ಶೈಕ್ಷಣಿಕ ವ್ಯವಸ್ಥೆ ಸರಿಪಡಿಸಲು ಪರಿಷತ್‌ಗೆ ಕಾಂಗ್ರೆಸ್ ಬೆಂಬಲಿಸಿ: ರಾಮಚಂದ್ರಪ್ಪ ಮನವಿ

| Published : Jun 02 2024, 01:45 AM IST

ಶೈಕ್ಷಣಿಕ ವ್ಯವಸ್ಥೆ ಸರಿಪಡಿಸಲು ಪರಿಷತ್‌ಗೆ ಕಾಂಗ್ರೆಸ್ ಬೆಂಬಲಿಸಿ: ರಾಮಚಂದ್ರಪ್ಪ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕರಾದ ರಾಮಚಂದ್ರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‌ಗೆ ಪ್ರಥಮ ಪ್ರಾಶಸ್ತ್ರದ ಮತ ನೀಡುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‌ಗೆ ಪ್ರಥಮ ಪ್ರಾಶಸ್ತ್ರದ ಮತ ನೀಡುವ ಮೂಲಕ ಗೆಲ್ಲಿಸುವಂತೆ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ರಾಮಚಂದ್ರಪ್ಪ ಮನವಿ ಮಾಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟದ ಫಲವಾಗಿ ಕಾಂಗ್ರೆಸ್ ಸರ್ಕಾರ ಕಾಂತರಾಜ್ ವರದಿಯನ್ನು ಸ್ವೀಕಾರ ಮಾಡಿದೆ. ಮುಂದೆ ಅನುಷ್ಠಾನ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಈಗಾಗಲೇ ಮೂರು ಚುನಾವಣೆಯನ್ನು ಜನತೆ ಎದುರಿಸಿದ್ದು ಎಲ್ಲಾ ಚುನಾವಣೆಯಲ್ಲಿಯೂ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಉತ್ತಮರ ಪರವಾಗಿ ಮತವನ್ನು ಚಲಾಯಿಸುವಂತೆ ಮನವಿ ಮಾಡಿತ್ತು. ಬಿಜೆಪಿ ಆಡಳಿತದಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗಿತ್ತು. ಅದನ್ನು ಸರಿಪಡಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಸಿ7ನೇ ವೇತನ ಆಯೋಗದ ಜಾರಿ, ಎನ್‌ಪಿಎಸ್‌ನಿಂದ ಒಪಿಎಸ್ ಆದೇಶ ಸೇರಿದಂತೆ ಶಿಕ್ಷಣ ಕ್ಷೇತ್ರದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸಿದ್ದರಾಮಯ್ಯ ಶ್ರಮಿಸುತ್ತಾರೆ ಎಂದರು.

136 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ಕಾಯ್ದೆಗಳನ್ನು ರೂಪಿಸಿ ಜಾರಿಗೊಳಿಸಲು ವಿಧಾನ ಪರಿಷತ್ ನಲ್ಲಿ ಬಹುಮತ ಅಗತ್ಯವಾಗಿದೆ. ಶಿಕ್ಷಕರು ಹಾಗೂ ಉಪನ್ಯಾಸಕರು ಕಾಂಗ್ರೆಸ್ ಅಭ್ಯರ್ಥಿ ಡಿ ಟಿ.ಶ್ರೀನಿವಾಸ್‌ರವರನ್ನು ಗೆಲ್ಲಿಸಲು ತೀರ್ಮಾನ ಮಾಡಬೇಕು. ಮೂರು ಬಾರಿ ಆಯ್ಕೆ ಆಗಿರುವ ಬಿಜೆಪಿ ಅಭ್ಯರ್ಥಿ ಸಾಧನೆ ಶೂನ್ಯ. ಚುನಾವಣೆ ಸಂಧರ್ಭದಲ್ಲಿ ಬಂದು ಆಸೆ ಆಮಿಷಗಳನ್ನು ವೊಡ್ಡಿ, ಕೊಡುಗೆಗಳನ್ನು ನೀಡಿ ಮಾಯವಾಗುತ್ತಾರೆ. ಮತ್ತೊಂದು ಚುನಾವಣೆಗೆ ಆಗಮಿಸುತ್ತಾರೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ರವರನ್ನು ಗೆಲ್ಲಿಸಿ ತಮ್ಮ ನೈಜ ಪ್ರತಿನಿಧಿಯನ್ನು ಹೊಂದುವಂತೆ ವಿನಂತಿಸಿದರು.

ನಾವು ಯಾರ ಪರವಾಗಿಯೂ ನಿಲ್ಲುವುದಿಲ್ಲ. ನಮ್ಮ ಹೋರಾಟ ನ್ಯಾಯದ ಪರವಾಗಿ ಇರುತ್ತದೆ. ತಪ್ಪು ಮಾಡಿದವರು ಯಾರೇ ಆದರೂ ಅವರ ವಿರುದ್ದವಾಗಿ ಸಹಾ ನಮ್ಮ ಹೋರಾಟ ನಡೆಯುತ್ತದೆ. ನಾವು ಕಾಂಗ್ರೆಸ್ ಪರ ಎನ್ನುವುದು ಸರಿಯಲ್ಲ. ನಾವು ನ್ಯಾಯದ ಪರವಾಗಿ ಇದ್ದೇವೆ ಎಂದು ರಾಮಚಂದ್ರಪ್ಪ ಸ್ಪಷ್ಟಪಡಿಸಿದರು.

ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಆನಂತನಾಯ್ಕ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಡಿ ಟಿ ಶ್ರೀನಿವಾಸ್ ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅನುಭವಿಗಳಾಗಿದ್ದು, ಕೆಎಎಸ್ ಆಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಶ್ರೀನಿವಾಸ್ ಅವರಿಗೆ ಶಿಕ್ಷಕರ ಸಮಸ್ಯೆಗಳ ಅರಿವು ಇದ್ದು ಅವರ ಒಳಿತಿಗಾಗಿ ಶ್ರಮ ಪಡಲಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಇದ್ದಾಗ ಪಠ್ಯವನ್ನು ಕೇಸರಿ ಮಯವಾಗಿಸಲು ಮುಂದಾಗಿತ್ತು. ಪಠ್ಯದ ಗಂದವೇ ಇಲ್ಲದ ವ್ಯಕ್ತಿಯನ್ನು ಪಠ್ಯ ಸಮಿತಿ ಅಧ್ಯಕ್ಷನನ್ನಾಗಿ ಮಾಡಿ ಪಠ್ಯದ ಕ್ರಮವನ್ನು ಹಾಳು ಮಾಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಸರಿಪಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.

ವೆಂಕಟರಾಮಯ್ಯ, ಆದರ್ಶ ಯಾದವ್, ರಾಮಕೃಷ್ಣ, ಎನ್.ಡಿ.ಕುಮಾರ್, ಮಂಜಪ್ಪ, ಸಿ.ಟಿ.ಕೃಷ್ಣಮೂರ್ತಿ, ರಘು, ಪ್ರಸನ್ನ, ಬಿ.ಟಿ.ಜಗದೀಶ್, ರಕ್ಷಿತಾ ಹಾಜರಿದ್ದರು.