ದೇಶ ರಕ್ಷಣೆಗಾಗಿ ಕಾಂಗ್ರೆಸ್ ಬೆಂಬಲಿಸಿ: ಸಚಿವ ಜಮೀರ್ ಅಹ್ಮದ್ ಖಾನ್

| Published : May 06 2024, 12:38 AM IST

ದೇಶ ರಕ್ಷಣೆಗಾಗಿ ಕಾಂಗ್ರೆಸ್ ಬೆಂಬಲಿಸಿ: ಸಚಿವ ಜಮೀರ್ ಅಹ್ಮದ್ ಖಾನ್
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಕೇವಲ ಹಿಂದೂ-ಮುಸ್ಲಿಂ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಕಾಂಗ್ರೆಸ್ ಸಾಧನೆ ಮುಂದಿಟ್ಟು ಮತ ಕೇಳುತ್ತಿದೆ.

ಸಂಡೂರು: ದೇಶ ಹಾಗೂ ಸಂವಿಧಾನ ರಕ್ಷಣೆಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ಸಂಡೂರಿನಲ್ಲಿ ಗುರುವಾರ ಆಯೋಜಿಸಿದ್ದ ಮುತವಲ್ಲಿಗಳ ಸಮಾವೇಶದಲ್ಲಿ ಪಾಲ್ಗೊಂಡು ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ದೇಶ ಹಾಗೂ ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ಹೀಗಾಗಿ ಕೋಮುವಾದಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಲ ತುಂಬಬೇಕಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಅನುಷ್ಠಾನ ಮಾಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರುಪಾಯಿ, ಯುವಕರಿಗೆ ಒಂದು ಲಕ್ಷ ರುಪಾಯಿ ನೀಡುವ ಭರವಸೆ ನೀಡಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಬದ್ಧತೆ ಹಾಗೂ ಬಡವರ ಪರ ಕಾಳಜಿಗೆ ಸಾಕ್ಷಿ ಎಂದರು.

ಬಿಜೆಪಿ ಕೇವಲ ಹಿಂದೂ-ಮುಸ್ಲಿಂ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಕಾಂಗ್ರೆಸ್ ಸಾಧನೆ ಮುಂದಿಟ್ಟು ಮತ ಕೇಳುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣಕ್ಕೆ ಕಾಂಗ್ರೆಸ್ ಬದ್ಧವಾಗಿದೆ. ಬಜೆಟ್ ನಲ್ಲಿ ಅತಿ ಹೆಚ್ಚು ಅನುದಾನ ನೀಡಿದೆ. ಸಮುದಾಯದ ನಾಯಕರು ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ, ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕೆಎಂ ಎಫ್ ಅಧ್ಯಕ್ಷ ಭೀಮನಾಯ್ಕ, ವಕ್ಫ್‌ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಮುಖಂಡರಾದ ಸಿರಾಜ್ ಶೇಕ್, ಇಮಾಮ್‌ ನಿಯಾಜಿ, ಕುರಿ ಶಿವಮೂರ್ತಿ ಮತ್ತಿತರರಿದ್ದರು.