ಬುದ್ದ ಗಯಾದ ಮಹಾವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲ

| Published : Sep 18 2024, 01:48 AM IST

ಬುದ್ದ ಗಯಾದ ಮಹಾವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಬುದ್ಧ ಗಯಾದ ಮಹಾಬೋಧಿ ಮಹಾವಿಹಾರದ ಮುಕ್ತಿ ಆಂದೋಲನ ಬೆಂಬಲಿಸಿ ಮಂಗಳವಾರ ಭಾರತೀಯ ಬೌದ್ದ ಮಹಾಸಭಾ ಚಿತ್ರದುರ್ಗ ಜಿಲ್ಲಾ ಶಾಖೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಬುದ್ಧ ಗಯಾದ ಮಹಾಬೋಧಿ ಮಹಾವಿಹಾರದ ಮುಕ್ತಿ ಆಂದೋಲನ ಬೆಂಬಲಿಸಿ ಮಂಗಳವಾರ ಭಾರತೀಯ ಬೌದ್ದ ಮಹಾಸಭಾ ಚಿತ್ರದುರ್ಗ ಜಿಲ್ಲಾ ಶಾಖೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಭಾರತೀಯ ಬೌದ್ದ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ, ಪಾಟ್ನಾ ಗಾಂಧಿ ಮೈದಾನದಲ್ಲಿ ಮಹಾಬೋಧಿ ಮಹಾವಿಹಾರವನ್ನು ವಿದೇಶಿ ಬ್ರಾಹ್ಮಣರ ಜಂಜಾಟದಿಂದ ಮುಕ್ತಿಗೊಳಿಸುವಂತೆ ಒತ್ತಾಯಿಸಿ ಸುಮಾರು ಐದು ಲಕ್ಷ ಜನರ ಬೃಹತ್ ಸಾರ್ವಜನಿಕ ಶಾಂತಿ ಸಭೆ ನಡೆಯುತ್ತಿದೆ. ಚಿತ್ರದುರ್ಗ ಜಿಲ್ಲೆಯಿಂದ ಅದಕ್ಕೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದರು. ಮಹಾಬೋಧಿ ದೇವಾಲಯ ಕಾಯ್ದೆ- 1949 ಜಾರಿಗೊಳಿಸುವ ಮೂಲಕ ಮನುವಾದಿ ಜನರು ಮಹಾ ವಿಹಾರವನ್ನು ಅಕ್ರಮವಾಗಿ ಸ್ವಾಧೀನ ಪಡಿಸಿ ಕೊಂಡಿದ್ದಾರೆ. ಮಹಂತ್ ಬ್ರಾಹ್ಮಣರ ಕೊಠಡಿಯೊಳಗೆ ಅಡಗಿರುವ ಬೌದ್ದ ರಾಜರ ಶಾಸನಗಳ ಜತೆಗೆ ನೂರಾರು ಬುದ್ದನ ವಿಗ್ರಹಗಳನ್ನು ಮುಕ್ತಗೊಳಿಸಬೇಕು. ಬ್ರಾಹ್ಮಣರು ಜಗನ್ನಾಥ ಮಂದಿರ ನಿರ್ಮಿಸಿರುವ ಮಹಾಬೋಧಿ ಮಹಾವಿಹಾರ ಆವರಣದಲ್ಲಿರುವ ಭೂಮಿಯನ್ನು ಮುಕ್ತಗೊಳಿಸಬೇಕು. ಶಂಕರಚಾರ್ಯರ ಮಠದ ಹೆಸರಿನಲ್ಲಿ ಮಹಾಬೋಧಿ ವಿಹಾರದ ಮುಂಭಾಗ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.ವಕೀಲ ಎನ್. ಚಂದ್ರಪ್ಪ ಮಾತನಾಡಿ, ಹಿಂದೂಗಳ ಆರಾಧನಾ ಸ್ಥಳದ ಅಧಿಕಾರ ಹಿಂದೂಗಳಿಗೆ, ಮುಸ್ಲೀಮರ ಆರಾಧಾನ ಸ್ಥಳದ ಅಧಿಕಾರ ಮುಸ್ಲೀಮರಿಗೆ , ಕ್ರೈಸ್ತರ ಆರಾಧನಾ ಸ್ಥಳದ ಅಧಿಕಾರ ಕೈಸ್ತರಿಗೆ, ಆದರೆ ಬೌದ್ದರ ಆರಾಧನಾ ಸ್ಥಳದ ಅಧಿಕಾರವೇಕೆ ಹಿಂದೂಗಳ ಕೈಗೆ? ಎಂದು ಪ್ರಶ್ನಿಸಿದರು. ಬುದ್ದ ಗಯಾದ ಬೌದ್ದವಿಹಾರ ಬೌದ್ದರದು ಎಂದರು.ಡಿಎಸ್‍ಎಸ್ ರಾಜ್ಯಾಧ್ಯಕ್ಷ ತುರುವನೂರು ವೈ. ರಾಜಣ್ಣ ಮಾತನಾಡಿ, ಪ್ರಧಾನ ಮಂತ್ರಿಗಳು ಬೌದ್ದರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾದರೆ ಅಂತರಾಷ್ಟ್ರೀಯ ನ್ಯಾಯಾಲಯದ ಮೂಲಕ ನ್ಯಾಯ ಪಡೆಯಲು ಬೌದ್ದರೆಲ್ಲರೂ ಪ್ರಯತ್ನಿಸಬೇಕಾಗುತ್ತದೆ ಎಂದರು.ಬಿ. ಕೃಷ್ಣಪ್ಪ ಬಣದ ಡಿಎಸ್‍ಎಸ್ ರಾಜ್ಯಾಧ್ಯಕ್ಷ ಪಾಂಡುರಂಗಯ್ಯ ಮಾತನಾಡಿ, ಬೌದ್ದ ವಿಹಾರದಲ್ಲಿ ಬೌದ್ದರಿಗೆ ಪ್ರಾರ್ಥನೆ ಮಾಡುವ ಹಕ್ಕನ್ನು ನಿರಾಕರಿಸುವ ಮೂಲಕ ಸಂವಿಧಾನ ಕೊಡ ಮಾಡಿರುವ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ. ಇಂದು ದೇಶದ ಮೂಲೆ ಮೂಲೆಯಲ್ಲಿ ಮೂಲನಿವಾಸಿಗಳು, ಅಂಬೇಡ್ಕರ್ ಅನುಯಾಯಿಗಳು ಬೌದ್ದಧರ್ಮವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಬಗೆಹರಿಸಬೇಕಾದುದು ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಪ್ರಧಾನಿ ಮಂತ್ರಿಗಳ ಜಾವಾಬ್ದಾರಿಯಾಗಿದೆ ಎಂದರು. ನೀತಿಗೆರೆ ಮಂಜಪ್ಪ, ಜನಶಕ್ತಿ ರಾಜ್ಯ ಕಾರ್ಯದರ್ಶಿ ಶಫೀವುಲ್ಲಾ, ರಮೇಶ್ ತೋರಣಗಟ್ಟೆ, ಬೆಸ್ಕಾಂ ತಿಪ್ಪೇಸ್ವಾಮಿ, ಬನ್ನೀಕೋಡ್ ರಮೇಶ್ ಇತರರಿದ್ದರು.