ಸಾರಾಂಶ
ಧಾರವಾಡ:
ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಲು ಹಾಗೂ ಸ್ವಾಭಿಮಾನದಿಂದ ಬದುಕು ಸಾಗಿಸಲು ಕಾಂಗ್ರೆಸ್ ಬೆಂಬಲಿಸುವಂತೆ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮನವಿ ಮಾಡಿದರು.ಕಿತ್ತೂರಿನಲ್ಲಿ ಗುರುವಾರ ನಡೆದ ಧಾರವಾಡ ಗ್ರಾಮೀಣ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ. ರೈತರ, ಯುವಕರ, ಮಹಿಳೆಯರ, ಬಡವರ ಪರವಾಗಿ ಆಡಳಿತ ಮಾಡಿಲ್ಲ. ಹೀಗಾಗಿ ಜನರು ಕಾಂಗ್ರೆಸ್ ಪರವಾಗಿದ್ದಾರೆ. ಅದರಲ್ಲೂ ಗ್ಯಾರಂಟಿ ಯೋಜನೆಯಂತೂ ಕಾಂಗ್ರೆಸ್‌ಗೆ ವರವಾಗಿವೆ ಎಂದರು.
ನಿರಂತರವಾಗಿ 20 ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಆಡಳಿತ ಮಾಡಿರುವ ಪ್ರಹ್ಲಾದ ಜೋಶಿ ಅವರ ಕೊಡುಗೆ ಶೂನ್ಯ. ಆದ್ದರಿಂದ ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ. ಯಾವುದೇ ಸಂಶಯವಿಲ್ಲದೇ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಗೆಲ್ಲಲಿದ್ದಾರೆ ಎಂದರು.ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಜಾತಿ-ಧರ್ಮದ ಬಗ್ಗೆ ವಿಷಬೀಜ ಬಿತ್ತುವ ಜತೆಗೆ ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತು ಜೋಶಿ ಅವರಿಗೆ ಗುಡ್ ಬೈ ಹೇಳಲು ಜನರು ತೀರ್ಮಾನಿಸಿದ್ದಾರೆ. ಕೇವಲ ಪಾಕಿಸ್ತಾನ, ಮುಸಲ್ಮಾನ ಹಾಗೂ ರಾಮಮಂದಿರದ ಬಗ್ಗೆ ಮಾತನಾಡಿ ದೇಶದ ಜನರ ದಾರಿ ತಪ್ಪಿಸಿದ್ದಾರೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ದೇಶ ಲೂಟಿ ಹೊಡೆದು, ದಿವಾಳಿಗೆ ತಂದು ನಿಲ್ಲಿಸಿದೆ. 2014ರಲ್ಲಿ ಚಿನ್ನದ ಬೆಲೆ ₹27 ಸಾವಿರ ಇತ್ತು. ₹75 ಸಾವಿರ ದಾಟಿದೆ. ₹300 ಇದ್ದ ಸಿಲಿಂಡರ್ ಬೆಲೆ ₹1100ಕ್ಕೆ ಹೋಗಿತ್ತು. ಕಾಂಗ್ರೆಸ್ ತುಷ್ಟೀಕರಣ ಎಂದು ಆರೋಪಿಸುವ ಬಿಜೆಪಿಯದು ತುಟ್ಟೀಕರಣ ರಾಜಕಾರಣ ಎಂದು ಬಿಜೆಪಿ ವಿರುದ್ಧ ಲಾಡ್ ಹರಿಹಾಯ್ದರು.
ಹುಲಿ ಕಾರಿಡಾರ್ ನೆಪ:ನದಿಗಳ ಜೋಡಣೆ ಬಗ್ಗೆ ಪ್ರತಿಧ್ವನಿಸುವ ಬಿಜೆಪಿ ಒಂದೇ ಒಂದು ಚೆಕ್ ಡ್ಯಾಂ ಕಟ್ಟಿಲ್ಲ. ಗೋಮಾಂಸ ರಫ್ತಿನಲ್ಲಿ ಭಾರತ 2ನೇ ಸ್ಥಾನ ಪಡೆದಿದೆ. ಗೋಹತ್ಯೆ ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿಗರಿಗೆ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕುಟುಂಬಕ್ಕೆ ವಾರ್ಷಿಕ ₹1 ಲಕ್ಷ, ₹3 ಲಕ್ಷ ವರೆಗೆ ರೈತರ ಸಾಲಮನ್ನಾ, ₹5 ಲಕ್ಷದ ವರೆಗೆ ಆರೋಗ್ಯ ವಿಮೆ ಸಿಗಲಿದೆ. ಹೀಗಾಗಿ ವಿನೋದ ಅಸೂಟಿ ಗೆಲ್ಲಿಸಬೇಕು ಎಂದು ಲಾಡ್ ಕೋರಿದರು.
ಅಭ್ಯರ್ಥಿ ವಿನೋದ ಅಸೂಟಿ, ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಇಸ್ಮಾಯಿಲ್ ತಮಟಗಾರ ಇತರರು ಇದ್ದರು.ಕೈ ಹಿಡಿದ ಮುತ್ತಣ್ಣವರ...ಕಿತ್ತೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಜೆಪಿ ಮುಖಂಡ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಹಾಗೂ ಇತರ ಬಿಜೆಪಿ ಮುಖಂಡರು ಕಾಂಗ್ರೆಸ್ ಅಧಿಕೃತವಾಗಿ ಸೇರ್ಪಡೆಯಾದರು. ಸಚಿವ ಸಂತೋಷ ಲಾಡ್, ವಿನಯ ಕುಲಕರ್ಣಿ ಕಾಂಗ್ರೆಸ್ ಧ್ವಜವನ್ನು ಅವರಿಗೆ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.