂದ್ರ ಮೋದಿಜಿ ಪ್ರಧಾನಿಯಾದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶ ಬಹಳ ಹೆಸರಾಗಿದೆ. ಭಾರತವನ್ನು ಮತ್ತಷ್ಟು ಸಶಕ್ತ, ಸದೃಢ ರಾಷ್ಟ್ರವನ್ನಾಗಿಸಲು ಮೋದಿಜಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಆರ್ಥಿಕತೆಯಲ್ಲಿ ದೇಶ 5ನೇ ಸ್ಥಾನಕ್ಕೆ ಬಂದಿದೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ದೇಶದ 140 ಕೋಟಿ ಜನರಿಗೆ ಉಚಿತವಾಗಿ ವ್ಯಾಕ್ಸಿನ್‌ ನೀಡಿದ್ದಾರೆ. ಇವರ ಸ್ಥಾನದಲ್ಲಿ ಬೇರೆ ಯಾರೇ ಇದ್ದಿದ್ದರೂ, ದೇಶದ ಜನರು ಯಾವ ಸ್ಥಿತಿಯಲ್ಲಿ ಇರುತ್ತಿದ್ದರು ಎಂಬುದನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಸ್ವಾಮಿ ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ ಹಾಗೂ ಇನ್ನಿತರ ಮಹಾತ್ಮರ ಚಿಂತನೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡು ನರೇಂದ್ರ ಮೋದಿಜಿ ಅವರು ಸರ್ವ ಜನರನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಮುನ್ನೆಡೆಯುತ್ತಿದ್ದಾರೆ. ಇಂತಹ ನಾಯಕತ್ವ ಕಳೆದುಕೊಂಡರೆ ದೇಶ ಬಹಳಷ್ಟು ಹಿನ್ನಡೆ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸೋಣ ಎಂದು ಮತದಾರರಲ್ಲಿ ಮನವಿ ಮಾಡಿದರು.

ಈ ವೇಳೆ ಬಿಜೆಪಿ ಮುಖಂಡರಾದ ಗೂಳಿಹಟ್ಟಿ ಕೃಷ್ಣಮೂರ್ತಿ, ಅನುಸೂಯಮ್ಮ, ಬೋಕಿಕೆರೆ ನಾಗರಾಜ್ ಮತ್ತು ಕಡವಿಗೆರೆ ದೇವರಾಜ್ ಸೇರಿ ಇತರ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.