ಉಗ್ರರ ವಿರುದ್ಧದ ಕ್ರಮಕ್ಕೆ ಬೆಂಬಲ: ಖರ್ಗೆ

| Published : Apr 27 2025, 01:35 AM IST

ಉಗ್ರರ ವಿರುದ್ಧದ ಕ್ರಮಕ್ಕೆ ಬೆಂಬಲ: ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಶ್ಮೀರದ ಪಹಲ್ಗಾಂ ಉಗ್ರರ ದಾಳಿ ಕುರಿತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳ ಪರಿಣಾಮಗಳ ಬಗ್ಗೆ ಸದ್ಯಕ್ಕೆ ಪರಾಮರ್ಶಿಸುವುದಿಲ್ಲ. ಆದರೆ, ಸರ್ಕಾರದ ನಿರ್ಧಾರಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಶ್ಮೀರದ ಪಹಲ್ಗಾಂ ಉಗ್ರರ ದಾಳಿ ಕುರಿತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳ ಪರಿಣಾಮಗಳ ಬಗ್ಗೆ ಸದ್ಯಕ್ಕೆ ಪರಾಮರ್ಶಿಸುವುದಿಲ್ಲ. ಆದರೆ, ಸರ್ಕಾರದ ನಿರ್ಧಾರಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಡಾ। ಬಿ.ಆರ್‌.ಅಂಬೇಡ್ಕರ್‌ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಹಲ್ಗಾಂ ದಾಳಿ ಭದ್ರತಾ ಲೋಪ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಅದಕ್ಕಾಗಿಯೇ ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಉಗ್ರರ ದಾಳಿಯನ್ನು ಸವಾಲಾಗಿ ಸ್ವೀಕರಿಸಿ ಅವರನ್ನು ಮಟ್ಟ ಹಾಕುವಂತೆ ಸರ್ಕಾರಕ್ಕೆ ಹೇಳಿದ್ದೇವೆ. ಭದ್ರತೆ ಸಮರ್ಪಕವಾಗಿದ್ದರೆ ದುಷ್ಕೃತ್ಯ ನಡೆಯುತ್ತಿರಲಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿದ್ದೇವೆ. ಏನೇ ಆದರೂ ದೇಶದ ದೃಷ್ಟಿಯಿಂದ ಒಗ್ಗಟ್ಟಿನಿಂದ ಎಲ್ಲರೂ ಕೆಲಸ ಮಾಡಬೇಕಿದೆ. ಉಗ್ರರ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದರು.

ಪಾಕ್‌ ಮೇಲೆ ಕೇಂದ್ರ ಸರ್ಕಾರ ಹಾಕಿರುವ ನಿರ್ಬಂಧಗಳ ಕುರಿತು ಪ್ರತಿಕ್ರಿಯಿಸಿ, ಈ ಸಂದರ್ಭದಲ್ಲಿ ಸರ್ಕಾರದ ನಿರ್ಧಾರಗಳನ್ನು ಪರಾಮರ್ಶಿಸುವುದಿಲ್ಲ. ಅಲ್ಲದೆ, ಹುಳುಕನ್ನೂ ಹುಡುಕುವ ಸಮಯ ಇದಲ್ಲ. ನಾವು ಕೇವಲ ಟೀಕೆ ಮಾಡುತ್ತಾ ಹೋದರೆ ಫಲಿತಾಂಶ ಸರಿಯಾಗಿ ಬರುವುದಿಲ್ಲ. ಕೇಂದ್ರ ಸರ್ಕಾರ ಕೆಲ ನಿರ್ಧಾರ ತೆಗೆದುಕೊಂಡಿದ್ದು, ಅದರ ಫಲಿತಾಂಶ ಉತ್ತಮವಾಗಿರಬೇಕಷ್ಟೇ ಎಂದು ಹೇಳಿದರು.

ಸರ್ವಪಕ್ಷ ಸಭೆಗೆ ಪಿಎಂ ಗೈರು, ಅಸಮಾಧಾನ:

ಪಹಲ್ಗಾಂ ದಾಳಿ ವಿಚಾರವಾಗಿ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿತ್ತು. ಆದರೆ, ಸಭೆಗೆ ಪ್ರಧಾನಿ ಮೋದಿ ಅವರು ಹಾಜರಾಗಲಿಲ್ಲ. ಅವರ ಈ ವರ್ತನೆ ಸರಿಯಲ್ಲ. ಸರ್ವಪಕ್ಷ ಸಭೆಗೆ ಹಾಜರಾಗದ ಪ್ರಧಾನಿ ಬಿಹಾರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಇದು ಅವರಿಗೆ ದುಷ್ಕೃತ್ಯದ ಗಂಭೀರತೆಯ ಅರಿವಿಲ್ಲ ಎಂಬ ಅರ್ಥ ಕೊಡುತ್ತದೆ. ಉಗ್ರರ ದಾಳಿಗೆ ಯಾರು ಹೊಣೆ ಹೊತ್ತಿದ್ದಾರೆ? ಏತಕ್ಕಾಗಿ ನಡೆಯಿತು? ಭದ್ರತಾ ಲೋಪವೇ, ಗುಪ್ತಚರ ಲೋಪವೇ ಹೀಗೆ ಯಾರ ಲೋಪ ಎಂಬುದನ್ನು ಸರ್ವಪಕ್ಷ ಸಭೆಯಲ್ಲಿ ಪ್ರಧಾನಿಗಳು ಹೇಳಬೇಕಿತ್ತು. ಆದರೆ, ಪ್ರಧಾನಿ ಅವರೇ ಬರಲಿಲ್ಲ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಸಭೆ ನಡೆಸಲಾಯಿತು ಎಂದು ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.