ಗ್ಯಾರಂಟಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಹರಿಸಿ: ಸಿ.ಎಸ್.ಚಂದ್ರಭೂಪಾಲ್

| Published : Sep 01 2024, 02:01 AM IST

ಗ್ಯಾರಂಟಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಹರಿಸಿ: ಸಿ.ಎಸ್.ಚಂದ್ರಭೂಪಾಲ್
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿಯಲ್ಲಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನಷ್ಠಾನ ಸಮಿತಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗ್ಯಾರಂಟಿ ಯೋಜನೆಗಳನ್ನು ಪರಿಣಾಮಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ಅನುಕೂಲ ಮಾಡಿ ಕೊಡಬೇಕು. ಇದಕ್ಕೆ ಅಧಿಕಾರಿಗಳು ಸಹಕರಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ಶನಿವಾರ ಜಿಲ್ಲಾ ಪಂಚಾಯಿತಿಯಲ್ಲಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 3,85,195 ಮಹಿಳೆಯರು ನೋಂದಣಿಯಾಗಿದ್ದು, 3,80,997 ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ರೂ.2000 ಜಮಾ ಮಾಡಲಾಗಿದೆ. ಜೂನ್ ಮಾಹೆಯಲ್ಲಿ 3,80,997 ಮಹಿಳೆಯರಿಗೆ ಒಟ್ಟು 76,19,94,000 ಹಣವನ್ನು ಜಮಾ ಮಾಡಲಾಗಿದೆ. ಆಧಾರ್ ಜೋಡಣೆ, ಹೆಸರು ಮಿಸ್‌ ಮ್ಯಾಚ್ ಸೇರಿದಂತೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಎನ್‌ಪಿಸಿಐ ಫೇಲ್ ಆಗಿ 2,767 ಫಲಾನುಭವಿಗಳಿಗೆ ಹಣ ಜಮಾ ಆಗಿರುವುದಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್ ತಿಳಿಸಿದರು.

ಅಧ್ಯಕ್ಷರು ಪ್ರತಿಕ್ರಿಯಿಸಿ, ಮುಂದಿನ ಸಭೆಯೊಳಗೆ ಎನ್‌ಪಿಸಿಐ ಫೇಲ್ ಆಗಿರುವ 2,676 ಮಹಿಳೆಯರಿಗೆ ಯೋಜನೆಯ ಫಲ ಸಿಗುವಂತೆ ಮಾಡಲು ಪ್ರಯತ್ನಿಸಬೇಕು. ತಾಲೂಕುವಾರು ಸಿಡಿಪಿಒಗಳಿಂದ ವರದಿ ತರಿಸಿಕೊಂಡು ಸಮಿತಿಗೆ ನೀಡಬೇಕು ಎಂದರು.

ಜಿ.ಪಂ ಸಿಇಒ ಹೇಮಂತ್ ಮಾತನಾಡಿ, ಎನ್‌ಪಿಸಿಐ ಫೇಲ್ ಆಗಿರುವುದಕ್ಕೆ ತಾಲ್ಲೂಕುವಾರು ಕಾರಣಗಳನ್ನು ಹುಡುಕಿ ಪ್ರಾಮಾಣಿಕವಾಗಿ ಸರಿಪಡಿಸುವ ಕೆಲಸ ಆಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ಮರಣ ಹೊಂದಿದ ಫಲಾನುಭವಿಗಳ ಮಾಹಿತಿಯನ್ನು ಬ್ಯಾಂಕಿನಿಂದ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಶಕ್ತಿ ಯೋಜನೆಯಡಿ ಶಿವಮೊಗ್ಗ ವಿಭಾಗದಲ್ಲಿ ಈವರೆಗೆ 2.86 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಶೇ.60.3 ಮಹಿಳೆ ಯರು ಪ್ರಯಾಣ ಮಾಡಿದ್ದು 99.46 ಕೋಟಿ ಅಂದರೆ ಶೇ.42.7 ಆದಾಯ ಈ ಯೋಜನೆಯಿಂದ ಬಂದಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ದಿನೇಶ್ ಕುಮಾರ್ ಮಾಹಿತಿ ನೀಡಿದರು.

ಆಹಾರ ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಅವಿನ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 389241 ಬಿಪಿಎಲ್ ಕಾರ್ಡುದಾರರು ಇದ್ದು 360012 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಡಿ ತಿಂಗಳಿಗೆ ಐದು ಕೆಜಿ ಅಕ್ಕಿ ಹಾಗೂ ರಾಜ್ಯದ 5 ಕೆಜಿ ಅಕ್ಕಿ ಬದಲಾಗಿ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಪಡೆಯುತ್ತಿದ್ದು ಒಟ್ಟು 20.30 ಕೋಟಿ ಹಣವನ್ನು ಜೂನ್‌ವರೆಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಮಿತಿ ಸದಸ್ಯರು ಮಾತನಾಡಿ, ನ್ಯಾಯಬೆಲೆ ಅಂಗಡಿಗಳು ತಿಂಗಳ ಕೊನೆಯಲ್ಲಿ ಅದೂ 3 ರಿಂದ 4 ದಿನ ಮಾತ್ರ ತೆರೆದಿ ರುತ್ತವೆ. ಕೆಲವೊಮ್ಮೆ ಪಡಿತರ ಖಾಲಿಯಾಗಿದೆ ಎಂದು ಹೇಳಿ ಕಳಿಸುತ್ತಾರೆಂದು ದೂರಿದರು.

