ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಗಳಿಂದ 4,500 ರು ಹಾಗೂ ರಾಜ್ಯ ಸರ್ಕಾರದಿಂದ ಎಸ್ಎಪಿ ರೂಪದಲ್ಲಿ 1,000 ಸೇರಿ ಒಟ್ಟು 5,500 ರು. ನಿಗದಿಪಡಿಸಲು ರೈತರು ಒತ್ತಾಯಿಸುತ್ತಿದ್ದಾರೆ. ಆದರೆ, ಸರ್ಕಾರ ಅಂತಿಮ ಬೆಲೆ ಘೋಷಣೆಯಾಗಿಲ್ಲ. ನಿನ್ನೆ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಬೆಲೆ ನಿಗದಿ ಕುರಿತು ಅಂತಿಮ ತೀರ್ಮಾನ ಹೊರಬಿದ್ದಿಲ್ಲ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಕಬ್ಬಿಗೆ ಸೂಕ್ತ ಬೆಲೆ ನಿಗದಿಗೆ ಕಳೆದ ಒಂದು ತಿಂಗಳಿನಿಂದ ಉತ್ತರ ಕರ್ನಾಟಕ ಭಾಗದ ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಎತ್ತಿನಗಾಡಿಗಳನ್ನು ಅಡ್ಡಲಾಗಿ ನಿಲ್ಲಿಸಿ ರಸ್ತೆ ತಡೆ ನಡೆಸಿ ರೈತರು ಪ್ರತಿಭಟನೆ ನಡೆಸಿದರು.ರೈತರು ಹಮ್ಮಿಕೊಂಡಿದ್ದ ಜೈಲ್ ಭರೋ ಚಳವಳಿ ತಡೆಯಲು ಮುಂಜಾಗ್ರತಾ ಕ್ರಮವಾಗಿ ರೈತ ಮುಖಂಡರಾದ ಚೂವನಪ್ಪ ಪೂಜಾರಿ ಹಾಗೂ ಶಶಿಕಾಂತ್ ಪಡಸಾಲಗಿ ಅವರನ್ನು ಪೊಲೀಸರು ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಗಳಿಂದ 4,500 ರು ಹಾಗೂ ರಾಜ್ಯ ಸರ್ಕಾರದಿಂದ ಎಸ್ಎಪಿ ರೂಪದಲ್ಲಿ 1,000 ಸೇರಿ ಒಟ್ಟು 5,500 ರು. ನಿಗದಿಪಡಿಸಲು ರೈತರು ಒತ್ತಾಯಿಸುತ್ತಿದ್ದಾರೆ. ಆದರೆ, ಸರ್ಕಾರ ಅಂತಿಮ ಬೆಲೆ ಘೋಷಣೆಯಾಗಿಲ್ಲ. ನಿನ್ನೆ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಬೆಲೆ ನಿಗದಿ ಕುರಿತು ಅಂತಿಮ ತೀರ್ಮಾನ ಹೊರಬಿದ್ದಿಲ್ಲ ಎಂದು ಕಿಡಿಕಾರಿದರು.ರೈತರ ಬೆವರಿನ ಶ್ರಮದಿಂದ ಉತ್ಪಾದನೆಯಾಗುವ ಕಬ್ಬಿಗೆ ನ್ಯಾಯಯುತ ಬೆಲೆ ಕೊಡಿಸಲು ಜನಪ್ರತಿನಿಧಿಗಳಿಗೆ ಸಾಧ್ಯವಾಗುತ್ತಿಲ್ಲ. ಶಾಸಕರು, ಸಚಿವರುಗಳಿಗೆ ರೈತರ ಹಿತಕ್ಕಿಂತ ಸಕ್ಕರೆ ಕಾರ್ಖಾನೆಗಳ ಹಿತವೇ ಸರ್ಕಾರಕ್ಕೆ ಮುಖ್ಯವಾಗಿದೆ ಎಂದು ದೂರಿದರು.
ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ರೈತರು ಕಳೆದ ಒಂದು ತಿಂಗಳಿನಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರಕ್ಕೆ ರೈತರ ನೋವು ಅರ್ಥವಾಗುತ್ತಿಲ್ಲ. ಕಬ್ಬು ಬೆಳೆಸಲು ರೈತರು ಮಾಡಿದ ಖರ್ಚು, ಶ್ರಮ ಹಾಗೂ ಸಾಲದ ಹೊರೆ ಯಾರಿಗೂ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.ಪ್ರತಿ ಟನ್ ಕಬ್ಬಿಗೆ 4,500 ರು, ಸರ್ಕಾರದಿಂದ 1,000 ರು. ಎಸ್ಎಪಿ ಸೇರಿ ಒಟ್ಟು 5,500 ನೀಡಬೇಕೆಂಬುದು ನಮ್ಮ ಬೇಡಿಕೆ. ಆದರೆ, ಈವರೆಗೂ ಸರ್ಕಾರ ಅಂತಿಮ ಬೆಲೆ ಘೋಷಿಸಿಲ್ಲ. ರೈತರ ಪರ ಧ್ವನಿ ಎತ್ತಬೇಕಾದ ಶಾಸಕರು, ಸಚಿವರು ಮೌನವಾಗಿರುವುದು ಏಕೆ ಎಂದು ಕಿಡಿಕಾರಿದರು.
ಹೋರಾಟವನ್ನು ಹತ್ತಿಕ್ಕಲು ಮುಖಂಡರನ್ನು ಬಂಧಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ರೈತರ ಹೋರಾಟ ಲ್ಲಿಸಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ ರೈತರ ಬೇಡಿಕೆಗೆ ಸ್ಪಂದಿಸಿ ಕಬ್ಬಿನ ಬೆಲೆ ನಿಗದಿಪಡಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಜಿಲ್ಲೆಯ ಸಂಸದರು ರೈತರ ಸಂಕಷ್ಟದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ರೈತರ ಪರ ಧ್ವನಿ ಎತ್ತಿ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಸಂಸದರು ಮಾಡುತ್ತಿಲ್ಲ. ಇವರಿಗೆ ರೈತರ ಹಿತಕ್ಕಿಂತ ಸ್ಟಿಂಗ್ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಮತಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ರೈತರ ಸಂಕಷ್ಟದ ಸಮಯದಲ್ಲಿ ಅವರ ಬೆನ್ನಿಗೆ ನಿಲ್ಲದಿದ್ದರೆ ನಮ್ಮ ಧ್ವನಿ ಎತ್ತುವವರು ಯಾರು?, ಸಂಸದರು ಕೂಡಲೇ ಸರ್ಕಾರದ ಗಮನ ಸೆಳೆಯಬೇಕು ಎಂಬ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಖಜಾಂಚಿ ಕೆ.ಶೆಟ್ಟಹಳ್ಳಿ ರವಿಕುಮಾರ್ , ಸಿದ್ದರಾಜು, ಮರಿಸ್ವಾಮಿ, ರಮೇಶ್, ಚಿಕ್ಕೇಗೌಡ, ಮಹದೇವು, ದೇ.ಶಿ.ಗೌಡ, ರಾಜೇಶ್, ಕೃಷ್ಣಪ್ಪ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.