ದಾಸ್ತಾನು ಲಿಫ್ಟ್ ಆಗಿ ತಿಂಗಳ 10ನೇ ತಾರೀಖಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ನೀಡಲು ಆರಂಭವಾಗುತ್ತದೆ. ಪ್ರತಿ ದಿನ ಪಡಿತರ ನೀಡಬೇಕು. ಖಾಲಿಯಾಗಿದೆ ಎಂದು ವಾಪಸ್ ಕಳುಹಿಸುವ ಹಾಗಿಲ್ಲ. ಅಂತಹ ಪ್ರಕರಣಗಳಿದ್ದರೆ ತಿಳಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಜಿಲ್ಲೆಯಲ್ಲಿ ಜಾಗೃತ ಸಮಿತಿ ರಚನೆಯಾಗಿದ್ದು ಅದೂ ಕೂಡ ನ್ಯಾಯಬೆಲೆ ಅಂಗಡಿಗಳ ಮೇಲ್ವಿಚಾರಣೆ ಮಾಡುತ್ತದೆ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 537616 ಗ್ರಾಹಕರಿದ್ದು, 475802 ಗ್ರಾಹಕರು ಯೋಜನೆಯ ಸದುಪಯೋಗ ಪಡೆಯುತ್ತಿದ್ದು ರೂ.226.49 ಕೋಟಿ ಸಹಾಯಧನ ಪಡೆಯಲಾಗಿದೆ ಎಂದು ಮೆಸ್ಕಾಂ ಅಧೀಕ್ಷಕ ಅಭಿಯಂತರ ಕೃಷ್ಣಮೂರ್ತಿ ತಿಳಿಸಿದರು.

ಯುವ ನಿಧಿ ಯೋಜನೆಯಡಿ ಈವರೆಗೆ 5636 ಅಭ್ಯರ್ಥಿಗಳು ನೋಂದಣಿಯಾಗಿದ್ದು ಜುಲೈ ಮಾಹೆವರೆಗೆ 1634 ಫಲಾನುಭವಿ ಗಳಿಗೆ 48,82,000 ರು. ಹಣ ವರ್ಗಾವಣೆ ಮಾಡಲಾಗಿದೆ ಎಂದು ಮಂಜುನಾಥ್ ತಿಳಿಸಿದರು

ಭದ್ರಾವತಿ, ಶಿಕಾರಿಪುರ ಸೇರಿದಂತೆ ತಾಲ್ಲೂಕುಗಳಲ್ಲಿ ಸಮಿತಿಯ ಕಚೇರಿಗಳಲ್ಲಿ ಮೂಲಭೂತ ಸೌಕರ್ಯವಿಲ್ಲ. ಹಾಗೂ ಓರ್ವ ಡಾಟಾ ಎಂಟ್ರಿ ಆಪರೇಟರ್, ಕಂಪ್ಯೂಟರ್ ವ್ಯವಸ್ಥೆ ಮಾಡಿಕೊಡಬೇಕು. ತಾಲ್ಲೂಕುಗಳಲ್ಲಿನ ಗ್ಯಾರಂಟಿ ಯೋಜನೆ ಕುರಿತು ಕುಂದು ಕೊರತೆ ಆಲಿಸಲು ಹೆಲ್ಪ್ಲೈನ್ ರೀತಿಯಲ್ಲಿ ಕೆಲಸ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ತಾಲೂಕು ಸಮಿತಿಗಳ ಅಧ್ಯಕ್ಷರು, ಸದಸ್ಯರು ತಿಳಿಸಿದರು.

ಜಿ.ಪಂ ಸಿಇಒ ಮಾತನಾಡಿ, ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಯಡಿ ಎನ್‌ಪಿಸಿಐ ಫೇಲ್ ಆಗಿರುವ ಫಲಾನುಭವಿ ಗಳನ್ನು ಲಿಂಕ್ ಮಾಡಬೇಕು. ತಾಲೂಕುಗಳ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಇಓ ಗಳು ಒದಗಿಸಲು ಕ್ರಮ ವಹಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ದಾಸ್ತಾನು ವಿವರ ಹಾಕಲು ಕ್ರಮ ಹಾಗೂ ಯುವ ನಿಧಿ ಯೋಜನೆಯಡಿ ಜುಲೈ ಮಾಹೆಯಲ್ಲಿ ಸೊರಬ ಮತ್ತು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಫಲಾನುಭವಿಗಳ ವಿವರ ಸಮರ್ಪಕವಾಗಿಲ್ಲ. ಈ ಮಾಹಿತಿಯನ್ನು ಒಂದು ವಾರದೊಳಗೆ ನೀಡುವಂತೆ ಸೂಚಿಸಿದರು.

ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಅಧ್ಯಕ್ಷ ಸೂರಜ್ ಹೆಗಡೆ ಮಾತನಾಡಿ, ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪಂಚಾಯ್ತಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದು ಪಟ್ಟಿ ಮಾಡಿ ತಿಳಿಸುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕುಗಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.